ಪ್ರಕೃತಿಯನ್ನು ಸವಿದಷ್ಟು ಸಾಕೆನಿಸುವುದೇ ಇಲ್ಲ. ಅದು ಜೇನು ಸವಿದಂತೆ. ಪ್ರತೀ ಪ್ರದೇಶವೂ ತನ್ನದೇ ಆದ ಸೌಂದರ್ಯದ ಛಾಪನ್ನು ಹೊಂದಿರುತ್ತದೆ. ಇದನ್ನು ಅಷ್ಟೇ ವಿಶಾಲವಾದ ಮನಸ್ಸಿನಿಂದ ಹಾಗೂ ಕಣ್ಣಿನಿಂದ ನೋಡುವ ಜೀವಗಳು ಬೇಕು. ಲಂಡನ್‌ನ ಐಲ್ ಆಫ್ ವೈಟ್ ದ್ವೀಪವು ತನ್ನ ನೈಸರ್ಗಿಕ ಸೌಂದರ್ಯದಿಂದ ಹಲವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕೇಬಲ್ ಲೈನ್‌ಗಳ ಮೂಲಕ ಸಾಗಿ ಇಲ್ಲಿನ ನಿಸರ್ಗವನ್ನು ಕಣ್ತುಂಬಿಕೊಳ್ಳುವುದೇ ಸಂತೋಷ.
ನೋಡುವ ಕಣ್ಣುಗಳಿಗೆ ಪ್ರಕೃತಿಯಲ್ಲಿ ಕಂಡಷ್ಟೂ ವೈವಿಧ್ಯತೆ, ವೈಚಿತ್ರಗಳಿವೆ. ಒಂದೊಂದು ಊರಿನಲ್ಲೂ, ಒಂದೊಂದು ನಾಡಿನಲ್ಲೂ, ಒಂದೊಂದು ಪ್ರದೇಶದಲ್ಲೂ, ಅದರದ್ದೇ ಆದ ಪ್ರಕೃತಿಯ ಮುದ ನೀಡುವ ಪ್ರಾಕೃತಿಕ ರಮ್ಯ ತಾಣಗಳು ಇರುತ್ತವೆ.ಅಂತಹ ತಾಣಗಳಿಗೆ ಭೇಟಿ ನೀಡಿದಾಗ ಮನಸು ಉಲ್ಲಾ ಸದಿಂದ ನಲಿದಾಡುತ್ತದೆ. ಅಂತಹದ್ದೇ ವಿಶೇಷ ತಾಣ ನಾವು ಕಂಡ ಲಂಡನ್‌ನ ಬಳಿಯ ಐಲ್ ಆಫ್ ವೈಟ್ ದ್ವೀಪ ಪ್ರದೇಶ.
ವಿಶೇಷವಾದ, ಹೊಸ ಹೊಸ ಸ್ಥಳಗಳನ್ನು ಕಾಣುವ ಮನಸ್ಸಿನ ತವಕ ಐಲ್ ಆಫ್ ವೈಟ್ ಎನ್ನುವ ಪ್ರದೇಶಕ್ಕೆ ಹೊರಡಲು ಅಣಿಯಾಗಿ ಬೆಳಗಿನ ಜಾವ 6.30ಕ್ಕೆ ಎಲ್ಲರೂ ಸಿದ್ಧರಾಗಿ ಮಡದಿಯೊಂದಿಗೆ ಇಲ್ಫೋರ್ಡ್ ಬಸ್ ನಿಲ್ದಾಣದಲ್ಲಿ ಏಂಜಲ್ ಟೂರ್ಸ್ ಬಸ್ಸಿಗಾಗಿ ಕಾಯುತ್ತಿದ್ದೆವು. ಸಮಯ ಸಮೀಪಿಸುತ್ತಿದ್ದಂತೆ ಅಲ್ಲಿಗೆ ಒಬ್ಬೊಬ್ಬರೆ ಆಗಮಿಸುತ್ತಿದ್ದರು. ಎಲ್ಲವೂ ಹೊಸ ಮುಖಗಳೆ, ಅವರಲ್ಲಿ ನಮಗೆ ಪರಿಚಯದವರಾರೂ ಇರಲಿಲ್ಲ. ಅವರಲ್ಲಿ ಕಳೆದ ಸಲ ನಮ್ಮ ಜತೆಗೆ ಆಗಮಿಸಿದ್ದ ಕನ್ನಡದ ದಂಪತಿ ಸಿಕ್ಕಿದ್ದು ಮರಳುಗಾಡಿನಲ್ಲಿ ಓಯಸಿಸ್ ದೊರೆತಂತಾಯಿತು. ಕಾಣದ ಊರಿನಲ್ಲಿ ನಮ್ಮ ಕನ್ನಡ ಕೇಳಿ ಕರ್ಣಾನಂದದ ಜತೆಗೆ ಬಹಳ ಸಂತೋಷವಾಯಿತು. ಕೆಲವು ಸಮಯದ ಅನಂತರ ಬಿಳಿಯ ಬಣ್ಣದ ಆಕರ್ಷಕ ಬಸ್ ಬಂದು ನಿಂತಿತು. ಅಲ್ಲಲ್ಲಿ ಕಾಯುತ್ತಿದ್ದವರೆಲ್ಲ ಒಬ್ಬೊಬ್ಬರಾಗಿ ಬಸ್ ಏರಿದರು.
