ಚಳಿಗಾಲ ಕಳೆದು ವಸಂತ ಕಾಲಿಟ್ಟಾಗ ಬೆಳ್ಳಗಿನ ಮಂಜಿನ ಹೊದಿಕೆಯನ್ನು ಸರಿಸಿ ಪ್ರಕೃತಿಯೂ ತನ್ನ ಸೌಂದರ್ಯವನ್ನು
ಪ್ರದರ್ಶಿಸುತ್ತದೆ. ಬೀದಿಬೀದಿಗಳಲ್ಲಿರುವ ಪ್ರತಿಯೊಂದು ಗಿಡ ಮರಗಳು ಬಣ್ಣಬಣ್ಣದ ಹೂವುಗಳಿಂದ ಶೃಂಗಾರಗೊಂಡಂತೆ ಭಾಸವಾಗುತ್ತದೆ. ನೋಡಲು ಕಣ್ಣಿಗೆ ಹಬ್ಬದಂತಿರುತ್ತದೆ. ಧರೆಯೇ ಸ್ವರ್ಗದಂತೆ ಭಾಸವಾಗುತ್ತದೆ. ಅದರಲ್ಲೂ ನೆದರ್‌ಲ್ಯಾಂಡ್
ಪ್ರತಿಯೊಂದು ಬೀದಿಯಲ್ಲೂ ಸುಗಂಧ ದ್ರವ್ಯ ಚೆಲ್ಲಿಕೊಂಡು ಹೂವುಗಳು ನಗುನಗುತ್ತಾ ಬರುವವರನ್ನೆಲ್ಲ ಸ್ವಾಗತಿಸುತ್ತಿರುತ್ತದೆ.
ಚಳಿಗಾಲದಲ್ಲಿ ವಿರಾಗಿಗಳಂತೆ ತನ್ನೆಲ್ಲ ಹಸುರು ಎಲೆಗಳನ್ನು ಉದುರಿಸಿ ಬೆತ್ತಲೆಯಾಗಿ ನಿಂತಿದ್ದ ಮರಗಳು ಒಂದು ಕಡೆಯಾದರೆ, ಮುಂಬರಲಿರುವ ಬೇಸಗೆಯನ್ನು ಸ್ವಾಗತಿಸಲು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ನಿಂತ ಬಣ್ಣ ಬಣ್ಣದ ಹೂವುಗಳಿಂದ ಇನ್ನೊಂದೆಡೆ…ನೆದರ್‌ಲ್ಯಾಂಡ್‌ನ ಯಾವುದೇ ಬೀದಿಗೆ ಹೋದರೂ ಕಣ್ಮನ ಸೆಳೆಯುವ, ಮನಸಿಗೆ ಮುದ ನೀಡುವ ಗುಲಾಬಿ, ಕೆಂಪು, ಹಳದಿ, ಬಿಳಿ ಬಣ್ಣದ ಹೂವುಗಳು ರಸ್ತೆಯ ಇಕ್ಕೆಲಗಳಲ್ಲಿ ಬಂದವರನ್ನೆಲ್ಲ ಸ್ವಾಗತಿಸುತ್ತಿರುತ್ತದೆ.
ಚೆರ್ರಿ, ಪೀರ್, ಹ್ಯಾತ್ರೋನ್, ಕ್ವಿನ್ಸ್, ಜಪಾನ್ಸ್ ಚೆರ್ರಿ, ಪ್ಲೂಮ್…ಹೀಗೆ ಅನೇಕ ಜಾತಿಯ ಮರಗಳು ವಸಂತ ಕಾಲದಲ್ಲಿ ಹೂವುಗಳನ್ನು ಅರಳಿಸಿಕೊಂಡು ಸಂಪೂರ್ಣ ನೆದರ್‌ಲ್ಯಾಂಡ್‌ನ ಬೀದಿಗಳನ್ನು ಸಿಂಗರಿಸಿ ಬಿಡುತ್ತವೆ. ಎಲ್ಲೇ ಹೋದರೂ ಒಂದು ರೀತಿಯ ಆಹ್ಲಾದಕರ ವಾತಾವರಣ ಕಾಣಸಿಗುತ್ತದೆ. ಹೂವನ್ನು ಪ್ರೀತಿಸುವವರಿಗಂತೂ ನೆದರ್‌ಲ್ಯಾಂಡ್ ಸ್ವರ್ಗವೇ ಸರಿ. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಮತ್ತು ಅತೀ ದೊಡ್ಡದಾದ ಹೂತೋಟವಿರುವುದು ನೆದರ್‌ಲ್ಯಾಂಡ್ ಆರ್ಮಸ್ಟರ್‌ಡ್ಯಾಮ್‌ನಲ್ಲಿ.
