Advertisement

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

01:24 PM Mar 16, 2024 | Team Udayavani |

ನಮ್ಮ ಮನಸ್ಸು ಚಂಚಲ. ಅದು ಒಂದೇ ರೀತಿಯಿರುವುದಿಲ್ಲ. ಅತ್ಯಂತ ಸುಂದರ ಭಾವನೆಗಳ, ಸಹೃದಯಿಗಳ ಮನಸ್ಸು ಕೂಡ ಕೆಲವೊಮ್ಮೆ ಕಹಿಯಾಗಬಲ್ಲದು. ಇದು ಸಾಮಾನ್ಯವಾಗಿ ಯಾವುದೋ ಅಸಮಾಧಾನ, ಮುನಿಸು ಅಥವಾ ಕೋಪದ ಕಾರಣದಿಂದ ಉಂಟಾಗಿರುತ್ತದೆ.

Advertisement

ಅಸಮಾಧಾನ, ಕೋಪ ಅಥವಾ ಮುನಿಸುಗಳು ಬರಲು ನಮ್ಮ ಸುತ್ತ-ಮುತ್ತಲು ಜರುಗುವ ಹಲವು ಭೌತಿಕ ಘಟನೆಗಳು ಕಾರಣವಾಗುತ್ತವೆ. ಅಥವಾ ಮಾನಸಿಕ ಅಸಮಾಧಾನಗಳು ನಿಧಾನವಾಗಿ ಕೋಪ ಮತ್ತು ಮುನಿಸುಗಳಿಗೆ ದಾರಿತೋರುತ್ತವೆ.
ನಮ್ಮ ಅಸಮಾಧಾನಗಳನ್ನು ಹುಡುಕಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಉದಾಹರಣೆಗೆ, ವಿಶ್ವವ್ಯಾಪೀ ಹೊಸವ್ಯಾಧಿ ( ಪ್ಯಾಂಡೆಮಿಕ್‌) ಯೊಂದು ಇಂದಿನ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜನರ ಎಲ್ಲ ಯೋಜನೆಗಳು ತಲೆಕೆಳಗಾಗಿವೆ. ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ. ನಮ್ಮ ಹಲವು ತಲೆಮಾರುಗಳು ಕಂಡರಿಯದ ಪರಿಸ್ಥಿತಿಯಲ್ಲಿ ಅಸಮಾಧಾನಗಳು ಇಡೀ ಪ್ರಪಂಚದಲ್ಲಿಯೇ ಹರಡಿಕೊಂಡಿದ್ದರೆ ಅಚ್ಚರಿಯೇನಿಲ್ಲ. ಅಂತೆಯೇ ನಮ್ಮದೇ ಪುಟ್ಟ ಪ್ರಪಂಚಗಳಲ್ಲಿಯೂ ಇವು ಮನೆ ಮಾಡಿಕೊಂಡಿರಬಲ್ಲವು.

ಶಾಯಿಯ ಒಂದೇ ಒಂದು ಬಿಂದು ಇಡೀ ಲೋಟದ ನೀರ ಬಣ್ಣವನ್ನು ಬದಲಿಸುವಂತೆ ಅಸಮಾಧಾನಗಳು ನಮ್ಮ ಮನಸ್ಸುಗಳನ್ನು ನಿಧಾನವಾಗಿ ಆವರಿಸಿಕೊಂಡು ನಮ್ಮ ಚಿಂತನೆಗಳನ್ನು ಕೆಡಿಸುವಾಗ ನಾವು ಬಹುತೇಕ ಅಸಹಾಯಕರಾಗಿರುತ್ತೇವೆ.

