ದೋಹಾ:ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಪ್ರಸ್ತುತ ಪಡಿಸಿದ ಮಲ್ಹಾರ್ 2.0 ಕಾರ್ಯಕ್ರಮದಲ್ಲಿ ಕರ್ನಾಟಕದ ಸುಪ್ರಸಿದ್ಧ ಗಾಯಕಿ ಸೀಮಾ ರಾಯಕರ್ ಅವರು ಸುಮಧುರ ಕಂಠದಿಂದ ಮಧುರ ಗೀತೆಗಳ ರಸದೌತಣವನ್ನು ಕಲಾಭಿಮಾನಿಗಳಿಗೆ ಉಣಬಡಿಸಿದರು.
ಸೀಮಾ ರಾಯಕರ್ ಅವರು ಕರ್ನಾಟಕದಾತ್ಯಂತ ಸಾವಿರಾರು ಕಾರ್ಯಕ್ರಮ ನೀಡಿದ ಜನಪ್ರಿಯ ಗಾಯಕಿ, ಭಕ್ತಿಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೀಮಾ ಅವರು ಈ ಮೊದಲು ಲಂಡನ್, ಅಮೆರಿಕ, ಆಸ್ಟ್ರೇಲಿಯಾ, ಓಮನ್ ಮತ್ತು ಬಹ್ರೈನ್‌ನಲ್ಲಿ ಹಲವಾರು ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದಾರೆ.
ಜೂ.12ರಂದು ಸಂಜೆ 7:00ಗಂಟೆಗೆ ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಸೀಮಾ ರಾಯಕರ್‌ಅವರ ಮಧುರ ಗೀತೆಗಳನ್ನು ಕತಾರ್‌ನ ಅನಿವಾಸಿ ಭಾರತೀಯರು ಆನಂದಿಸಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಮಣಿಕಂಠನ್, ಉಪಾಧ್ಯಕ್ಷರಾದ ನಮ್ಮ ಹೆಮ್ಮೆಯ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಟಾಗಿಲು ಮತ್ತು ಆಡಳಿತ ಮಂಡಳಿ ಸದಸ್ಯರು ಸೀಮಾ ರಾಯಕರ್ ಅವರನ್ನು ಆತ್ಮೀಯತೆಯಿಂದ ಸಮ್ಮಾನಿಸಿ ಅವರ ಕಲಾ ಬದುಕು ಉಜ್ವಲವಾಗಿರಲಿ ಎಂದು ಹಾರೈಸಿದರು.