ಅತ್ಯಂತ ಸುಂದರವಾದ ಹೂಗಳ ಬಂಡಾರವನ್ನೇ ತುಂಬಿಕೊಂಡಿರುವ ಆ ಹೂತೋಟದ ಹೆಸರು ಕೂಕೆನ್ ಹಾಫ್. ಇಲ್ಲಿರುವ ವೈವಿಧ್ಯ ಹೂಗಿಡಗಳ ರಾಶಿ ಮತ್ತು ಕಿಲೋ ಮೀಟರ್ ದೂರದಷ್ಟು ಬಣ್ಣ ಬಣ್ಣದ ಚಾದರ ಹಾಸಿದಂತೆ ಕಾಣುವ ತುಲಿಪ್ ಹೂಗಳು ಪ್ರತಿಯೊಬ್ಬರ ಮನಸೆಳೆಯುತ್ತವೆ.
ಪ್ರಪಂಚದ ಮೂಲೆ ಮೂಲೆಗಳಿಂದ ಜನರು ಈ ಹೂತೋಟವನ್ನು ಕಣ್ತುಂಬಿಕೊಳ್ಳಲು ಎಪ್ರಿಲ್ ತಿಂಗಳ ಪ್ರಾರಂಭದಿಂದ ಮೇ ತಿಂಗಳ ಮೊದಲ ವಾರದಲ್ಲಿ ಕೂಕೆನ್ ಹಾಫ್ ಗೆ ಬರುತ್ತಾರೆ. ಕೂಕೆನ್ ಹಾಫ್ ಎಂಬ ಹೂತೋಟ ಆರ್ಮ್ಸ್ಟರ್ ಡ್ಯಾಮ್ ನಗರದಿಂದ ಕೆಲವೇ ಕಿಲೋ ಮೀಟರ್‌ಗಳ ದೂರದಲ್ಲಿರುವ ಲಿಸ್ ಎಂಬ ನಗರದಲ್ಲಿದೆ. ಪ್ರಪಂಚದ ಎರಡನೇ ಅತೀ ದೊಡ್ಡ ಹೂತೋಟ ಎಂದು ಹೆಸರು ಮಾಡಿರುವ ಕೂಕೆನ್ ಹಾಫ್ ಸರಿ ಸುಮಾರು ಎಪ್ಪತ್ತೂಂಬತ್ತು ಎಕರೆ ಜಾಗದಷ್ಟು ವಿಶಾಲವಾಗಿದೆ. ಇದನ್ನು ಗಾರ್ಡನ್ ಆಫ್ ಯೂರೋಪ್ ಎಂದೂ ಕರೆಯುತ್ತಾರೆ. ಕೇವಲ ಕೆಲವೇ ಕೆಲವು ವಾರಗಳ ಕಾಲ ಅಂದರೆ ಎಂಟರಿಂದ ಒಂಬತ್ತು ವಾರಗಳು ಮಾತ್ರ ಈ ಹೂತೋಟ ಸಾರ್ವಜನಿಕರಿಗೆ ತೆರೆಯುವುದರಿಂದ ಪ್ರತಿ ದಿನ ವಿಪರೀತ ಜನ ಜಂಗುಳಿ ಇರುತ್ತದೆ. ವಾರಗಟ್ಟಲೆ ಮೊದಲೇ ಮುಂಗಡವಾಗಿ ನೀವು ಟಿಕೆಟ್ ಖರೀದಿ ಮಾಡಿಕೊಂಡು ಅಲ್ಲಿಗೆ ಭೇಟಿ ನೀಡುವ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ವಿಶಾಲವಾದ ಈ ಹೋತೋಟವನ್ನು ಸಂಪೂರ್ಣವಾಗಿ ಪರಾಂಬರಿಸಿ ನೋಡಲು ಒಂದು ದಿನದ ಕಾಲಾವಕಾಶ ಖಂಡಿತ ಬೇಕಾಗುವುದು.