ಒಳಭಾಗದಲ್ಲಿ ಎತ್ತರದ ಆಸನಗಳು, ವಿಶಾಲವಾದ ಕರ್ಟನ್ ಧರಿಸಿದ್ದ ಗಾಜಿನ ಕಿಟಕಿಗಳು, ಬಸ್ಸಿನ ಒಳಗೇ ಶೌಚಾಲಯದ ವ್ಯವಸ್ಥೆ ಸಹ ಇತ್ತು. ನಾವು ಮೊದಲ ಬಾರಿಗೆ ಅಂತಹ ಬಸ್ಸನ್ನು ಕಂಡಿದ್ದು. ಅದು ಹೊಸ ಅನುಭವವನ್ನು ನೀಡಿತ್ತು. ಅಲ್ಲಿಂದ ಸಾಗಿದ ವಾಹನ ವೆಂಮ್ಲಿ ಎಂಬ ಪ್ರದೇಶದಲ್ಲಿ ಇನ್ನೂ ಕೆಲವರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಮುಂದೆ ಮುಂದೆ ಸಾಗಿತ್ತಾ ಹೋಯಿತು.
ವಿಶಾಲವಾದ ರಸ್ತೆಯಲ್ಲಿ ಬಸ್ಸು ಸಂಚಾರ ಹೊರಟಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಚಿತ್ತಾಕರ್ಷಕ ಕಟ್ಟಡಗಳ ಮಧ್ಯದಲ್ಲಿ ನಮ್ಮ ಪಯಣ ಸಾಗಿತ್ತು .ಅಲ್ಲಿಂದ ಸುಮಾರು ಇಪ್ಪತ್ತು ಮೈಲಿ ಸಂಚಾರದ ಅನಂತರ ಸೌತ್ ಹ್ಯಾಮ್ಟನ್ ತಲುಪಿದೆವು. ಅಲ್ಲಿಂದ ಸಮುದ್ರದಲ್ಲಿ ಫೆರ್ರಿ ಯಲ್ಲಿ ( ಸಮುದ್ರದಲ್ಲಿ ಈ ಬದಿಯಿಂದ ಆ ಬದಿಗೆ ಸಾಗಿಸುವ ಲಾಂಚ್‌ರ್) ಪಯಣಕ್ಕಾಗಿ ನಮ್ಮ ಬಸ್ಸಿನ ಜತೆ ಹತ್ತಾರು ವಾಹನಗಳು ಕಾಯುತ್ತಿದ್ದವು. ಸ್ವಲ್ಪ ಸಮಯದ ಅನಂತರ ಒಂದು ಫೆರ್ರಿ ಬಂದು ನಿಂತಿತು. ನೋಡ ನೋಡುತ್ತಿದ್ದಂತೆ ಅದರಿಂದ ಹತ್ತಾರು ಬಸ್ಸುಗಳು, ಸುಮಾರು ಇಪ್ಪತ್ತು ಇಪ್ಪತ್ತೈದು ಕಾರುಗಳು ಹಾಗೂ ನೂರಾರು ಜನ ಹೊರಬಂದರು. ಈಗ ನಮ್ಮ ಸರದಿಯಾಗಿತ್ತು.