ಪ್ರತೀ ದಿನದ ಸಣ್ಣ ಪುಟ್ಟ ಅಸಮಾಧಾನಗಳನ್ನೇನೋ ನಾವು ಮಾತಿನ ಮೂಲಕ ವ್ಯಕ್ತಗೊಳಿಸಿ ನಿವಾರಿಸಿಕೊಳ್ಳುತ್ತಿರುತ್ತೇವೆ. ಆದರೆ ಕೆಲವನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಆಗುವುದಿಲ್ಲ. ಮತ್ತೆ ಕೆಲವು ಅಸಮಾಧಾನಗಳು ನಮ್ಮನ್ನು ಕಡೆಗೋಲು ಹಾಕಿದಂತೆ ಕಡೆಯುತ್ತಿದ್ದರೂ ಕೆಲವೊಮ್ಮೆ ನಾವದನ್ನು ನುಂಗಿಕೊಳ್ಳಬೇಕಾಗುತ್ತದೆ. ಏಕೆಂದರೆ ಅವುಗಳನ್ನು ನೇರವಾಗಿ ವ್ಯಕ್ತಪಡಿಸದರೆ ಇನ್ಯಾವುದೋ ವಿಪತ್ತು ಕಾದಿರುತ್ತದೆ. ಅಥವಾ ಸಂಭಂದಗಳು ಹಾಳಾಗಬಹುದು. ಇನ್ನು ಕೆಲವೊಮ್ಮೆ ಅವು ಯಾರಿಗೂ ಸಂಬಂಧಿಸಿರದೆ ನಮ್ಮದೇ ವೈಯಕ್ತಿಕ ಅಸಮಾಧಾನಗಳಾಗಿರಬಹುದು. ಕೆಲವೊಮ್ಮೆ ಇಡೀ ಜೀವನಪೂರ್ತಿ ಅಸಮಾಧಾನಗಳ ಜತೆ ರಾಜಿ ಮಾಡಿಕೊಂಡೇ ಬದುಕಬೇಕಾಗುತ್ತದೆ. ಅವು ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿ ನಮ್ಮನ್ನು ಕಾಡಬಹುದು ಅಥವಾ ಕಾಡುವ ಈ ಅಸಮಾಧಾನಗಳೇ ನಮ್ಮನ್ನು ಹೊಸವ್ಯಕ್ತಿಗಳನ್ನಾಗಿ ರೂಪಿಸಬಹುದು.
ಅಸಮಾಧಾನಗಳು ಹುಟ್ಟುವುದು ನಮಗೆ ಬದುಕಿನಲ್ಲಿ ಅನ್ಯಾಯವಾಗಿದೆ ಎನ್ನುವ ಭಾವದಿಂದ. ಈ ಕಾರಣ ನಾವು ಆರೋಪಗಳಿಂದ ಮುಕ್ತರಾಗಲು ಅಥವಾ ನ್ಯಾಯ ಬೇಕೆಂದು ತುಡಿಯಲು ಶುರುಮಾಡುತ್ತೇವೆ. ಹೀಗಾಗಿ ನಮ್ಮ ತಲೆಯಲ್ಲಿಯೇ ಒಂದು ನ್ಯಾಯಾಲಯವನ್ನು ಸೃಷ್ಟಿಸಿಕೊಂಡು ನಮ್ಮ ಭಾವನಾತ್ಮಕ ವಾದಗಳನ್ನು ಪದೇಪದೆ ಮಾಡುತ್ತ ಅತೃಪ್ತಿಗಳನ್ನು ಜೀವಂತ ಇಟ್ಟುಕೊಳ್ಳುತ್ತೇವೆ.

Advertisement

ಇದರ ಅಪಾಯವೆಂದರೆ ನಾವು ಈ ವರ್ತುಲದಲ್ಲಿ ಗಿರಕಿಹೊಡೆಯುತ್ತಲೇ ಇರಬಹುದು. ಒಂದು ರೀತಿಯಲ್ಲಿ ಅಸಮಾಧಾನಗಳಿಗೆ ನಾವು ದಾಸರಾಗಿ ಅದನ್ನೇ ಒಂದು ವ್ಯಸನವಾಗಿ ಮುಂದುವರೆಸುತ್ತ ಹೋಗಬಹುದು. ಇದನ್ನು ಮನೋವಿಜ್ಞಾನ ಧೃಡಪಡಿಸುತ್ತದೆ. ಆದರೆ ಅಸಮಾಧಾನ ಎನ್ನುವುದು ಬಹುತೇಕರಲ್ಲಿ ನಡೆವ ಸಹಜ ಮನೋವ್ಯವಹಾರ. ಸಣ್ಣದೋ, ದೊಡ್ಡದೋ ಒಟ್ಟಿನಲ್ಲಿ ನೂರಾರು ಬಗೆಯ ಅಸಮಾಧಾನಗಳ ನಡುವೆಯೇ ನಮ್ಮ ಬದುಕು ಹರಡಿಕೊಂಡಿದೆ. ಆದರೆ ಅಸಮಾಧಾನಗಳು ಭಾರೀ ದೊಡ್ಡವಾಗಿ ಬದುಕುಗಳಿಗೆ ಹೊಡೆತವನ್ನು ನೀಡಿದಾಗ ಮಾತ್ರವೇ ಅವು ಸುದ್ದಿಯಾಗುತ್ತವೆ. ಯಾಕೆಂದರೆ ಆ ವೇಳೆಗೆ ಅವು ನಮ್ಮ ಬದುಕುಗಳನ್ನು ಕಬಳಿಸಿಬಿಟ್ಟಿರುತ್ತವೆ.

