ಲಂಡನ್: ಲ್ಯಾಂಬೆತ್ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಕನ್ನಡ ಚಲನಚಿತ್ರ ನಟಿ ಪೂಜಾ ಗಾಂಧಿ ಹಾಗೂ ವಿಜಯ ಘೋರಪಡೆ ದಂಪತಿ ಅವರು ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಯುಕೆ ಮೂಲದ ಬಸವ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ಭಾಗವಹಿಸಿ ಮಾತನಾಡಿದದರು. 12ನೇ ಶತಮಾನದಲ್ಲಿ ಬಸವಣ್ಣನವರ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ಬೇಧದ ವಿರುದ್ಧ ನಡೆಸಿದ ಹೋರಾಟವು ಸಮ ಸಮಾಜವನ್ನು ನಿರ್ಮಿಸುವಲ್ಲಿ ಪಾತ್ರವಹಿಸಿತ್ತು.
ಬಸವಣ್ಣನವರ ಬೋಧನೆಗಳನ್ನು ಪ್ರತಿಯೊಬ್ಬರು ಪ್ರೇರಣೆಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ಯುನೈಟೆಡ್ ಕಿಂಗ್ಡಂನಲ್ಲಿ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಉತ್ತೇಜಿಸುವಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಗಣಪತಿ ಭಟ್ ಅವರನ್ನು ಇಲ್ಲಿನ ಐಕಾನಿಕ್ ಬಸವೇಶ್ವರ ಪ್ರತಿಮೆ ಬಳಿ ಸಮ್ಮಾನಿಸಲಾಯಿತು. ಜತೆಗೆ ಕನ್ನಡ ಸಂಸ್ಕೃತಿಯ ಉತ್ತೇಜನ ಮತ್ತು ಸಮುದಾಯದ ಏಕತೆಗಾಗಿ ಗಣಪತಿ ಭಟ್ ಅವರ ಸೇವೆಯನ್ನು ಪ್ರಶಂಸಿಸಲಾಯಿತು.
ಲ್ಯಾಂಬೆತ್ನ ಮಾಜಿ ಮೇಯರ್ ಡಾ| ನೀರಜ್ ಪಾಟೀಲ್, ಕನ್ನಡಿಗ ಯುಕೆ ಅಧ್ಯಕ್ಷ ಗಣಪತಿ ಭಟ್, ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಅಭಿಜಿತ್ ಸಲೀಮತ್, ಮಿರ್ಗಿ ರಂಗನಾಥ್, ಶರಣ್ ಭೇಮಳ್ಳಿ, ಯುಕೆ ಕನ್ನಡ ಬಳಗ, ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಭಾಗವಹಿಸಿದ್ದರು.