Advertisement

Desi Swara: ಭಾರತದ ಖರ್ಜೂರ “ಹುಣಸೆಹಣ್ಣು”

12:04 PM Feb 17, 2024 | Team Udayavani |

ಭಾರತದ ಖರ್ಜೂರ ಯಾವುದು ?- ಹುಣಸೆ ಹಣ್ಣು . ಹೌದು ಇದು ವಿಚಿತ್ರವಾದರೂ ನಿಜ. ನಾವು ಮಾತ್ರವಲ್ಲದೆ ಬಹುತೇಕ ಎಲ್ಲ ದೇಶಗಳಲ್ಲೂ Tamarind ಅಂತ ಕರೆಯುದಿಲ್ಲವೇ ? ಇದರ ಮೂಲ ಅರೇಬಿಕ್‌. ಅರಬ್ಬರು ಹುಣಸೆ ಹಣ್ಣನ್ನು ತರ್ಮಾ ಹಿಂದ್‌ ಎಂದು ಕರೆಯುತ್ತಾರೆ. ತರ್ಮ ಅಂದರೆ ಖರ್ಜೂರವೆಂದು ಅರ್ಥ.

Advertisement

ಅರಬ್‌ ವ್ಯಾಪಾರಿಗಳು ಭಾರತಕ್ಕೆ ಬಂದಾಗ ಬಹಳಷ್ಟು ಭಾಗಗಳಲ್ಲಿ ಕಂಡ ಈ ಹುಣಸೆ ಮರವನ್ನು “ತರ್ಮ-ಎ-ಹಿಂದ್‌” ಎಂದು ಕರೆದರು. ತರ್ಮ ಎಂದರೆ ಖರ್ಜೂರ. “ತರ್ಮ-ಎ-ಹಿಂದ್‌’ ಎಂದರೆ ಭಾರತದ ಖರ್ಜೂರ ಎಂದು. ಇದರ ಉಪಯೋಗವನ್ನು ಅರಿತ ಅರಬರು ಇತರ ಉತ್ಪನ್ನಗಳೊಂದಿಗೆ ಹುಣಸೆ ವಹಿವಾಟನ್ನೂ ಭಾರತದೊಂದಿಗೆ ಪ್ರಾರಂಭಿಸಿದರು. ಇಂದಿಗೂ ನಮ್ಮ ಭಾರತ ಹುಣಸೆ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಾಚೀನ ಕಾಲದಿಂದಲೂ ನಮ್ಮ ದೇಶ ಬಹಳಷ್ಟು ವಿದೇಶಿಯರಿಗೆ ವ್ಯಾಪಾರದ ಕೇಂದ್ರಬಿಂದುವಾಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಬೆಳೆಯುವ ಉತ್ಪನ್ನಗಳು ವಿದೇಶೀಯರಿಗೆ ಅತ್ಯಮೂಲ್ಯವೆನಿಸಿದೆ. ಅಂತಹ ಉತ್ಪನ್ನಗಳಲ್ಲಿ ಹುಣಸೆ ಹಣ್ಣೂ ಒಂದು.

ಕೆಲವರ ಪ್ರಕಾರ ಹುಣಸೆ ಇಥಿಯೋಪಿಯಾದಿಂದ ಕ್ರಿ.ಶ 100 – 600ರ ಸುಮಾರಿನಲ್ಲಿ ಭಾರತ ಸೇರಿದೆ. ಸಮುದ್ರ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ ಇಥಿಯೋಪಿಯನ್ನರು ಬಹಳಷ್ಟು ದಿನ ಹಾಳಾಗದೆ, ಬಾಯಾರಿಕೆ ನೀಗಿಸುವ ಹುಣಸೆಯನ್ನು ತಮ್ಮ ಜತೆ ತಂದಿರಬೇಕು. ಹೀಗೆ ಬಂದ ಹುಣಸೆ ಭಾರತದಲ್ಲಿ ಬೇರೂರಿರಬೇಕು ಎಂದು ಹೇಳುವುದುಂಟು.

Advertisement

ಆದರೆ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಒಂದಾದಂತಹ ಬ್ರಹ್ಮ ಸಂಹಿತ ಹಾಗೂ ವಿಷ್ಣು ಧರ್ಮ ಸೂತ್ರಗಳಲ್ಲಿ ಹೇಳುವಂತೆ ಕ್ರಿ.ಪೂ. 1200 -200 ಸುಮಾರಿನಲ್ಲಿ ಭಾರತದೆಲ್ಲೆಡೆ ಹುಣಸೆ ಮರವನ್ನು ವ್ಯಾಪಕವಾಗಿ ಬೆಳೆಯುತ್ತಿದ್ದರು. ಅಷ್ಟೇ ಅಲ್ಲದೆ ಆಯುರ್ವೇದದ ಚರಕ ಸಂಹಿತದಲ್ಲೂ ಹುಣಸೆಯ ಔಷಧೀಯ ಗುಣಗಳ ಪ್ರಸ್ತಾವವಿದೆ. ಹಾಗಾಗಿ ಬಹುಗುಣಗಳನ್ನು ಹೊಂದಿರುವ ಹುಣಸೆ ಭಾರತ ಮೂಲವನ್ನೇ ಹೊಂದಿರಬೇಕು ಎಂದು ಅನಿಸುತ್ತದೆ. ವೈಜ್ಞಾನಿಕವಾಗಿ ಹುಣಸೆ ಮರವನ್ನು “ಟಮರಿಂಡಸ್‌ ಇಂಡಿಕಾ’ ಎಂದು ಕರೆಯಲಾಗುತ್ತದೆ.

