Advertisement
ಕ್ರೈಸ್ತಮತದ ತವರೂರಾದ ರೋಮ್ ನಗರ ಇಟಲಿಯ ರಾಜಧಾನಿ, ಇಲ್ಲಿಯ ಚಿಕ್ಕದೇಶ ವ್ಯಾಟಿಕನ್. ಇದಕ್ಕೆ ಸೈಂಟ್ ಪೀಟರ್ ಅಂತಾನೂ ಕರೆಯುತ್ತಾರೆ. ಇಲ್ಲಿ ಪೋಪ್ ವಾಸಿಸುತ್ತಾರೆ. ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಈ ಹಬ್ಬ ಆಚರಿಸಲ್ಪಡುತ್ತದೆ. ಇನ್ನು ಹಬ್ಬ ಒಂದು ತಿಂಗಳಿರುವಾಗಲೇ ಹಬ್ಬದ ವಾತಾವರಣ ಕಂಡುಬರುತ್ತದೆ. ಆದರೆ ಮತಾಧಿಕಾರಗಳ ಪ್ರಕಾರ ಡಿಸೆಂಬರ್ ಎಂಟನೇ ತೇದಿ ಇಂದ ಆರಂಭಿಸಬೇಕು. ಏಕೆಂದರೆ ಆದಿನ ಕ್ರಿಸ್ತನ ತಾಯಿ ಮರಿಯಾ ದೈವಿಕವಾಗಿ ಗರ್ಭದಾರಣೆ ಮಾಡಿದರಂತೆ. ರೋಮ್ ನಗರದ ಸಂತಗೊಸ್ಟೀನೋ ಚರ್ಚ್‌ನ ಎದುರು ವೃತ್ತದಲ್ಲಿ ಗರ್ಭಿಣಿ ಮರಿಯಾಳ ದೊಡ್ಡ ಶಿಲ್ಪ ಇದೆ. ಈ ದಿನ ಪೋಪ್ ಈ ಪ್ರತಿಮೆಯನ್ನು ಆರಾಧಿಸುತ್ತಾರೆ.
Related Articles
Advertisement
ಇಟಲಿ ಸಂಗೀತ ಹಾಗೂ ಕಲೆಗಳಿಗೆ ತವರೂರು. ಎಲ್ಲೆಲ್ಲೂ ಕ್ರಿಸ್ಮಸ್ ಹಾಡುಗಳು ಕೇಳುತ್ತವೆ ಕಲಾಕಾರರ ಕಲೆ ಆಕರ್ಷಣೀಯ ಗೊಂಬೆಗಳು, ಮಣ್ಣಿನ ದಿನಬಳಕೆ ವಸ್ತುಗಳು, ಮಾರುಕಟ್ಟೆಗಳು ಜನರ ನಡುವೆ ಸಂತ ಕ್ಲೊಸ್ ನಡೆಯುತ್ತಿದ್ದರೆ ನಾವೂ ಚಳಿಯಲ್ಲಿ ಬೆಚ್ಚಗಿನ ಬಟ್ಟೆ ಹಾಕಿಕೊಂಡು ನಡೆಯುತ್ತಿದ್ದರೆ ತುಂಬಾ ಸಂತೋಷ ಆಗುತ್ತದೆ. ಅಂದಹಾಗೆ ಕೆಂಪು ಬಣ್ಣ ಶ್ರೇಷ್ಠ ! ಮಾರುಕಟ್ಟೆ ಯಲ್ಲಿ ಕೆಂಪು ವಸ್ತ್ರಗಳ ಮಾರಾಟ ! ಅಯ್ಯೋ ಕೆಂಪು ಸೀರೆ ಮಾತ್ರ ಕಾಣುವುದಿಲ್ಲ !