ಇದೇ ಕಾರಣಕ್ಕೆ ಅಸಮಾಧಾನಗಳನ್ನು ನಮ್ಮಲ್ಲೇ ಭೂಗತಗೊಳಿಸಲು ಪ್ರಯತ್ನ ಮಾಡುವುದು ಅಪಾಯಕರ. ಹಾಗೆ ಮಾಡಿದರೂ ಅವು ಒಂದಿಲ್ಲೊಂದು ರೂಪದಲ್ಲಿ ಒಟ್ಟಿಗೆ ಆಸ್ಫೋಟಗೊಳ್ಳುತ್ತವೆ. ಆಗ ನಮ್ಮ ಆ ಅತಿರೇಕದ ವರ್ತನೆಗೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಅಥವಾ ಯಾರ ಮೇಲೆ ಅಸಮಾಧಾನವಿರುತ್ತದೋ ಅವರನ್ನು ಬಿಟ್ಟು ಇತರರ ಮೇಲೆ ನಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಅವರ ಜತೆಗಿನ ಸಂಬಂಧಗಳನ್ನು ಕೆಡಿಸಿಕೊಳ್ಳಬಹುದು. ನಮ್ಮ ವರ್ತನೆಯ ಬಗ್ಗೆ ನಮಗೇ ಪಶ್ಚಾತ್ತಾಪವಾಗಬಹುದು.

ಅಸಮಾಧಾನಗಳಿಗೆ ಕಾರಣಗಳು
ಅಸಮಾಧಾನಗಳಿಗೆ ಹಲವು ಕಾರಣಗಳಿರಬಹುದು. ನಮ್ಮ ಹುಟ್ಟು, ಪರಿಸ್ಥಿತಿಗಳು, ರೂಪ, ಆಕಾರಗಳು, ನಿಯಂತ್ರಣವಿಲ್ಲದ ಸ್ವಭಾವ ಮತ್ತು ವರ್ತನೆಗಳು ಇತ್ಯಾದಿ ವೈಯಕ್ತಿಕ ಕಾರಣಗಳಿದ್ದಾಗ ಅವನ್ನು ನಾವು ಹೇಳಿಕೊಳ್ಳಲು ತುಂಬಾ ಸಂಕೋಚಪಡುತ್ತೇವೆ. ಕೆಲವೊಮ್ಮೆ ಇಂತಹ ಅಸಮಾಧಾನಗಳನ್ನು ಇತರರು ನಮ್ಮಲ್ಲಿ ಹುಟ್ಟುಹಾಕುತ್ತಾರೆ. ಇನ್ನು ಹೊರಗಿನ ಪ್ರಪಂಚದಿಂದ ಮತ್ತೂ ಹೆಚ್ಚಿನ ಅಸಮಾಧಾನಗಳು ಹುಟ್ಟಬಹುದು.

