Advertisement

Desi Swara: ಹೊನ್ನುಡಿ- ನಮ್ಮಲ್ಲಿನ ಅಹಂಕಾರ ಕಳೆಯಬೇಕು…

12:26 PM Jul 13, 2024 | Team Udayavani |

ಯುದ್ಧದಲ್ಲಿ ಆರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು. ಪ್ರತೀ ಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀಕೃಷ್ಣನು ಹೇಳುತ್ತಿದ್ದ “ಎಷ್ಟು ವೀರಶಾಲಿಯಾಗಿದ್ದಾನೆ ಕರ್ಣ’ ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ, ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ಅಸ್ವಸ್ಥನಾಗಿ ಕೃಷ್ಣನಿಗೆ ಹೇಳುತ್ತಾನೆ.

Advertisement

“ಓ ವಾಸುದೇವಾ ತಾವು ಎಂತಹಾ ಪಕ್ಷಬೇಧ ಮಾಡುತ್ತಿದ್ದೀರಾ? ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು “ಮಹಾವೀರ ಕರ್ಣ’ ಎಂದು ಹೊಗುಳುತ್ತಿರುವುದೇಕೆ? ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. “ಏ ಪಾರ್ಥ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ.

ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಆಡಿ ಹಿಂದಕ್ಕೆ ಹೋಗುತ್ತಿದೆ. ಆದರೆ ನಾವು ಇರುತ್ತಿರಲಿಲ್ಲದಿದ್ದರೆ ನಿನ್ನ ರಥವು ಇಲ್ಲದಾಗುತ್ತಿತ್ತು’ ಎಂದು.

ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ.

Advertisement

ಆದರೆ ತನ್ನ ಪ್ರತಿಭೆಯಲ್ಲಿ ತುಂಬಾ ವಿಶ್ವಾಸ ಇಟ್ಟಿದ್ದ ಅರ್ಜುನನಿಗೆ ಯುದ್ಧದ ಕೊನೆಯ ದಿನ ಆ ಸತ್ಯದ ಅರಿವಾಯಿತು. ಸಾಧಾರಣವಾಗಿ ಎಲ್ಲ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ಅನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ, ಆದರೆ ಯುದ್ಧದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ. ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ಅನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತತ್‌ಕ್ಷಣ ರಥವು ಉರಿದು ಭಸ್ಮವಾಯಿತು. ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ.

ಆಗ ಕೃಷ್ಣ ಹೇಳುತ್ತಾನೆ, “ಆರ್ಜುನಾ ನಿನ್ನ ರಥವು ಭೀಷ್ಮ, ಕೃಪಾಚಾರ್ಯ, ದ್ರೋಣ, ಕರ್ಣ ಇವರೆಲ್ಲರ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ರಥವನ್ನು ಸೃಷ್ಟಿಸಿದೆ’.

ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ ಹೋಗುವ ಹಾಗೆಯೇ ಅನಿಸಿತು. “ನಾನು ಎಂಬ ಅಹಂ ಕೆಲವೊಮ್ಮೆ ಅರ್ಜುನನ ಹಾಗೆಯೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ. ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ಅನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು’.

Advertisement

Udayavani is now on Telegram. Click here to join our channel and stay updated with the latest news.

Next