ಪ್ರಕೃತಿಯನ್ನು ಸಂಪೂರ್ಣವಾಗಿ ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಜಾಣ್ಮೆ, ಸ್ವಾರ್ಥವಿರುವ ಮನುಷ್ಯನ ಕೈಗೆ ಸಿಕ್ಕ ಹುಣಸೆ ಮರ ಹೊರತೇನಲ್ಲ. ಹುಣಸೆ ಮರದ ಪ್ರತಿಯೊಂದು ಭಾಗದಿಂದಲೂ ಮನುಷ್ಯನಿಗೆ ಬಹಳಷ್ಟು ಉಪಯೋಗವಿದೆ. ದಕ್ಷಿಣ ಭಾರತದ ಪ್ರತೀ ಅಡುಗೆಯಲ್ಲಿಯೂ ಹುಣಸೆಯ ಪಾತ್ರ ಬಲು ದೊಡ್ಡದು. ಮೀನು ಮಾಂಸವನ್ನು ಮೃದುವಾಗಿಸಲೂ ಹುಣಸೆ ರಸವನ್ನು ಹಚ್ಚಲಾಗುತ್ತದೆ. ಹುಣಸೆ ರಸದ ಪೇಯ ಭಾರತದಲ್ಲಿ ಅಷ್ಟೇ ಅಲ್ಲದೆ ಚೀನ, ಥೈಲ್ಯಾಂಡ್‌ಗಳಲ್ಲೂ ಪ್ರಸಿದ್ಧ. ಹುಣಸೆಯ ಹೂವಿನ ಮಕರಂದದಿಂದ ಆದಂತಹ ಜೇನು ಬಹಳ ರುಚಿ ಅಲ್ಲದೆ ಬಹಳ ದುಬಾರಿ.

ಹುಣಸೆಗೆ ಹುಳಿಯನ್ನು ಕೊಡುವ ಟಾರ್ಟಾರಿಕ್‌ ಆಸಿಡ್‌ ಹಾಗೂ ವಿಟಮಿನ್‌-ಸಿ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ ಉಪ್ಪಿನಲ್ಲಿ ನೆನೆಸಿದ ಸುಟ್ಟ ಹುಣಸೆ ಬೀಜ ಗಂಟು ನೋವಿಗೆ ರಾಮಬಾಣ. ಹುಣಸೆ ಬೀಜದ ಎಣ್ಣೆ ಹಲ್ಲಿನ ಆರೋಗ್ಯವನ್ನು ಕಾಪಾಡುವುದರ ಜತೆಗೆ ಜೀರ್ಣಕ್ರಿಯೆಗೂ ಸಹಕಾರಿ. ಇದರ ತೊಗಟೆ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೆ ಭಾರತದ ಸೆಣಬು ಹಾಗೂ ಜವಳಿ ಉದ್ಯಮಗಳಲ್ಲೂ ಹುಣಸೆ ಬೀಜದ ಪಿಷ್ಟವನ್ನು ಉಪಯೋಗಿಸಲಾಗುತ್ತದೆ. ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಕಾಲದಲ್ಲಿ ಪಾತ್ರೆಯನ್ನು ತೊಳೆಯಲು ಹುಣಸೆಯನ್ನೇ ಉಪಯೋಗಿಸುತ್ತಿದ್ದರು.

ಗಟ್ಟಿಮುಟ್ಟಾದ ಈ ಮರವನ್ನು ವಿವಿಧ ಉಪಕರಣಗಳ ತಯಾರಿಯಲ್ಲಿ ಹಾಗೂ ಒನಕೆ, ಚರಕಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಉಷ್ಣಜನಕ ಸಾಮರ್ಥ್ಯವಿರುವುದರಿಂದ ಉರುವಲಾಗಿಯೂ ಉಪಯೋಗ.

ಅಷ್ಟೇ ಅಲ್ಲದೆ ಹುಣಸೆಯ ಮಹತ್ವವನ್ನು ಅರಿತಿದ್ದ ಶೇರ್‌ ಶಾಹ್‌ ಸೂರಿ ಕ್ರಿ.ಶ 1540 -1545ರ ಸುಮಾರಿನಲ್ಲಿ ನಿರ್ಮಾಣಗೊಂಡ ಗ್ರಾಂಡ್‌ ಟ್ರಂಕ್‌ ರೋಡ್‌ನ‌ ಇಕ್ಕೆಲಗಳಲ್ಲಿ ಹುಣಸೆ ಹಾಗೂ ಮಾವಿನಮರಗಳನ್ನು ನೆಟ್ಟಿದ್ದ ಎಂಬ ದಾಖಲೆಗಳಿವೆ. ಪೇಷಾವರದಿಂದ ಕಲ್ಕತ್ತದವರೆಗೆ ನಡೆದು ಹೋಗುತ್ತಿದ್ದ ವ್ಯಾಪಾರಸ್ಥರ ಬಾಯಾರಿಕೆ ನೀಗಿಸಲು ಈ ಮರಗಳನ್ನು ನೆಡಲಾಗಿತ್ತು ಎಂಬ ಮಾತಿದೆ. ಭಾರತ ಮೂಲದ ಭಾರತದ ಖರ್ಜೂರದ ಉಪಯೋಗ ತಿಳಿದ ಮೇಲಾದರೂ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.

*ನಾನಕ್‌ ಶೆಟ್ಟಿ ಕಿನ್ನಿಗೋಳಿ ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next