ಕಾರುಗಳು, ಬಸ್ಸುಗಳ ಸಮೇತ ನಾವೂ ಸಹ ಫೆರ್ರಿ ಎನ್ನುವ ಲಾಂಚರ್‌ಗಳನ್ನು ಏರಿದೆವು. ಬಸ್ ನಿಲ್ಲಿಸಿದ್ದ ಕಡೆಯಿಂದ ಪ್ರಯಾಣಿಕರೆಲ್ಲ ಮೆಟ್ಟಿಲುಗಳ ಮೂಲಕ ಮೇಲಕ್ಕೆ ಏರಿದೆವು. ಮೇಲಿನ ಭಾಗದಲ್ಲಿ ನೂರಾರು ಆಸನಗಳುಳ್ಳ ಹೊಟೇಲ್ ಹಾಗೂ ಅದರ ಮೇಲಂತಸ್ತಿನಲ್ಲಿ ಸಮುದ್ರ ವೀಕ್ಷಣೆ ಹಾಗೂ ಸುತ್ತಮುತ್ತಲಿನ ದೃಶ್ಯ ಸವಿಯಲು ಸ್ಥಳವಿತ್ತು. ನಾವೆಲ್ಲ ಮನದಣಿಯೆ ಸಮುದ್ರ ಹಾಗೂ ದೂರದೂರುಗಳಿಗೆ ಸಾಮಾನುಗಳನ್ನು ಸಾಗುತ್ತಿದ್ದ ದೊಡ್ಡ ದೊಡ್ಡ ಹಡಗುಗಳು ಬೋಟುಗಳನ್ನು ವೀಕ್ಷಿಸಿದ ಅನಂತರ ಕೆಳಗಿಳಿದು ಬಂದೆವು. ಕೆಳಭಾಗದ ಹೊಟೇಲ್‌ನಲ್ಲಿ ಹಾಟ್ ಚಾಕೋಲೇಟ್ ಸವಿಯುತ್ತಾ ನಲವತ್ತು ನಿಮಿಷಗಳ ಪ್ರಯಾಣ ಮುಗಿಸಿ ಯಾರ್ಮತ್ ದ್ವೀಪ ಸೇರಿದೆವು. ಪುನಃ ಅಲ್ಲಿಂದ ಬಸ್ಸಿನ ನಮ್ಮ ನಮ್ಮ ಆಸನಗಳಿಗೆ ತೆರಳಿದೆವು. ಬಸ್ಸು ಫೆರ್ರಿಯಿಂದ ಹೊರ ಬಂದು ಯಾರ್ಮತ್ ನಿಂದ ಆಲಮ್ ಬೆ (ನೀಡಲ್ ಪಾಯಿಂಟ್)ಕಡೆಗೆ ಚಲಿಸಲು ಆರಂಭಿಸಿತು.
ಎತ್ತ ನೋಡಿದರೂ ಪರಿಶುದ್ಧ ವಾತಾವರಣ ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿತ್ತು ವಿಶಾಲವಾದ ರಸ್ತೆಯಲ್ಲಿ ಸಂಚರಿಸಿ ನೀಡಲ್ ಪಾಯಿಂಟ್ ಎನ್ನುವ ಜಾಗಕ್ಕೆ ತಲುಪಿದೆವು. ಅಲ್ಲೆಲ್ಲ ಮಕ್ಕಳಿಗೆ ಆಟವಾಡಲು ವಿವಿಧ ಬಗೆಯ ವಿಶೇಷ ಆಟದ ವ್ಯವಸ್ಥೆಗಳಿದ್ದವು. ಹಲವು ಬಗೆಯ ಡೈನೋಸಾರ್ ಪಾರ್ಕ್ ಸಹ ಇದೆ. ಈ ಜಾಗದಲ್ಲಿ ಬಹಳ ಹಿಂದೆ ಡೈನೋಸಾರ್‌ಗಳು ವಾಸಿಸುತ್ತಿದ್ದವೆಂಬ ಪ್ರತೀತಿ ಇದೆ, ಹಾಗಾಗಿ ಇಲ್ಲಿ ಡೈನೋಸಾರ್ ಪಾರ್ಕ್‌ಗಳು ಫೇಮಸ್. ಅಲ್ಲಿಂದ ಟಿಕೇಟ್ ಖರೀದಿಸಿ ರೋಪ್ ವೇಯಲ್ಲಿ ಕೇಬಲ್ ಕುರ್ಚಿಯಲ್ಲಿ ಕುಳಿತು ಗಾಳಿಯಲ್ಲಿ ತೇಲುತ್ತಾ ಪ್ರಕೃತಿಯ ಮಡಿಲಲ್ಲಿ ನೀಡಲ್ ಪಾಯಿಂಟ್ ಇರುವ ಸಮುದ್ರದ ಕಡೆಗೆ ಸಾಗಿದೆವು.
