Advertisement

Desi Swara: ಕನ್ನಡ ಸಂಘ ದಕ್ಷಿಣ ಕ್ಯಾಲಿಫೋರ್ನಿಯಾ: ವಿಜೃಂಭಣೆಯ ಮೆರವಣಿಗೆ

12:07 PM Oct 26, 2024 | Team Udayavani |

ಕ್ಯಾಲಿಫೋರ್ನಿಯಾ: ಸರಿಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿರುವ ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಂಘವು ಈ ಬಾರಿಯೂ ಸಹ ಸೆ.21ರಂದು ಜೈನ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಅನಂತ್‌ ಪ್ರಸಾದ್‌ ಮತ್ತು ಈ ವರ್ಷದ ಗಣೇಶೋತ್ಸವ ನೇತೃತ್ವ ವಹಿಸಿದ ಬಿ. ಲ್‌. ಮುರಳಿ, ಹಾಗೂ ಎಲ್ಲ ಪದಾಧಿಕಾರಿಗಳ ನೆರವು ಮತ್ತು ಓಇಅ ಸದಸ್ಯರ ಸಹಭಾಗಿತ್ವದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.

Advertisement

ಈ ಬಾರಿಯ ಗಣೇಶೋತ್ಸವದ ಮುಖ್ಯ ಆಕರ್ಷಣೆಯೆಂದರೆ ಗಣೇಶನ ಮಂಟಪದ ರಂಗಸಜ್ಜಿಕೆ. ಇದನ್ನು ಪೆಂಡಾಲ್‌ ರೀತಿಯಲ್ಲಿ ಅಲಂಕರಿಸಲಾಗಿದ್ದು, ಎಲ್ಲರನ್ನು ಬಹಳವಾಗಿ ಆಕರ್ಷಿಸಿತು. ಇಷ್ಟು ಅದ್ಭುತವಾಗಿ ಮಂಟಪವನ್ನು ತಮ್ಮ ಕಲಾನೈಪುಣ್ಯದಿಂದಲೂ ಮತ್ತು ಅವಿರತ ಶ್ರಮದಿಂದಲೂ ಸಿದ್ಧಪಡಿಸಿದ ಪೂರ್ಣಿಮಾ ಸಂಡೂರ್‌, ಉಮಾ ಮತ್ತು ಬಸವರಾಜ್‌ ಹುಕ್ಕೇರಿ ತಂಡವು ಎಲ್ಲರನ್ನು ಬೆರಗುಗೊಳಿಸಿದರು. ಭಾರತದಲ್ಲಿ ಗಲ್ಲಿಗಲ್ಲಿಯಲ್ಲೂ ನಡೆಯುವ ಪೆಂಡಾಲ್‌ ಗಣಪತಿಯನ್ನು ನಮಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ ಈ ತಂಡದ ಶ್ರಮ ಶ್ಲಾಘನೀಯ.

ಅಂದಿನ ಕಾರ್ಯಕ್ರಮದ ಕೇಂದ್ರ ಬಿಂದುವೆಂದರೆ ವಿಘ್ನ ವಿನಾಯಕನ ಸುಂದರ ಮೂರ್ತಿ. ಪ್ರತೀ ಬಾರಿಯೂ ಸಹ ತಮ್ಮ ಸ್ವ-ಹಸ್ತದಿಂದ ಮುದ್ದಾದ ಗಣಪನನ್ನು ಅತೀ ಆಕರ್ಷಕವಾಗಿ ಮೂಡುವಂತೆ ಮಾಡುವ ವಿಜಯೇಂದ್ರ ರಾವ್‌ ಅವರ ಕರಕುಶಲತೆಯಲ್ಲಿ ಮೂಡಿಬಂದ ಈ ಸಾಲಿನ ವರಸಿದ್ಧಿವಿನಾಯಕನ ಮೂರ್ತಿಯು ಭಕ್ತಿ ಮತ್ತು ಕಲೆಯ ಸಮನ್ವಯಗಳನ್ನು ಪ್ರತಿಬಿಂಬಿಸುವಂತೆ ಕಂಗೊಳಿಸುತ್ತಿತ್ತು.

