Advertisement
ಕನ್ನಡಿಗರ ಈ ಮಹಾಸಮ್ಮೇಳನದಲ್ಲಿ ಅಮೆರಿಕದ ಮೂಲೆ ಮೂಲೆಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಮಂದಿ ಭಾಗವಹಿಸಿದ್ದರು. ಇವರೆಲ್ಲ ಕನ್ನಡ ನೆಲದಿಂದ ಬಹುದೂರ ಇದ್ದರೂ ತಾವು ಮೆಟ್ಟುವ ನೆಲ ಕರ್ನಾಟಕ ಎಂಬ ಭಾವದಲ್ಲಿದ್ದರು.ಇಡೀ ಸಮ್ಮೇಳನ ಭಾಗವಹಿಸಿದ್ದ ಎಲ್ಲರಿಗೂ ರೋಮಾಂಚನದ ಅನುಭವ ಕೊಟ್ಟಿತು.
Related Articles
Advertisement
ಕನ್ನಡ ಸಿನೆಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲೈವ್ ಸಂಗೀತ ಸಂಜೆಯಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಡಾ| ಶಿವರಾಜ್ ಕುಮಾರ್ ಅಮೆರಿಕದಲ್ಲಿ ಹುಟ್ಟಿ ಬೆಳೆದ ಕನ್ನಡ ಮಕ್ಕಳ ಜತೆ ಮತ್ತು ವಯಸ್ಕರ ಜತೆ ವೇದಿಕೆ ಮೇಲೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಶಿವಣ್ಣ ಮತ್ತು ಅವರ ಪತ್ನಿ ಗೀತಾ ಅಮೆರಿಕದ ಕನ್ನಡಿಗರ ಮಾತೃ ಭಾಷೆಯ ಅಭಿಮಾನವನ್ನು ಮುಕ್ತಕಂಠದಿಂದ ಹೊಗಳಿದರು. ಅರ್ಜುನ್ ಜನ್ಯ ಲೈವ್ ಸಂಗೀತ ಸಂಜೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗ ರಾಜನ್, ಮುಂತಾದ ಗಾಯಕರು ಪ್ರೇಕ್ಷಕರನ್ನು ರಂಜಿಸಿದರು.
ವಲ್ಲೀಶ ಶಾಸ್ತ್ರಿ ನಡೆಸಿಕೊಟ್ಟ “ಪ್ರ„ಮ್ ಟೈಮ್’ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಗೀತಾ ಅವರು ಎಲೆಮರೆಯ ಕಾಯಿಯಂತೆ ಸುಮಾರು 25+ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ “ಶಕ್ತಿಧಾಮ’ ಸಂಸ್ಥೆಯ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಶೋಷಿತ ಮಹಿಳೆಯರ ಮತ್ತು ಅಶಕ್ತ ಅನಾಥ ಮಕ್ಕಳ ಸಶಕ್ತೀಕರಣದ, ಕಲ್ಯಾಣದ ಯೋಚನೆಗಳಾಗಿವೆ ಎಂದರು.
ಆಸ್ಟಿನ್ ಕನ್ನಡ ಸಂಘದ ಅನುಸೂಯ ಪೂಂಜಾ ಅವರ ನೇತೃತ್ವದಲ್ಲಿ 60 ಕನ್ನಡಿಗರ ತಂಡವನ್ನು ಕಟ್ಟಿಕೊಂಡು ತುಳುನಾಡಿನ ಭವ್ಯ ಪರಂಪರೆ, ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ “ತುಳುನಾಡ ಐಸಿರಿ’ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.
ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಸಹೋದರರು “ಕೃಷ್ಣಾ ನೀ ಬೇಗನೆ ಬಾರೋ’ ಎಂದು ಕೃಷ್ಣನನ್ನು ಕರೆದರು! ಸುಶ್ರಾವ್ಯವಾಗಿ “ಹರಿ ಕುಣಿದಾ ನಮ್ಮ ಹರಿ ಕುಣಿದಾ’ ಎಂದು ಶ್ರೀಹರಿಯನ್ನು ಕಣಿಸಿದರು…. ಶಿಶನಾಳ ಶರೀಫಜ್ಜನ ಅನಭಾವವನ್ನು ಹಾಡಿದರು.
ನಾವಿಕೋತ್ಸವದ ಸಲುವಾಗಿ ಆಯೋಜಿಸಿದ್ದ ಪ್ರತಿಷ್ಠಿತ ನಾವಿಕ ಕೋಗಿಲೆ ಗಾಯನ ಸ್ಪರ್ಧೆಯ ವಯಸ್ಕರ ವಿಭಾಗದಲ್ಲಿ ಕ್ಯಾಲಿಫೋರ್ನಿಯಾದ ಅಕ್ಷಯ್ ರಾವ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ಡಲ್ಲಾಸ್ ನಗರದ ನಯನಾ ಪ್ರಸಾದ್ ವಿಜೇತರಾದರು.
ಈ ಸಮ್ಮೇಳನದ ಸ್ಮರಣ ಸಂಚಿಕೆ “ಮಂದಾರ’ ವನ್ನು ಬಿಡುಗಡೆಗೊಳಿಸಲಾಯಿತು. ಕನ್ನಡದ ಖ್ಯಾತ ಲೇಖಕರಾದ ಡಾ| ಗಜಾನನ ಶರ್ಮಾ ಅವರು ಸಂಚಿಕೆಗೆ ವಿಶೇಷ ಲೇಖನವನ್ನು ಬರೆದು ಕೊಡುವುದರೊಂದಿಗೆ ಸಮಾವೇಶಕ್ಕೆ ಆಶಯ ಗೀತೆಯನ್ನು ಬರೆದು ಕೊಟ್ಟಿದ್ದಾರೆ. ವಿವಿಧ ಬರಹಗಳನ್ನೊಳಗೊಂಡ ಈ ಸಂಚಿಕೆ ಸುಮಾರು 260ಕ್ಕೂ ಹೆಚ್ಚಿನ ಪುಟಗಳನ್ನು ಹೊಂದಿದೆ. ಕ್ಯಾಲಿಫೋರ್ನಿಯಾದ ಗುರು ಕೃಷ್ಣಮೂರ್ತಿಯವರು ವಿದ್ವತ್ ಪೂರ್ಣವಾಗಿ ಡಾ| ಗಜಾನನ ಶರ್ಮ ಅವರೊಂದಿಗೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಆಶಿತಾ ಗೋರ್ವಧನ್ ಅವರ ಮುಂದಾಳತ್ವದಲ್ಲಿ ಕರ್ನಾಟಕದ ವಿವಿಧ ಚರಿತ್ರೆ, ಪರಂಪರೆಯನ್ನು ಬಿಂಬಿಸುವ ಪ್ರದರ್ಶನಗಳ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಶಿವಣ್ಣ ದಂಪತಿಗಳು ಭಾಗವಹಿಸಿದ್ದರು. ವಿವಿಧ ವಿಚಾರಗೋಷ್ಠಿ
ಈ ಸಮಾವೇಶದಲ್ಲಿ ಹೂಡಿಕೆದಾರರ ಫೋರಮ್, ವುಮೆನ್ಸ್ ಫೋರಮ್, ಸಾಹಿತ್ಯ ಗೋಷ್ಠಿ , ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್ , ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆದವು. ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್ ಶೋ ಸ್ಟಾಂಡ್-ಅಪ್ ಕಾಮಿಡಿ, ಮ್ಯಾಜಿಕ್ ಶೋ, ಗಾಲ#… ಪಂದ್ಯಾವಳಿ, ಮೆರವಣಿಗೆ – ಹೀಗೆ ಹಲವಾರು ಕಾರ್ಯಕ್ರಮಗಳ ಜತೆಗೆ ರಂಗಸ್ಥಳ ನಾಟಕ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ, ಶೃಂಗಾರ ಸಿರಿ ಫ್ಯಾಶನ್ ಶೋ ಈಗ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲದ ಸಮ್ಮೇಳನದಲ್ಲಿ ಸಾವಿರಾರು ಕನ್ನಡಿಗರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಕರ್ನಾಟಕದ ವೈವಿಧ್ಯಮಯ ತಿನಿಸುಗಳನ್ನು ಎಲ್ಲರೂ ಸವಿದರು.