ಚಿಕ್ಕಮಕ್ಕಳಿದ್ದಾಗ ಈ ಪ್ರಪಂಚ ನ್ಯಾಯಯುತವಾಗಿದೆ ಅಥವಾ ನಾವು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎನ್ನುವ ತತ್ತ್ವ ಗಳನ್ನು ಹೇಳಿಕೊಡಲಾಗುತ್ತದೆ. ಆದರೆ ಬೆಳೆದು ದೊಡ್ಡವರಾದಂತೆಲ್ಲ ಇವುಗಳನ್ನು ಕಾಣಲು ಪ್ರಯತ್ನಪಡುವ ನಮ್ಮ ಮುಖಕ್ಕೇ ಹೊಡೆತ ಬಿದ್ದು ಹಲ್ಲುಮುರಿಯುವಂತಹ ವಾಸ್ತವ ಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಇವೆಲ್ಲದರ ಜತೆ ಇಂದಿನ ಮಾಹಿತಿಯುಗದಲ್ಲಿ ನಮಗೆ ಸಿಗುವ ಲೆಕ್ಕವಿಲ್ಲದಷ್ಟು ಕಹಿ ವಿಚಾರಗಳು ಮನಸ್ಸನ್ನು ಕಲಕಬಲ್ಲವು. ನಮ್ಮ ಭಾವನಾತ್ಮಕ ವಿಚಾರಗಳನ್ನು ನೋಯಿಸುವ ವಿಷಯಗಳು ಹೆಚ್ಚಿನ ಆಳದ ಅಸಮಾಧಾನಗಳನ್ನು ಸೃಷ್ಟಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇತರರೊಡನೆ ನಮ್ಮನ್ನು ಹೋಲಿಸಿಕೊಂಡು ನೋಡುವುದು ಮನಸ್ಸಿಗೆ ಹೆಚ್ಚಿನ ಅಸಮಾಧಾನವನ್ನು ಉಂಟುಮಾಡಬಲ್ಲವು.
ಆತ್ಮವಿಶ್ವಾಸ ಇಲ್ಲದ ವ್ಯಕ್ತಿಗಳಲ್ಲಿ ಅತ್ಯಂತ ಬೇಗನೆ ಅಸಮಾಧಾನಗಳು ಮೂಡುತ್ತವೆ.

ಕೆಲವರು ತಮ್ಮನ್ನು ತಾವು ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿಟ್ಟುಕೊಂಡು ನೋಡುತ್ತಾರೆ. ಇವರ ಆತ್ಮವಿಶ್ವಾಸಗಳು ಅಷ್ಟು ಬೇಗನೆ ನಲುಗುವುದಿಲ್ಲ. ಪ್ರಪಂಚದಲ್ಲಿ ಯಾರು ಏನನ್ನೇ ಮಾಡಿದರೂ, ಏನನ್ನೇ ಸಾಧಿಸಿದರೂ ಇವರು ತಮ್ಮನ್ನು ತಾವು ಉನ್ನತ ಸ್ಥಾನದಲ್ಲಿಟ್ಟುಕೊಂಡು ನೋಡುತ್ತಾರೆ. ಈ ಕಾರಣ ಇವರು ಹೆಚ್ಚಿನ ಅಸಮಾಧಾನಗಳಿಗೆ ಬಲಿಯಾಗುವುದಿಲ್ಲ. ಮತ್ತೆ ಕೆಲವರು ತಮ್ಮನ್ನು ತಾವು ಇತರರಿಗಿಂತ ಕೆಳಸ್ಥಾನದಲ್ಲಿ ಇಟ್ಟುಕೊಂಡು ಇತರರ ಹೆಚ್ಚಳಿಕೆಯನ್ನು ಒಪ್ಪಿಕೊಂಡು ತಮ್ಮ ವಯಕ್ತಿಕ ಲೋಕದ ವಿಚಾರಗಳಲ್ಲಷ್ಟೇ ಆಸಕ್ತಿ ತೋರಿಸುತ್ತ ನಿರುಮ್ಮಳವಾಗಿ ಇದ್ದುಬಿಡುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಲೋಕದ ಇತರರೊಡನೆ ಸಮಾನತೆಯನ್ನು ಸಾಧಿಸುವ ದೃಷ್ಟಿಯಿಂದ ಒಡನಾಡುತ್ತಾರೆ. ಇಂಥವರಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳೂ ಅಸಮಾಧಾನವನ್ನು ಮೂಡಿಸಬಲ್ಲವು.

ಇತ್ತೀಚೆಗಿನ ತಾಂತ್ರಿಕ ಸಾಧನೆಗಳ ಕಾರಣ ನಾವು ಮನುಷ್ಯರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದನ್ನು ಕಡಿಮೆ ಮಾಡುತ್ತ ನಡೆದಿದ್ದೇವೆ. ಅಂದರೆ ಜನರನ್ನು ಭೇಟಿಮಾಡದೆ, ಅವರ ಸತ್ಯಾನುಸತ್ಯಗಳನ್ನು ಅಳೆಯದೆ ಕೇವಲ ದೂರವಾಣಿ, ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಇಟ್ಟುಕೊಳ್ಳುವ ಮೂಲಕ ತೆರೆಯ ಮೂಲಕ ಕೇಳಿ, ಕಂಡದ್ದನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತೇವೆ. ಈ ಕಾರಣ ಪರಿಸ್ಥಿತಿಯ ಸಹಜತೆಯನ್ನು ಅಳೆಯುವಲ್ಲಿ ನಾವು ಸೋಲುತ್ತಿದ್ದೇವೆ. ಈ ವಿಚಾರಗಳು ಕೂಡ ನಮ್ಮಲ್ಲಿ ಇನ್ನೂ ಹೆಚ್ಚಿನ ಅಸಮಾಧಾನಗಳು ಮೂಡಿಸಬಲ್ಲವು.