ಕೂಕೆನ್ ಹಾಫ್ ಟುಲಿಪ್ ಹೂವುಗಳಿಗೆ ಹೆಸರುವಾಸಿಯಾಗಿದ್ದರು ಈ ಹೂತೋಟದಲ್ಲಿ ನಮಗೆ ಹೈಸಿಂಥಸ್, ಡೆಫೋಡಿಲ್ಸ್, ಲಿಲ್ಲೀಸ್, ರೋಸಸ್, ಕಾರ್ನಷನ್ಸ್…, ಐರಿಸೆಸ್ ಎಂಬ ಹೆಸರಿನ ಅನೇಕ ಹೂಗಳನ್ನು ಕಾಣಬಹುದು. ಸುಮಾರು ಎಪ್ಪತ್ತು ಲಕ್ಷ ಟುಲಿಪ್ ಗೆಡ್ಡೆಗಳನ್ನು ನೆಟ್ಟು ತುಲಿಪ್ ಹೂವುಗಳನ್ನು ಬೆಳೆಸುತ್ತಾರೆ. ಬಣ್ಣ ಬಣ್ಣದ ಹೂವುಗಳು, ಹೂವುಗಳಿಂದಲೇ ಮಾಡಿದ ಕಲಾಕೃತಿಗಳು, ಹರಿಯುವ ತೊರೆಯ ಅಕ್ಕ ಪಕ್ಕ ಬೆಳೆಸಿದ ಹೂವುಗಳ ರಾಶಿ, ಸಮೃದ್ಧವಾಗಿ ಬೆಳೆದು ನಿಂತ ಮರಗಳ ನಡುವೆ ಬೆಳೆದ ಗುಲಾಬಿ ತೋಟಗಳು, ಲಿಲ್ಲಿ ಹಾಗೂ ಡೆಫೋಡಿಲ್ ಹೂವುಗಳ ಸೌಂದರ್ಯವನ್ನು ಸವಿಯುತ್ತ ದಿನ ಕಳೆಯುವುದು ಗೊತ್ತೇ ಆಗುವುದಿಲ್ಲ. ದಿನವಿಡೀ ಸುತ್ತಿದರೂ ಹೂವುಗಳ ಸೌಂದರ್ಯ ಮನ ಸೋಲಿಸಿದರೂ ಕಾಲುಗಳು ಮಾತ್ರ ಎಷ್ಟು ನಡೆದರೂ ಸೋಲುವುದಿಲ್ಲ.
ಇಲ್ಲಿರುವ ಮ್ಯೂಸಿಯಂಗಳಲ್ಲಿ ಕೂಕೆನ್ ಹಾಫ್ ತೋಟದ ಇತಿಹಾಸ, ಟುಲಿಪ್ ಹೂವುಗಳನ್ನು ಬೆಳೆಸುವ ಪರಿ ಎಲ್ಲವನ್ನು ತಿಳಿ ಹೇಳಲು ವಿಡಿಯೋಗಳನ್ನು ತೋರಿಸಲಾಗುತ್ತದೆ. ಇಷ್ಟವಾದ ಟುಲಿಪ್ ಗೆಡ್ಡೆಗಳನ್ನು ಖರೀದಿ ಮಾಡಲೂ ಅವಕಾಶವಿದೆ. ಹೂತೋಟದ ಮಧ್ಯೆ ಇರುವ ರೆಸ್ಟೋರೆಂಟ್‌ಗಳಲ್ಲಿ ಕುಳಿತು ಕಾಫಿ , ಟೀ ಕುಡಿಯುತ್ತ, ತಿಂಡಿ ತಿನಿಸುಗಳನ್ನು ತಿನ್ನುತ್ತಾ ಹೂವುಗಳ ಸೌಂದರ್ಯವನ್ನು ಸವಿಯುತ್ತ ಕೂರುವುದು ಅದ್ಭುತ ಅನುಭವವನ್ನು ಕೊಡುತ್ತದೆ.
ಪ್ರಪಂಚದ ಎರಡನೇ ಅತೀ ದೊಡ್ಡ ಹೂತೋಟ ಎಂಬ ಹೆಗ್ಗಳಿಕೆ ಮಾತ್ರವಲ್ಲದೆ ಕಣ್ಮನ ಸೆಳೆಯುವ ಬಣ್ಣ ಬಣ್ಣದ ಹೂಗಳ ರಾಶಿಯ ಸವಿಯನ್ನು ಅನುಭವಿಸಲು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಕೂಕೆನ್ ಹಾಫ್ ಹೂತೋಟ ಎನ್ನುವುದಕ್ಕಿಂತ ಹೂಗಳ ಸ್ವರ್ಗ ಎಂದರೆ ತಪ್ಪೇನಿಲ್ಲ.
*ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್