Advertisement

Desi Swara: ಕೆಂಪೇಗೌಡರ 514ನೇ ಜಯಂತಿ ಆಚರಣೆ ಒಕ್ಕಲಿಗರ ಬಳಗ ಒಮಾನ್‌ ಉದ್ಘಾಟನೆ

12:25 PM Sep 30, 2023 | Team Udayavani |

ಒಮಾನ್‌:ಕರ್ನಾಟಕದ ರಾಜಧಾನಿ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು. ಇವರ ಸ್ಮರಣಾರ್ಥ ಇದೇ ಮೊದಲ ಬಾರಿಗೆ ಇತ್ತೀಚೆಗೆ ಒಮಾನ್‌ನ ರಾಷ್ಟ್ರ ರಾಜಧಾನಿ ಮಸ್ಕತ್‌ನಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.

Advertisement

ಒಕ್ಕಲಿಗರ ಬಳಗ ಒಮಾನ್‌ ಉದ್ಘಾಟನೆ

ಒಮಾನ್‌ ರಾಷ್ಟ್ರದಲ್ಲಿ ನೆಲೆಸಿ, ಉದ್ಯೋಗ ಮಾಡುತ್ತಿರುವ ಒಕ್ಕಲಿಗ ಸಮುದಾಯದ ಸಮಾನ ಮನಸ್ಕರೆಲ್ಲರು ಸೇರಿ ರಚಿಸಿಕೊಂಡಿರುವ ಒಕ್ಕಲಿಗರ ಬಳಗ ಒಮಾನ್‌ ಎನ್ನುವ ಸಂಘಟನೆಯನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಸಂಘದ ವತಿಯಿಂದ ಉದ್ಘಾಟನ ಕಾರ್ಯಕ್ರಮವಾಗಿ ಕೆಂಪೇಗೌಡ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳೆಗುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಂಘಟಕರಾದ ಅನೂಪ್‌ ಕುಮಾರ್‌ ಅವರು ಸ್ವಾಗತ ಭಾಷಣ ಮಾಡಿ, ಸಂಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದ ಮೊದಲಿಗೆ ಕೆಂಪೇಗೌಡರ ಬಗ್ಗೆ ಕಿರು ಚಿತ್ರವನ್ನು ಪ್ರದರ್ಶಿಸಿದ ಅನಂತರ, ಆದಿಚುಂಚನಗಿರಿ ಮಠದ ಬಗೆಗಿನ ಕಿರು ಚಿತ್ರ, ಮಠಾಧಿಪತಿಗಳಾದ ಜಗದ್ಗುರು ಪರಮ ಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳಿಂದ ಆಶೀರ್ವಚನ ಮತ್ತು ಒಕ್ಕಲಿಗರ ಬಳಗ ಒಮಾನ್‌ ಕುರಿತಾಗಿ ಹಿತವಚನದ ವೀಡಿಯೋ ಸಂದೇಶ ಜತೆಗೆ, ಕನ್ನಡನಾಡಿನ ಹೆಮ್ಮೆಯ ವಾಗ್ಮಿಗಳಾದ ಪ್ರೊ| ಡಾ| ಕೃಷ್ಣೇಗೌಡರ ವೀಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು.

ಮಕ್ಕಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ
ಕಾರ್ತಿಕ್‌ ಭಾಸ್ಕರ್‌ ಅವರು ಗಿಟಾರ್‌ ವಾದ್ಯ ಸಂಗೀತ, ವಿಭಾ ರಾಮಚಂದ್ರಪ್ಪ ಅವರು ಸಂಗೀತ, ಸನ್ನಿಧಿ ಕಾರ್ತಿಕ್‌, ಆರ್ನ ಸಂತೋಷ್‌, ಧಕ್ಷ ಗೌರಿ, ಜ್ಞಾನ ಕುಮಾರ್‌, ಮೋಕ್ಷ ಅಶ್ವತ್ಥ್, ಜಾಗೃತಿ ಪ್ರವೀಣ್‌, ಪ್ರತೀಕ್ಷಾ ಅನೂಪ್‌ ಅವರಿಂದ ನೃತ್ಯ ಪ್ರದರ್ಶನ, ಶ್ರಾವ್ಯಾ ಶಶಿಧರ್‌, ಕೀರ್ತಿ ನಾಗರಾಜ್‌ ಅವರು ಏಕಪಾತ್ರ ಅಭಿನಯವನ್ನು ಪ್ರದರ್ಶಿಸಿದರು.

Advertisement

ಒಮಾನಿನ ವಿವಿಧ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸತತವಾಗಿ ಪ್ರದರ್ಶನ ನೀಡಿರುವ ಮಾಲತಿ ಭಾಸ್ಕರ್‌ ಅವರಿಂದ ಜಾನಪದ ಗೀತೆ, ವಿಶೇಷ ಆಹ್ವಾನಿತರಾದ ಶ್ವೇತಾ ಡೆನ್ನಿ ಮತ್ತು ಕಾರ್ತಿಕ್‌ ಗೌಡರವರು ಹಾಡುಗಳನ್ನ ಹಾಡಿ ಸಭಿಕರನ್ನು ರಂಜಿಸಿದರು. ಜತೆಗೆ ಸದಸ್ಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ಹೂಲಾ ಹೂಪ್‌ ಹಾಗೂ ವಿಭಿನ್ನ ಸ್ಪರ್ಧೆಗಳಿದ್ದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಾಂಪ್ರದಾಯಿಕ ಉಡುಗೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆ ಧರಿಸಿದ್ದಿದ್ದು ವಿಶೇಷವಾಗಿತ್ತು. ಮಹಿಳೆಯರು ಬಣ್ಣಬಣ್ಣದ ರೇಷ್ಮೆ ಸೀರೆಗಳು, ಚಿಕ್ಕ ಹೆಣ್ಣು ಮಕ್ಕಳು ಲಂಗ ದಾವಣಿ ಮತ್ತು ಪುರುಷರು ಅಂಗಿ, ಪಂಚೆ ಮತ್ತು ಶಲ್ಯ ಧರಿಸಿದ್ದರು. ಈ ಸಾಂಪ್ರದಾಯಿಕ ಉಡುಗೆಯಿಂದ ಸಭಾಂಗಣ ಕಳೆಗಟ್ಟಿತ್ತು.ಕಾರ್ತಿಕ್‌ ಗೌಡ ಹಾಗೂ ಕಾವ್ಯ ಅನೂಪ್‌ ಕಾರ್ಯಕ್ರಮ ನಿರ್ವಹಿಸಿದರು. ಗುರುಪ್ರಸಾದ್‌ ವಂದಿಸಿದರು.

*ವರದಿ: ಪಿ.ಎಸ್‌.ರಂಗನಾಥ, ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next