ಯಾವುದನ್ನು ಈ ಹಿಂದೆ ನಾವು ವ್ಯಕ್ತಿಗತವಾಗಿ ಮಾತನಾಡಿ ಸರಿಪಡಿಸಿಕೊಳ್ಳಬಲ್ಲವರಾಗಿದ್ದೆವೋ ಅವನ್ನೀಗ ಮೌನ ಅಸಮಾಧಾನಗಳ ರೂಪದಲ್ಲಿ ಹೆಚ್ಚು, ಹೆಚ್ಚು ಹೂತುಹಾಕುತ್ತಿದ್ದೇವೆ. ಆದರೆ ಈ ರೀತಿ ನುಂಗಿಕೊಂಡ ಅಸಮಾಧಾನಗಳು ಇತರ ವ್ಯಕ್ತಿಗಳ ಬಗ್ಗೆ ನಾವು ಮುಂದೆ ತೀವ್ರ ಅಸಮಾಧಾನಗಳನ್ನು ಹೊಂದುವಂತೆ ಮಾಡಬಹುದು.

ಉದಾಹರಣೆಗೆ ಗೆಳೆಯರೊಬ್ಬರು ಕೊನೆಯ ಘಳಿಗೆಯಲ್ಲಿ ಬರುತ್ತಿದ್ದೇವೆಂದ ಸ್ಥಳಕ್ಕೆ ಬರದೇ ಹೋಗಿ ಕೇವಲ “ಸಾರಿ’ ಎನ್ನುವ ಸಂದೇಶವನ್ನು ಕಳಿಸಬಹುದು. ಅವರ ಧ್ವನಿಯನ್ನು ಕೇಳಿಸಿಕೊಳ್ಳಲು ಅವಕಾಶವಿಲ್ಲದಿದ್ದರೆ, ಅವರ ದನಿಯಲ್ಲಿನ ಗಡಿ-ಬಿಡಿ, ಆತಂಕ, ಪಶ್ಚಾತ್ತಾಪ ಅಥವಾ ದುಃಖವನ್ನು ಅರಿಯಲು ನಮಗೆ ಸಾಧ್ಯವಾಗದ ಕಾರಣ ನಮ್ಮಲ್ಲಿ ಅಸಮಾಧಾನಗಳು ಮೂಡಿ ಹಾಗೇ ಭೂಗತವಾಗಬಲ್ಲವು. ಮುಂದೆ ಇವೇ ಅಸಮಾಧಾನಗಳು ಅವರ ಸಣ್ಣ ಪುಟ್ಟ ತಪ್ಪುಗಳನ್ನು ನಾವು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳುವಂತೆ ಮಾಡಿ ನಮ್ಮ ಮನಸ್ಸಿನಲ್ಲಿ ಕಹಿಯನ್ನು ಬಿತ್ತಬಲ್ಲದು. ವ್ಯಕ್ತಿಗಳ ನಡುವೆ ಗೋಡೆಗಳನ್ನು ನಿರ್ಮಿಸಬಹುದು. ಮಿಂಚಂಚೆಗಳೂ ಇವೇ ಪರಿಣಾಮಗಳನ್ನು ಸೃಷ್ಟಿಸಬಲ್ಲವು.

ಜರ್ಮನಿಯ ಮನೋಶಾಸ್ತ್ರಜ್ಞ ಮೈಕೇಲ್‌ ಲಿಂಡೆನ್‌ ಎಂಬಾತ ಈ ಬಗ್ಗೆ ಅಧ್ಯಯನ ನಡೆಸಿ post traumatic embitterment disorder (PTED) ಎಂಬ ಪದವನ್ನು ಚಲಾವಣೆಗೆ ತಂದಿದ್ದಾನೆ. ಕಹಿಯನ್ನು ಅಥವಾ ಅಸಮಾಧಾನಗಳನ್ನು ಹೊತ್ತು ಅವುಗಳ ಬಗ್ಗೆ ಮಾತಾಡದೇ ಬಹುಕಾಲ ನರಳುವ ಜನರಲ್ಲಿ ಈ ಅಸಮಾಧಾನಗಳು ಭೌತಿಕವಾದ ಹಲವು ರೀತಿಯ ಪರಿಣಾಮಗಳನ್ನು ಬೀರುವ ಬಗ್ಗೆ ಈತ ಹೇಳಿದ್ದಾನೆ.