ಅನುಸೂಯ ಪೂಂಜಾರವರು ತುಳುನಾಡು ಬಗ್ಗೆ ಒಂದು ಕಾರ್ಯಕ್ರಮ ಯಾಕೆ ಮಾಡಬಾರದು ಎಂಬ ವಿಚಾರ ಮುಂದಿಟ್ಟರು.
ಆರಂಭದಲ್ಲಿ 60 ಕ್ಕೂ ಹೆಚ್ಚು ಪ್ರತಿಭಾವಂತರನ್ನು ಹುಡುಕಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಟೆಕ್ಸಾಸ್‌ನ ಬಿಸಿಯನ್ನೂ ಲೆಕ್ಕಿಸದೆ ಅದಮ್ಯ ಉತ್ಸಾದಿಂದ ನಿರಂತರ ಅಭ್ಯಾಸಗಳಲ್ಲಿ ತಂಡ ಪಾಲ್ಗೊಂಡು ತಯಾರಿ ನಡೆಸಿತ್ತು. ಸೌಮ್ಯಾ ರಾವ್ ನೇತೃತ್ವದಲ್ಲಿ ಭೂತಾರಾಧನೆ, ಕಂಬಳ ಮತ್ತು ಯಕ್ಷಗಾನಕ್ಕೆ ಬೇಕಾದ ರಂಗಪರಿಕರಗಳನ್ನು ಸಿದ್ಧಪಡಿಸಲಾಯಿತು. ಕಾರ್ಯಕ್ರಮಕ್ಕೆ ಅಗತ್ಯವಾದ ವೇಷಭೂಷಣಗಳನ್ನು ದಕ್ಷಿಣ ಕನ್ನಡದಿಂದ ತರಿಸಲಾಗಿತ್ತು. ಕಾರ್ಯಕ್ರಮದ ನಿರೂಪಣೆಯಿಂದ ಕೊನೆಯವರೆಗೂ ಎಲ್ಲವೂ ತುಳುನಾಡಿನ ಪರಂಪರೆಯನ್ನು ಪರಿಚಯಿಸಿತ್ತು. ವಿಶೇಷ ನೃತ್ಯದ ಮೂಲಕ ತುಳುನಾಡ ಐಸಿರಿಯನ್ನು ಪರಿಚಯಿಸಲಾಗಿತ್ತು. ಪರಶುರಾಮ ಸೃಷ್ಟಿಯಾದ ತುಳುನಾಡಿನ ಸೃಷ್ಟಿಯ ಕಥೆಯನ್ನು ಹೇಳುವುದರೊಂದಿಗೆ ರಂಗಸ್ಥಳ ಪ್ರವೇಶಿಸುವ ಮೂಲಕ ಪ್ರದರ್ಶನವನ್ನು ಆರಂಭಿಸಲಾಗುತ್ತದೆ. ಜತೆಗೆ ತುಳುನಾಡಿನಲ್ಲಿ ನಾಗಾರಾಧನೆಗೆ ಇರುವ ಪ್ರಾ ಧಾನ್ಯತೆ ಮತ್ತು ನಾಗಮಂಡಲ ಅಂದರೆ ಏನು ಎನ್ನುವುದನ್ನು ಹಂತಹಂತವಾಗಿ ಕಲಾವಿದರು ಪ್ರಸ್ತುತ ಪಡಿಸಿ ವಿವರಿಸುತ್ತಾರೆ. ಇದಾದ ಮೇಲೆ ತುಳುನಾಡಿನ ಚರಿತ್ರೆಯಲ್ಲಿ ಮಿನುಗುತ್ತಿರುವ ಅವಳಿ ವೀರರಾದ ಕೋಟಿ ಚೆನ್ನಯ್ಯರ ವೀರ ಪ್ರದರ್ಶನ. ಮಳೆಗಾಲದಲ್ಲಿ ತುಳುನಾಡು ಹೆಚ್ಚಿನ ಮಳೆಯನ್ನು ಕಾಣುತ್ತದೆ. ಈ ಸಮಯದಲ್ಲಿ ಆಚರಿಸುವ ಆಟಿ ತಿಂಗಳಿನ ಸೊಬಗನ್ನು, ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿಯನ್ನು ತೋರಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಕುಣಿತ ಕಂಗಿಲು ನೃತ್ಯ ಮತ್ತು ಹುಲಿವೇಷ ಕುಣಿತ ಪ್ರದರ್ಶನ, ತುಳುನಾಡಿನ ವಿಶಿಷ್ಟ ಆರಾಧನಾ ಪರಂಪರೆ ಭೂತಾರಾಧನೆ, ಸುಗ್ಗಿಯ ಸಂಭ್ರಮ ಹಾಗೂ ಜಾನಪದ ಕ್ರೀಡೆಗಳಾದ ಕಂಬಳ ಮತ್ತು ಕೋರಿಕಟ್ಟ ಇವುಗಳನ್ನು ತೋರಿಸಲಾಯಿತು. ಅನಂತರ ಕರಾವಳಿಯ ಮೇರುಕಲೆ, ಸಮಗ್ರ ರಂಗಭೂಮಿ ಎಂದೇ ಪ್ರಸಿದ್ಧವಾದ ಯಕ್ಷಗಾನದ ವಿವರಣೆಯೊಂದಿಗೆ ಪಟ್ಲ ಸತೀಶ ಶೆಟ್ಟಿಯವರ ನೀರಾಟ ವಾಡಿದಳು ಹಾಡಿಗೆ ಹುಡುಗಿಯರಿಂದ ಯಕ್ಷಗಾನ ನೃತ್ಯ. ಕಡೆಯದಾಗಿ ದೇವಿ ಮಹಾತ್ಮೆಯಲ್ಲಿ ಬರುವ ಮಾಲಿನಿಯ ಮಗನಾದ ಮಹಿಷಾಸುರನ ಅಬ್ಬರದ ರಂಗಸ್ಥಳ ಪ್ರವೇಶ ಮತ್ತು ದೇವಿ ಮಹಿಷಾಸುರನ್ನು ಸಂಹಾರ ಎಲ್ಲರನ್ನೂ ಬೆರಗಾಗಿಸಿತ್ತು. ಮಾಲತಿ ನಾಗಭೂಷಣ್ ಅವರ ನಿರೂಪಣೆಗೆ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಅವರು ತಮ್ಮ ಕಂಠದಿಂದ ಪ್ರಸ್ತುತ ಪಡಿಸಿದ್ದರು. ಅನುಸೂಯ ಪೂಂಜಾ, ವೆಂಕಟೇಶ್ ಆಚಾರ್ಯ, ಸುಪ್ರಿಯಾ ರಾವ್, ಧನ್ಯಶ್ರೀ ಚಕ್ರಪಾಣಿ ಮತ್ತು ದಿವ್ಯ ನವೀನ್ ಅವರು ನೃತ್ಯ ಮತ್ತು ಕಥಾರೂಪಕಗಳನ್ನು ಸಂಯೋಜಿಸಿದರು.
ಸುನಿಲ್ ರಾಮಚಂದ್ರ ಅವರು ವೀಡಿಯೋ ಸಂಕಲನದ ಸಹಕಾರ ನೀಡಿದ್ದರು. ನಾವಿಕ 2023ರ ಅತ್ಯುನ್ನತ ಕಾರ್ಯಕ್ರಮಗಳ ಪೈಕಿ ತುಳುನಾಡ ಐಸಿರಿಯೂ ನೆರೆದಿದ್ದ ಎಲ್ಲರ ಮನಗೆದ್ದಿತ್ತು. ಸತತ ಶ್ರಮ ಹಾಗೂ ಬಿಸಿಲನ್ನು ಲೆಕ್ಕಿಸದೇ ಮಕ್ಕಳು ಹಾಗೂ ವಯಸ್ಕರು ಜತೆಗೂಡಿ ಕರಾವಳಿಯ ಇತಿಹಾಸ, ಐತಿಹ್ಯ, ಪೂಜಾ ಪದ್ಧತಿಗಳನ್ನು ನರೆದಿದ್ದವರೆಲ್ಲರಿಗೂ ಪ್ರಸ್ತುತ ಪಡಿಸಿದರು. ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್, ಮಾಲತಿ ಭೂಷಣ