ಪ್ರಸೆಪೆ ಒಂದು ದೈವ ಕಲೆಯೇ ಸರಿ!ಪ್ರಸೆಪೆ ಅಂದರೆ ಕ್ರಿಸ್ತನ ಜನನದ ವಿವರಣೆ. ಇದನ್ನು ರಚಿಸುವ ಕಲೆ ನೋಡಿ ಅನುಭವಿಸಬೇಕು. ಇಟಲಿಯ ಟಸ್ಕನಿ ಸ್ಟೇಟ್‌ನಲ್ಲಿ ಚೇರ್ರೊತ್ತೂಗ್ವಿದಿ ಅನ್ನುವ ಊರು ಇದಕ್ಕೆ ತಲೆಮಾರುಗಳಿಂದ ಪ್ರಸಿದ್ಧಿ. ಊರಿನ ಎಲ್ಲೆಡೆ ವಿಧವಿಧ ಮಾದರಿಗಳ ಪ್ರಸೆಪೆಗಳನ್ನೂ ಇಲ್ಲಿ ಮಾಡುತ್ತಾರೆ. ಇದಕ್ಕೆ ಬೇಕಾಗುವ ಗೊಂಬೆಗಳನ್ನು ಕ್ರೋಶಾಗಳಿಂದ ತಯಾರಿಸುವುದಲ್ಲದೆ ಇಡೀ ದೃಶ್ಯ ಕ್ರೋಶಾಲಿ ಮಾಡಿರುತ್ತಾರೆ. ಇದು ನಿಜಕ್ಕೂ ನೋಡಬೇಕು. ಪ್ರಸೆಪೆ ದೃಶ್ಯ ಏನು ವಿವರಿಸುತ್ತದೆ ?
ತುಂಬು ಗರ್ಭಿಣಿ ಮೇರಿ ಅವಳ ಪತಿ ಜೋಸೆಫ್ ನಾತ್ಸರೇಟ್ನಿಂದ ಬೆತ್ಲಹೆಮ್ಗೆ ಕೆಲಸಕ್ಕಾಗಿ ಕತ್ತೆ ಎತ್ತಿನ ಮೇಲೆ ಪ್ರಯಾಣ ಮಾಡುತ್ತಾರೆ. ಊರು ಸೇರುವಾಗ ರಾತ್ರಿ ಆಗಿರುತ್ತದೆ. ಕತ್ತಲ ವಾತಾವರಣ. ಮಲಗಲು ಎಲ್ಲೂ ಕೊಠಡಿ ಖಾಲಿ ಇರಲಿಲ್ಲ. ಮೇರಿಗೆ ಪ್ರಸವ ವೇದನೆ ಆರಂಭವಾಗುತ್ತದೆ. ಒಂದು ದನದ ಕೊಟ್ಟಿಗೆಯಲ್ಲಿ ಮಲಗಲು ಅನುವುಮಾಡುತ್ತಾರೆ. ಅಲ್ಲೇ ಕ್ರಿಸ್ತನ ಜನನ ಆಗುತ್ತದೆ. ಪ್ರಾಣಿಗಳೇ ಶಾಖಕೊಟ್ಟು ಹುಲ್ಲಿನ ಮೇಲೆ ಮಲಗಿಸಿದ್ದ ಮಗುವನ್ನು ಕಾಪಾಡುತ್ತವೆ. ಇತ್ತ ನತ್ಸರೇತ್‌ನಲ್ಲಿ ಮೂವರು ಶಾಸ್ತ್ರಜ್ಞರು ತಮ್ಮ ಜ್ಞಾನದಿಂದ ಮಹಾತ್ಮ ಹುಟ್ಟಿದನೆಂದು ಅಲ್ಲಿಗೆ ಬರುತ್ತಾರೆ. ಅವರಿಗೆ ನಕ್ಷತ್ರ ದಾರಿ ತೋರಿಸಿತಂತೆ ! ಅದೇ ಇಂದಿನ ಕ್ರಿಸ್ಮಸ್ ಸ್ಟಾರ್. ಮತ್ತೆ ಈ ದೃಶ್ಯದಲ್ಲಿ ಪ್ರಾಣಿಗಳು, ಎಲ್ಲ ಕಸುಬುದಾರರ ಮಿನಿಯೇಚರ್ ಗೊಂಬೆಗಳು, ಹರಿಯುವ ನೀರು, ಇವುಗಳಿಂದ ದೈನಂದಿನ ಜೀವನ ಪ್ರದರ್ಶಿಸುತ್ತಾರೆ. ಇವೆಲ್ಲ ಪುಟ್ಟ ಜನರೇಟರ್ ಮೂಲಕ ಕೆಲಸ ಮಾಡುತ್ತವೆ. ಈಗಿನ ಆಧುನಿಕ ಯುಗದಲ್ಲಿ ಇದು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಪಾಸ್ತಾ, ಮಣಿಗಳು, ಗುಂಡಿಗಳು, ಮುತ್ತು ಹವಳಗಳು, ಗಾಜು, ಮಣ್ಣು ಇನ್ನು ಅನೇಕ ವಸ್ತುಗಳಿಂದ ಮಾಡಲ್ಪಟ್ಟ ಪ್ರಸೆಪೆಗಳು ಕಲಾಕಾರರ ಪ್ರತಿಭೆ ಎತ್ತಿ ತೋರಿಸುತ್ತದೆ.ಇದರ ಜತೆಗೆ ಕ್ರಿಸ್ಮಸ್ ಟ್ರೀ ಕೂಡ ಮುಖ್ಯ. ಮಕ್ಕಳಿಂದ ಹಿರಿಯರವರೆಗೆ ಎಲ್ಲರು ಸೇರಿ ಮನೆಗಳಲ್ಲಿ ಇಟ್ಟು ಅದರ ಕೆಳಗೆ ಉಡುಗೊರೆಗಳನ್ನು ಇಟ್ಟು ಕ್ರಿಸ್ತ ಜನನ ಆದಮೇಲೆ ಕೊಟ್ಟು ತೆಗೆದುಕೊಳ್ಳುತ್ತಾರೆ.
ಎಲ್ಲೆಲ್ಲೂ ಮನೋರಂಜನೆ, ಹೊಸ ಪುಸ್ತಕಗಳ ಮಾರಾಟ, ಜನಜಂಗುಳಿಯ ಶಾಪಿಂಗ್, ಅಲಂಕೃತ ರಸ್ತೆಗಳು ನಿಜಕ್ಕೂ ಇಟಲಿ ತನ್ನದೇ ಆದ ಸೊಬಗಿನಿಂದ ಎಲ್ಲರನ್ನು ಆಕರ್ಷಿಸುತ್ತದೆ. ಇನ್ನೊಂದು ವಿಶೇಷತೆ ಈ ದಿನಗಳಲ್ಲಿ ಬಡಬಗ್ಗರಿಗೆ ದಾನ, ರೋಗಿಗಳ ಸೇವೆ, ಅಂಗವಿಕಲರ ಸೇವೆಗೂ ಹಲವರು ಪ್ರಾಮುಖ್ಯ ನೀಡುತ್ತಾರೆ. ಇದು ಒಂದು ಭಾಗದ ಕ್ರಿಸ್ಮಸ್ ಆಚರಣೆ ಆದರೆ ಇದರ ಮತ್ತೂಂದು ಅಂಗ ಭಾರ್ಜರೀ ಊಟ. ಇದರಲ್ಲಿ ಅಡುಗೆಯವರ ಪಾತ್ರ ಮುಖ್ಯ. ಕ್ರಿಸ್ಮಸ್ ಸ್ವೀಟ್, ಕೇಕ್ ಮಾತ್ರ ಅಲ್ಲ ಇಟಲಿಯಲ್ಲಿ ಒಂದೊಂದು ಪ್ರಾಂತದಲ್ಲಿ ಒಂದೊಂದು ಸ್ವೀಟ್ ಪ್ರಸಿದ್ಧಿ. ಇದರ ಹೆಸರುಗಳು