ಬಹುಕಾಲದ ಹಲವು ಅಸಮಾಧಾನಗಳು ಮನುಷ್ಯರ ಜೀವನಿರೋಧಕ ಶಕ್ತಿಯನ್ನು ಕೂಡ ಕಡಿಮೆಮಾಡಬಲ್ಲದು. ಅಸಮಾಧಾನಗಳದೇ ವ್ಯಸನವೊಂದು ಹುಟ್ಟಿಕೊಳ್ಳಬಹುದು. ಅವುಗಳೇ ಅವರ ಬದುಕಿನ ಗುರುತುಗಳಾಗಬಹುದು. ತಲೆನೋವು, ನಿದ್ದೆ ಬರದಿರುವುದು, ದೀರ್ಘ‌ಕಾಲದ ಮೈ-ಕೈ ನೋವುಗಳು ಹೀಗೆ ಅವರಲ್ಲಿ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡಗಳು ಅವರನ್ನು ಕಾಡಬಹುದು. ಇನ್ನೂ ಹಲವು ಖಾಯಿಲೆಗಳಿಗೆ ಅವರು ಸುಲಭ ತುತ್ತುಗಳಾಗಬಹುದು.

ಅಸಮಾಧಾನಗಳ ಕಹಿಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಈ ಹಿಂದೆ ತೀವ್ರ ಅಸಮಾಧಾನಗಳನ್ನು ತಂದಿರುವ ಸ್ಥಳ, ಘಟನೆ ಮತ್ತು ವ್ಯಕ್ತಿಗಳನ್ನು ಸಾಧ್ಯವಾದಷ್ಟೂ ಕಡಿಮೆಮಾಡಿಕೊಳ್ಳಬಹುದು. ತಾರತಮ್ಯಗಳ ಬಗ್ಗೆ ಸಾಧ್ಯವಾದಷ್ಟು ಮಾತನ್ನು ಕಡಿಮೆಮಾಡಿ. ಈ ಬಗ್ಗೆ ನಿಮ್ಮ ಸಂವೇದನೆಗಳು ತೀವ್ರವಾಗಿದ್ದಲ್ಲಿ ಆ ಬಗೆಯ ಸಂಭಾಷಣೆಯನ್ನು ಶುರುಮಾಡುವುದನ್ನು ತಡೆಯಿರಿ. ಪ್ಯಾಂಡಮಿಕ್‌ನಂತಹ ವಿಚಾರಗಳು ನಿಮ್ಮಲ್ಲಿ ತೀವ್ರವಾದ ಆತಂಕಗಳನ್ನು ಸೃಷ್ಟಿಸಿದಲ್ಲಿ ಆ ಬಗ್ಗೆ ಓದುವುದನ್ನು, ವಾರ್ತೆಗಳನ್ನು ಕೇಳುವುದನ್ನು ನಿಯಮಿತವಾಗಿ ಕಡಿಮೆಮಾಡುತ್ತ ಬನ್ನಿ.

ಕಹಿಯ ಹನಿ ಒಮ್ಮೆ ಆಳವಾಗಿ ಹೊಕ್ಕಮೇಲೆ ಹರಡುತ್ತ ಹೋಗಬಲ್ಲದು. ಆ ಕಾರಣ ಅದಿನ್ನೂ ರೂಪುಗೊಳ್ಳುತ್ತಿರುವ ಮೊದಲಲ್ಲೇ ಅದನ್ನು ಕಿತ್ತು ಬಿಸಾಡಲು ಕಲಿಯಿರಿ. ಇದನ್ನು ಮಾಡಲು ನಿಮಗೆ ಅಸಮಾಧಾನವನ್ನು ತಂದ ವಿಚಾರದ ಬಗ್ಗೆ ನಿಮ್ಮನ್ನು ನೀವು ಐದು ಪ್ರಶ್ನೆಗಳನ್ನು ಕೇಳಿಕೊಳ್ಳಿ.