ಗಣೇಶೋತ್ಸವದ ಇನ್ನೊಂದು ಮುಖ್ಯವಾದ ಅಂಗವೆಂದರೆ ಗಣೇಶನ ಪೂಜೆಯ ಪ್ರಾಯೋಜಕ ಸದಸ್ಯರ ಪೂಜಾ ಕಾರ್ಯಕ್ರಮ. ಪ್ರತಿಯೊಬ್ಬ ಪ್ರಾಯೋಜಕರಿಗೂ ಒಂದು ಪುಟ್ಟ ಗಣಪನ ಜತೆಯಲ್ಲಿ ಸಮಸ್ತ ಪೂಜಾ ಸಾಮಗ್ರಿಗಳನ್ನೂ ಒದಗಿಸಿ ಪೂಜೆಯನ್ನು ನೆರವೇರಿಸಲಾಯಿತು.

Advertisement

ವಿಘ್ನ ವಿನಾಯಕನ ಪ್ರತಿಷ್ಠಾಪನೆ, ಪೂಜೆ, ವಿಸರ್ಜನೆಯ ಜತೆಗೆ ಮಿಕ್ಕ ಸದಸ್ಯರ ಗಣಪನ ಪೂಜೆಯನ್ನು ಯಥಾವಿಧಿಯಾಗಿ ನಿರ್ವಿಘ್ನದಿಂದ ಜ್ಞಾನಮೂರ್ತಿ ಭಟ್‌ ಅವರು ನಡೆಸಿಕೊಟ್ಟರೆ, ಸ್ಯಮಂತೋಪಾಖ್ಯಾನದ ಕಥೆಯನ್ನು ಬಹಳ ಸೊಗಸಾಗಿ ಎಂ.ಎಲ್‌. ಶ್ರೀನಿವಾಸ್‌ ಅವರು ತಿಳಿಸಿಕೊಟ್ಟರು. ಪೂಜೆಯ ಸಮಸ್ತ ಮೇಲ್ವಿಚಾರಣೆ ಮತ್ತು ವ್ಯವಸ್ಥೆಯನ್ನು ಅರವಿಂದ್‌ ರಾಮಸ್ವಾಮಿ ಮತ್ತು ಗುರುಪ್ರಸಾದ ರಾವ್‌ ತಂಡದವರು ಅತ್ಯಂತ ಉತ್ತಮವಾಗಿ ನಿರ್ವಹಿಸಿದರು.

ಗಣೇಶ ವಿಸರ್ಜನೆ ಈ ಬಾರಿಯ ವಿಶೇಷಗಳಲ್ಲೊಂದು. ಪೂಜೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರುಗಳು ತಾವು ಪೂಜಿಸಿದ ಗಣಪನನ್ನು ಮೆರವಣಿಗೆಯ ಮೂಲಕ “ಗಣೇಶ ಬಂದ ಕಾಯ್‌ ಕಡಬು ತಿಂದ, ಚಿಕ್ಕೆರೇಲಿ ಬಿದ್ದ, ದೊಡ್‌ ಕೆರೇಲಿ ಎದ್ದ’ ಎಂಬ ಘೋಷಣೆಯೊಂದಿಗೆ ಪದಾಧಿಕಾರಿಗಳು ಸಜ್ಜು ಮಾಡಿದ ಸ್ಥಳದಲ್ಲಿ ತಮ್ಮ ಗಣಪನನ್ನು ವಿಸರ್ಜಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡ ಕೇರಳ ಮೂಲದ ಮೆನನ್‌ ತಂಡ ಚಂಡೆ ಸೇವೆ ಮಾಡಿದರು.

ಗಣೇಶೋತ್ಸವದ ಮತ್ತೂಂದು ವೈಶಿಷ್ಟéವೆಂದರೆ ಅಂದಿನ ಭೋಜನ ವ್ಯವಸ್ಥೆ. ಹೊಳಿಗೆ, ಲಾಡು, ಶ್ರೀಖಂಡ್‌, ಮೋದಕ, ಪೂರಿ, ಪಲ್ಯ, ಪೈನ್‌ ಆಪಲ್‌ ಗೊಜ್ಜು ಹೀಗೆ ಸರಿಸುಮಾರು ಹದಿನಾರು ಬಗೆಯ ಅತ್ಯಂತ ರುಚಿಕರ ಭಕ್ಷ್ಯ-ಭೋಜನಗಳನ್ನು ಸದಸ್ಯರುಗಳು ಸವಿದರು. ಇಷ್ಟೇ ಅಲ್ಲದೆ, ಸರಿಟೋಸ್‌ ಹೆಂಗೆಳೆಯರ ತಂಡದವರು ತಯಾರಿಸಿಕೊಟ್ಟ ಪಾನ್‌ ಬೀಡಾ ಸಹ ಎಲ್ಲರ ಮನಗೆದ್ದಿತು. ಅಂದಿನ ಭೋಜನ ಕಾರ್ಯಕ್ರಮದ ಉಸ್ತುವಾರಿಯನ್ನು ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ರಶ್ಮಿ ಅನಂತ್‌, ರಜನಿ ಮತ್ತು ಗೋಪಾಲ್‌ ಶ್ರೀನಾಥ್‌ ತಂಡ ಎಲ್ಲರ ಸಂತೃಪ್ತಿಗೆ ಪಾತ್ರರಾದರು.