ಬಾಯಲ್ಲಿ ನೀರೂರಿಸುತ್ತವೆ . Panettone, pandoro, Torrone, Seadas, cartellate, Strufoli ,tartufi, amaretti, fichi, panforte, ಇವೆ ಅದರ ಹೆಸರುಗಳು ! ಒಟ್ಟಿನಲ್ಲಿ ಎಲ್ಲರ ಬಾಳು ಸಿಹಿಯಾಗಲಿ. ಈ ಸ್ವರಚನೆ ಕವನದ ಮೂಲಕ ಎಲ್ಲರಿಗೂ ಕ್ರಿಸ್ಮಸ್ ಹಾಗೂ ನೂತನ ಸಂವತ್ಸರದ ಶುಭಾಶಯಗಳು. ಯೇಸುಕ್ರಿಸ್ತನ ಅವತರಣ ತಾರೆಗಳ ಲೋಕದಿಂದ
ಧರೆಗಿಳಿದು ಬಂದೆ
ಗುಹೆಯೊಳಗೆ ಜನಿಸಿದೆ
ಚಳಿ, ಹಿಮ ವಾತಾವರಣದಿ || ಓ ಶಿಶುವೇ, ನನ್ನ ದೈವ ನೀನು
ಕಂಡೆ ತಂಗಾಳಿಯಲಿ ನಿನ್ನ
ನಡುಗುವುದನ್ನು ಭಗವಂತ ನೀನು
ಸಹಿಸಿದೆ ಗಾಳಿಯ ಹೊಡೆತ ತಾಳ್ಮೆಯಲಿ ನೀನು || ನನ್ನ ಪ್ರೇಮಕ್ಕಾಗಿ ನಿನ್ನ ತ್ಯಾಗವೆಷ್ಟು
ನಿನಗೆ ಬಂದ ಕಷ್ಟಗಳೆಷ್ಟು
ನನ್ನನುದ್ಧರಿಸಲು ತಡೆಗಳು ಬೆಟ್ಟದಷ್ಟು
ವಿಶ್ವ ದೊಡೆಯ ನಿನ್ನ ಸಹನೆ ಎಷ್ಟು || ಸೃಷ್ಠಿಕರ್ತ ನೀನು, ಆದರೇನು
ದೊರಕಲಿಲ್ಲ ಇಲ್ಲಿ, ಉಣಲು ಆಹಾರ,
ಉಡಲು ವಸ್ತ್ರ, ಬೆಚ್ಚಗಿನ ಬೆಂಕಿ ಚಳಿ ತಡೆಯಲು
ಹೆದರಲಿಲ್ಲ ನೀನು, ಕಷ್ಟ ಕಾರ್ಪಣ್ಯಗಳಿಗೆ || ಭಗವಂತ ಆರಿಸಿ ಧರೆಗೆ ಕಳುಹಿದ ಶಿಶು
ಅನುಮಾನವೆಲ್ಲಿ, ಬಡತನ ಕಾದಿತ್ತಿಲ್ಲಿ
ನಿನ್ನ ಆವರಿಸಿತ್ತು ಎಲ್ಲೆಲ್ಲಿ
ಅದೇ ಭಗವಂತನೆಡೆಗೆ ಹಾದಿ, ಸಾರಿದೆ ಇಲ್ಲಿ || ನಿನ್ನ ಹಂಬಲ ನನ್ನ ಆಕರ್ಷಿಸಿತು
ನಿನ್ನ ತ್ಯಾಗ ನನ್ನ ಕರೆಯಿತು
ನನ್ನ ಭಕ್ತಿ ನಿನ್ನಲ್ಲಿ ಮೂಡಿತು
ನೀ ತೋರು ವಿಶ್ವ ಶಾಂತಿ.|| ಜಯಮೂರ್ತಿ, ಇಟಲಿ