ಹೆಚ್ಚು ಅತಿಯಾಗಿ ಸ್ಪಂದಿಸಿದೆನೇ?- ಇದನ್ನು ಆಗಾಗ ಎಲ್ಲರೂ ಮಾಡುತ್ತಾರೆ. ಇದು ನೀವೊಬ್ಬರು ಮಾತ್ರ ಮಾಡುವ ತಪ್ಪೇನಲ್ಲ. ತಪ್ಪುಗಳನ್ನು ನೀವೊಂದು ವಿಚಾರಕ್ಕೆ ಮಾಡಿದರೆ ಮತ್ತೂಬ್ಬರು ಇನ್ನೊಂದು ವಿಚಾರದಲ್ಲಿ ಮಾಡಬಲ್ಲರು. ಹಾಗಾಗಿ ವ್ಯತ್ಯಾಸಗಳು ಬೆಳಕಿಗೆ ಬಂದಾಗ ತತ್‌ಕ್ಷಣ ಸ್ಪಂದಿಸದೆ ಸ್ವಲ್ಪ ಸಮಯ ತೆಗೆದುಕೊಳ್ಳಿ. ನಂಬಬಲ್ಲಂತ ನಿಮ್ಮ ಆತ್ಮೀಯರ ಬಳಿ ಚರ್ಚಿಸಿ ಸಲಹೆ ತಗೊಳ್ಳಲು ಹಿಂತೆಗೆಯದಿರಿ.

ತಪ್ಪೇನೆಂದು ನೀವು ವಿವರಗಳನ್ನು ನೀಡಿದಿರಾ/ಅಥವಾ ಕೇಳಿದಿರಾ?- ನಿಮ್ಮಲ್ಲಿ ಮೂಡಿದ ಅಸಮಾಧಾನಗಳಿಗೆ ಕಾರಣಗಳಿದ್ದವಾ ಅಥವಾ ಅದೊಂದು ಹೇಳಲಾಗದ ನಿಮ್ಮದೇ ವಯಕ್ತಿಕ ಭಾವನೆ ಅಥವಾ ನಿರ್ಣಯವೇ ಎಂದು ಕೇಳಿಕೊಳ್ಳಿ. ಬೇರೆಯವರಿಗೆ ನಿಮ್ಮಿಂದ ಅಸಮಾಧಾನಗಳಾಗಿದ್ದು ನಿಮ್ಮ ಅರಿವಿಗೆ ಬಂದಲ್ಲಿ ಅದರ ಬಗ್ಗೆ ವಿವರಣೆ ನೀಡಲು, ವಿಚಾರಗಳನ್ನು ತಿಳಿಯಾಗಿಸಲು ಪ್ರಯತ್ನಿಸಿ. ಮಾತಾಡಿ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದು ತಟ್ಟನೆ ಸಂದರ್ಭಗಳನ್ನು ತಿಳಿಯಾಗಿಸಬಲ್ಲದು.

ಬಲಿಪಶುವಾದಂತೆ ನಿಮಗೆ ಅನ್ನಿಸುತ್ತಿದೆಯೇ?- ನೀವು ಅಂದುಕೊಂಡಿರುವುದು ತಪ್ಪಲ್ಲದೇ ಇರಬಹುದು. ಆದರೆ ಕೆಲವೊಮ್ಮೆ ನಮ್ಮನ್ನು ನಾವು ನೊಂದವರಂತೆ ಚಿತ್ರಿಸಿಕೊಳ್ಳುವುದನ್ನು ಮನಸ್ಸು ಬಯಸುತ್ತದೆ. ಹಾಗೆ ಕಲ್ಪಿಸಿಕೊಂಡು ಭಾವುಕರಾಗಿ ಮತ್ತೆ ಮತ್ತೆ ನೋಯುತ್ತ ನಮ್ಮನ್ನು ನಾವು ಬಲಿಪಶುಗಳನ್ನು ಮಾಡಿಕೊಳ್ಳುತ್ತ ಇನ್ನೂ ಹೆಚ್ಚು ಅಸಮಾಧಾನಗಳನ್ನು ಹೊತ್ತು ಬದುಕುವುದನ್ನು ಶುರುಮಾಡಬಹುದು. ಈ ಕಾರಣ ನಮ್ಮ ಮನಸ್ಸು ನಮ್ಮನ್ನು ಮೋಸಮಾಡದಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಋಣಾತ್ಮಕ ಭಾವನೆಗಳು ಮೂಡುತ್ತಿವೆಯೇ?- ನಿಮ್ಮ ಮನಸ್ಸಿಗೆ ಹೆಚ್ಚಿನ ನೆಗೆಟಿವ್‌ ಆಲೋಚನೆಗಳು ಬರುತ್ತಿವೆಯೇ ಎಂದು ಗಮನಿಸಿ. ಪ್ರತೀ ದಿನ ಕೇವಲ ಹತ್ತು ನಿಮಿಷಗಳ ಕಾಲ ನಿಮ್ಮ ಬದುಕಿನ ಧನಾತ್ಮಕ (ಎಷ್ಟು ಚಿಕ್ಕವಾದರೂ ಪರವಾಗಿಲ್ಲ) ವಿಚಾರಗಳನ್ನು ನೆನೆಯಿರಿ. ಅದು ನಿಮ್ಮ ದಿನದ ಬಗ್ಗೆಯಿರಬಹುದು, ನಿಮ್ಮ ಬದುಕು ಅಥವಾ ನಿಮ್ಮ ವ್ಯಕ್ತಿತ್ವದ ಬಗ್ಗೆಯೂ ಆಗಬಹುದು. ಆಶ್ಚರ್ಯ ಎಂದರೆ ಈ ಪಾಸಿಟಿವ್‌ ವಿಚಾರಗಳು ಇಡೀ ದಿನದಲ್ಲಿ ಕವಿದ ಕೆಟ್ಟ ಭಾವನೆಗಳ ಮೋಡವನ್ನು ಹತ್ತು ನಿಮಿಷದಲ್ಲಿ ಚದುರಿಸಬಲ್ಲವು.