ಗಣೇಶೋತ್ಸವದ ರಸಸಂಜೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ನಮ್ಮ ದಕ್ಷಿಣ ಕ್ಯಾಲಿಫೋರ್ನಿಯಾದವರೇ ಆದ ಹಾಲಿವುಡ್‌ನ‌ ತಾರೆ ರೋಜರ್‌ನಾರಾಯಣ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು. ರಾಜೀವ್‌ ಸೀತಾರಾಮ್‌ ರೋಜರ್‌ ಅವರ ಸಂದರ್ಶನ ಮಾಡಿದರು. ಇಷ್ಟೇ ಅಲ್ಲದೆ, ಸ್ಥಳೀಯ ಪ್ರತಿಭೆಗಳಾದ ವಿಜಯೇಂದ್ರ ರಾವ್‌, ಅಖೀಲ ಪಜೆಮಣ್ಣು, ಅಕ್ಷಯ್‌ ರಾವ್‌ರ ಸುಮಧುರ ಕಂಠದಿಂದ ಮೂಡಿಬಂದ ಭಕ್ತಿಗೀತೆ, ಚಿತ್ರಗೀತೆ ಹಾಗೂ ಭಾವಗೀತೆಗಳ ಗಾಯನ, ಅಕ್ಷರ, ಕ್ರಿಶ್‌ ಮತ್ತು ಬಿದನ್‌ ಸಿಂಹರ ವಾದ್ಯವೃಂದಗಳು ಎಲ್ಲ ಸಭಿಕರನ್ನು ರಂಜಿಸಿ, ಕುಣಿಸಿ, ತಣಿಸುವಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿತು.

ಸುದರ್ಶನ್‌ ಚಲನ್‌ ಅವರ ತಾಲೀಮಿನಲ್ಲಿ ಮೂಡಿಬಂದ ಓಇಅ ಮಕ್ಕಳ ಗಣೇಶ ವಂದನಾ ಗಾಯನವು ಅತ್ಯಂತ ಸುಮಧುರವಾಗಿತ್ತು. ವೀಣಾ ಕೃಷ್ಣ ಅವರ ಹಾಡುಗಾರಿಕೆ ಮತ್ತು ಧೋಲ್‌ ತಾಶಿಕ್‌ ತಂಡದ ವಾದ್ಯಗಾರಿಕೆಗಳು ಸಹ ಸಭಿಕರನ್ನು ಮುದಗೊಳಿಸಿದವು. ಸಂಘದ ವತಿಯಿಂದ ಸುಷ್ಮಾ ಚಾರ್‌ ಅವರು ಮನರಂಜನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
2024ರ ಗಣೇಶೋತ್ಸವವು ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಕಾರ್ಯಕ್ರಮಗಳಿಂದಲೂ, ಸಂತೋಷ ಸಂಭ್ರಮಗಳಿಂದ ಸಮಾಪ್ತಿಗೊಂಡಿತು. ಪಿತೃಶೋಕದಲ್ಲಿ ಮುಳುಗಿದ್ದರೂ ಸಹ ಗಣೇಶೋತ್ಸವದ ಯಶಸ್ಸಿಗೆ ಅವಿರತವಾಗಿ ಕೈಜೋಡಿಸಿದ ಓಇಅ ಅಧ್ಯಕ್ಷ ಅನಂತ್‌ ಪ್ರಸಾದ್‌ ಹಾಗೂ ಅವರ ಕುಟುಂಬದ ಶ್ರಮ ಅತ್ಯಂತ ಶ್ಲಾಘನೀಯ.

ವರದಿ: ರಾಜೇಶ್ವರಿ ಎಚ್‌.ರಾವ್‌

Advertisement

Udayavani is now on Telegram. Click here to join our channel and stay updated with the latest news.

Next