ಸ್ವಾಮಿ ವಿವೇಕಾನಂದರು ಒಮ್ಮೆ ಆಸ್ಟ್ರೇಲಿಯಾಕ್ಕೆ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗಿಯಾಗಲು ತೆರಳಿದ್ದರು. ಸಮಾರಂಭದ ಬಳಿಕ ಸಮೀಪದ ಗ್ರಾಮದ ಹಿರಿಯರೊಬ್ಬರು ವಿವೇಕಾನಂದರನ್ನು ತಮ್ಮ ಹಳ್ಳಿಗೆ ಆಗಮಿಸಿ ಆಶೀರ್ವದಿಸಬೇಕೆಂದು ವಿನಂತಿಸಿಕೊಂಡಾಗ ವಿವೇಕಾನಂದರು ಮರು ಮಾತಿಲ್ಲದೇ ಒಪ್ಪಿ ಅವರೊಂದಿಗೆ ಗ್ರಾಮಕ್ಕೆ ತೆರಳಿದರು. ಆ ಸಂದರ್ಭ ವಿವೇಕಾನಂದರನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ. ನಡು ಹೊತ್ತಾದರೂ ಜನದಟ್ಟಣೆ ಕರಗುವುದೇ ಇಲ್ಲ.
ಇತ್ತ ವಿವೇಕಾನಂದರಿಗೆ ಸಾಕಷ್ಟು ಬಳಲಿಕೆಯಾಗುತ್ತದೆ. ಆದರೂ ತೋರ್ಪಡಿಸದೆ ಬಂದವರನ್ನು ನಗುತ್ತಲೇ ಮಾತನಾಡಿಸುತ್ತಾರೆ. ವಿವೇಕಾನಂದರು ಹಸಿದಿದ್ದಾರೆಂದು ತಿಳಿದ ವ್ಯಕ್ತಿಯೊಬ್ಬ ಅವರಿಗೆ ಊಟ, ಉಪಚಾರ ಮಾಡಲು ಮುಂದಾಗುತ್ತಾನೆ. ಅದಕ್ಕೆ ವಿವೇಕಾನಂದರು “ನನಗೆ ಸಾಕಷ್ಟು ಹಸಿವಾಗಿರುವುದು ನಿಜ. ಆದರೆ ಯಾರೂ ನನಗೆ ಉಪಹಾರದ ವ್ಯವಸ್ಥೆ ಮಾಡಿಲ್ಲವಲ್ಲ. ಅಭ್ಯಂತರವಿಲ್ಲದಿದ್ದರೆ ನಿನ್ನ ಮನೆಯಿಂದ ನನಗೆ ಊಟ ತರುವೆಯಾ?’ ಎಂದು ಕೇಳುತ್ತಾರೆ.
ಆಗ ಆ ವ್ಯಕ್ತಿಯು ‘ಸ್ವಾಮಿ..! ನಾನೊಬ್ಬ ಹೀನಕುಲದವನು. ನಿಮಗೆ ಅಭ್ಯಂತರ ವಿಲ್ಲದಿದ್ದರೆ ನಾನು ಹೋಗಿ ಅಂಗಡಿಯಿಂದ ತರಕಾರಿ, ಧಾನ್ಯಗಳನ್ನು ತರುತ್ತೇನೆ. ನೀವೇ ಅಡುಗೆ ಮಾಡಿಕೊಂಡು ತಿನ್ನುವಿರಾ?’ ಎಂದು ಕೇಳುತ್ತಾನೆ. ಅದಕ್ಕೆ ವಿವೇಕಾನಂದರು, ”ಯಾರು ಏನಾದರೂ ಅಂದುಕೊಳ್ಳಲಿ. ಜಾತಿ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು. ನಿನ್ನ ಮನೆಯಿಂದಲೇ ಊಟ ತೆಗೆದುಕೊಂಡು ಬಾ… ನನಗೇನೂ ಅಭ್ಯಂತರವಿಲ್ಲ’ ಎಂದು ಹೇಳಿ ಕಳುಹಿಸಿ ಆ ವ್ಯಕ್ತಿಯ ಮನೆಯಿಂದ ಆಹಾರ ತರಿಸಿಕೊಂಡು ಮನಸಾರೆ ಹೊಗಳುತ್ತಾ ಊಟ ಮಾಡಿದರು.
ಇಂತಹ ಘಟನೆಗಳಿಂದಲೇ ಅಲ್ಲವೇ ಅವರ ಅನುಯಾಯಿಗಳು ಅವರನ್ನು ದೈವಾಂಶ ಸಂಭೂತರೆಂದು ಕರೆಯುವುದು.
ಅವರ ತತ್ತ್ವಗಳು, ಯೋಚನಾ ಭಂಡಾರಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದಲ್ಲಿ ನಮ್ಮ ಜೀವನದಲ್ಲೂ ಮಹತ್ತರ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.