ಇಲ್ಲಿಗೆ ಪ್ರತೀ ವರ್ಷ ಎರಡು ಬಿಲಿಯನ್ ಜನರು ಭೇಟಿ ನೀಡುತ್ತಾರಂತೆ. ಇದು ಪಶ್ಚಿಮ ಕರಾವಳಿಯ ನಿಶ್ಶಬ್ದ ವಾತಾವರಣ ಹಾಗೂ ಬೆರಗುಗೊಳಿಸುವ ದೃಶ್ಯಾವಳಿ ಸುತ್ತಮುತ್ತ ಬಣ್ಣ ಬಣ್ಣದ ಗುಡ್ಡಗಳು ನುಣುಪಾದ ಬೆಣಚು ಕಲ್ಲುಗಳು ಕಂಗೊಳಿಸುವ ಸಮುದ್ರತೀರ. ವಿಸ್ಮಯಕಾರಿ ಭೌಗೋಳಿಕತೆಗೆ ಈ ಸ್ಥಳ ಅತ್ಯುತ್ತಮ ಉದಾಹರಣೆ. ಐಲ್‌ನ ಪಶ್ಚಿಮ ತುದಿಯಲ್ಲಿ ಮೂರು ಸುಣ್ಣದ ಕಲ್ಲಿನ ಚೂಪಾದ ರಾಶಿಗಳು ಇಲ್ಲಿನ ವಿಶೇಷ, ಅಲ್ಲದೇ ಇದು ಪ್ರಾಕೃತಿಕ ವಿಸ್ಮಯ. ಅದನ್ನೇ ಇಲ್ಲಿ ನೀಡಲ್ ಪಾಯಿಂಟ್ ಎಂಬುದಾಗಿ ಕರೆಯುತ್ತಾರೆ. ಆದ್ದರಿಂದಲೇ ಈ ಸ್ಥಳವನ್ನು ಅದೇ ಹೆಸರಿನಿಂದ ಕರೆಯುತ್ತಾರೆ. ಪ್ರಕೃತಿಯ ರಮ್ಯತೆಯನ್ನು ಮನದಣಿಯೆ ಸವಿದು ಮತ್ತೆ ಕೇಬಲ್ ಕುರ್ಚಿಯಲ್ಲಿ ಕುಳಿತು ಪ್ರಕೃತಿಯ ಮಡಿಲಲ್ಲಿ ತೇಲುತ್ತಾ ಮೇಲೆ ಬಂದೆವು. ಇಲ್ಲಿಯೂ ಕೂಡ ವಿವಿಧ ನಮೂನೆಯ ವಸ್ತುಗಳ ಮಾರಾಟ ಮಳಿಗೆಗಳಿದ್ದವು.
ನಾವೂ ಸಹ ಮಳಿಗೆಯೆಲ್ಲ ಸುತ್ತಾಡಿ ಆಕರ್ಷಕ ವಸ್ತುಗಳನ್ನು ಕೊಂಡೆವು. ನಮ್ಮ ವಾಹನ ಮುಂದೆ ಸಾಗಿತು. ಇದು ದ್ವೀಪವೆನಿಸುವುದೆ ಇಲ್ಲ. ಉತ್ತಮವಾದ ರಸ್ತೆಗಳು, ಸುಮಾರು ಹಳೆಯ ಶತಮಾನದ ಮನೆಗಳು ಸಾಲು ಸಾಲಾಗಿ ತುಂಬಿ ಆಕರ್ಷಣೀಯವಾಗಿವೆ. ಅಲ್ಲಿಂದ ನಮ್ಮ ಪಯಣ ಸಾಗಿದ್ದು ಸ್ಯಾಂಡ್ ಡೌನ್ ಸಮುದ್ರಕ್ಕೆ. ನಮ್ಮ ಬಸ್ಸು ಇಲ್ಲಿನ ಕಡಲ ಕಿನಾರೆಯ ಬಳಿ ಬಂದು ನಿಂತಿತು. ಈ ಕಡಲ ಕಿನಾರೆ ಬಹಳ ರಮ್ಯವಾಗಿದೆ.
ಅಲ್ಲೆಲ್ಲ ಸುತ್ತಾಡಿಕೊಂಡು ಬಂದೆವು. ಅಲ್ಲಿಂದ ಮತ್ತೆ ನಮ್ಮ ವಾಹನ ಫೆರ್ರಿಯೇರಿ ಮುಂದೆ ಸಾಗಿ ಸೌತ್ ಹ್ಯಾಮrನ್ ತಲುಪಿತು. ಇಲ್ಲಿಗೆ ಬರುವ ವೇಳೆಗೆ ಪರಿಚಯವೆ ಇಲ್ಲದವರೆಲ್ಲ ಪ್ರವಾಸ ಮುಗಿಸಿ ತೆರಳುವಷ್ಟಲ್ಲಿ,ಚಿರ ಪರಿಚಯದವರಂತಾಗಿ ಬಿಟ್ಟಿದ್ದೆವು. ಎಲ್ಲರೂ ಸೇರಿ ಅಂತ್ಯಾಕ್ಷರಿ ಹಾಡಿಕೊಂಡು ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ವ್ಯಕ್ತವಾಗಿತ್ತು. ಭಾಷೆ ಬೇರೆಯಾದರೂ ದೇಶ ಒಂದು ಎಂಬುದು ಸಾಬೀತಾಯಿತು. ಎಲ್ಲರನ್ನೂ ಬೀಳ್ಕೊಟ್ಟು ನಮ್ಮ ಪಯಣ ಇಲೊ#àರ್ಡ್ ಕಡೆಗೆ ಸಾಗಿತ್ತು.
*ಸುರೇಶ್ ಬಾಬು, ಇಲ್ಫೋರ್ಡ್