ನಾನು ಆತ್ಮವಿಶ್ವಾಸವನ್ನು ಹೊಂದಿದ್ದೇನೆಯೇ?- ನಮ್ಮಲ್ಲಿ ನಮಗೆ ಆತ್ಮವಿಶ್ವಾಸವಿದ್ದಲ್ಲಿ ಇತರರು ನಮ್ಮನ್ನು ಗೌರವಿಸುವುದು ಅಥವಾ ಗೌರವಿಸದಿರುವುದು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಮನುಷ್ಯನಿಗೆ ಆ ಮಟ್ಟಿಗೆ ಒಂದಿಷ್ಟು ಗರ್ವ, ಅಹಂ ಅಥವಾ ಆತ್ಮ ಪ್ರತಿಷ್ಟೆಗಳ ಅಗತ್ಯವಿದೆ. ಎಲ್ಲಾದರೂ ಒಂದು ಕಡೆ ನೀವು ಯಾಕೆ ಒಳ್ಳೆಯ ವ್ಯಕ್ತಿ, ಉದ್ಯೋಗಿ, ಸಹಧರ್ಮಿ ಇತ್ಯಾದಿಗಳ ಪಟ್ಟಿಯನ್ನು ಬರೆಯಿರಿ. ಅದನ್ನು ಯಾರಿಗಾದರೂ ಹೇಳುವ, ಒಪ್ಪಿಸುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಗತ್ಯವಿಲ್ಲ. ಇದು ಕೇವಲ ನಿಮಗಾಗಿ. ನಿಮ್ಮ ಬಗ್ಗೆ ಅಭಿಪ್ರಾಯ ತಳೆಯುವ ಎಲ್ಲ ಹಕ್ಕುಗಳು ನಿಮಗಿವೆ. ನಿಮ್ಮ ಒಳ್ಳೆಯತನದ ಈ ಪಟ್ಟಿಯನ್ನು ಆಗಾಗ ಓದುತ್ತಿರಿ, ಈ ಪಟ್ಟಿ ನೀವು ನಂಬುವಂತ್ತಿದ್ದಲ್ಲಿ ಇದು ನಿಮ್ಮ ಆರಿವಿನಲ್ಲಿ ನಿಲ್ಲುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮೇಲಿನ ಐದು ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಂಡರೆ, ನಿಮ್ಮಲ್ಲೇ ಮೌನವಾಗಿ ಲೀನವಾಗಿ ತುಡಿಯುತ್ತಿದ್ದ ಅಸಮಾಧಾನಗಳು ನಿಧಾನವಾಗಿ ಕರಗುತ್ತವೆ.

*ಡಾ| ಪ್ರೇಮಲತಾ ಬಿ., ಲಿಂಕನ್‌

Advertisement

Udayavani is now on Telegram. Click here to join our channel and stay updated with the latest news.

Next