ಯಮಒಕಾ ತೆಶ್ಶು ಎಂಬ ಯುವಕನಿಗೆ ಓರ್ವ ಉತ್ತಮ ಝೆನ್ ಗರುಗಳಿಂದ ಮಹತ್ತರವಾದ ವಿದ್ಯೆಯನ್ನು ಕಲಿಯಬೇಕು ಎಂಬ ಹಂಬಲ. ತಾನು ಎಲ್ಲವನ್ನೂ ತಿಳಿದಿದ್ದೇನೆ. ತಾನು ತಿಳಿದಿರುವುದಕ್ಕಿಂತ ಹೆಚ್ಚಿನದ್ದನ್ನು ಕಲಿಸುವ ಗುರುಗಳಿಗಾಗಿ ಆತ ಹುಡುಕಾಡುತ್ತಿದ್ದನು. ಅದಕ್ಕಾಗಿ ಆತ ಬೇರೆ ಬೇರೆ ಝೆನ್ ಗುರುಗಳ ಬಳಿಗೆ ಅಲೆದಾಡುತ್ತಾ ಶೊಕೋಕು ಎಂಬಲ್ಲಿ ನೆಲಿಸಿದ್ದ ಡುಕುಒನ್ ಎಂಬ ಝೆನ್ ಗುರುಗಳ ಆಶ್ರಮದ ಬಳಿ ಬಂದನು. ಚುಟ್ಟಾ ಸೇದುತ್ತ ಕುಳಿತಿದ್ದ ಗುರು, “ನಿನಗೇನಾಗಬೇಕು ? ಎಂದು ಆತನಲ್ಲಿ ಕೇಳಿದರು.
ಆಗ ತನ್ನ ಪಾಂಡಿತ್ಯ ಪ್ರದರ್ಶನ ಆರಂಭಿಸಿದ ಯುವಕ, “ಮನಸ್ಸು, ಜ್ಞಾನೋದಯ, ಭ್ರಮೆ ಎಂಬುದಿಲ್ಲ, ಬುದ್ಧ, ಸಂತ, ಪಾಪಿ ಎಂಬುವವನಿಲ್ಲ. ಅವುಗಳೆಲ್ಲವೂ ಶೂನ್ಯ ಎಂದೆಲ್ಲ ವಿವರಿಸಿದನು. ಚುಟ್ಟಾದ ಹೊಗೆ ಹೀರುತ್ತಾ ಕುಳಿತಿದ್ದ ಗುರು ಡುಕುಒನ್ ಥಟ್ಟನೆ ಹೊಗೆಯನ್ನು ಯುವಕನ ಮುಖದ ಮೇಲೆ ಬಿಟ್ಟ. ಯಮಒಕಾ ಇದರಿಂದ ಸಿಟ್ಟು ಬಂತು.”ನೀವೆಂಥಾ ಗುರು? ನಿಮ್ಮಂಥವರನ್ನೆಲ್ಲ ಗುರು ಅಂತ ಕರೆಯೋದರಿಂದಲೇ ಝೆನ್ ಹಾಳಾಗ್ತಿರೋದು…’ ಎಂದೆಲ್ಲ ರೇಗಾಡಿದ.
ಆಗ ಗುರುಗಳು, “ಅದಿಲ್ಲ, ಇದಿಲ್ಲ. ಎಲ್ಲವೂ ಶೂನ್ಯ ಅಂದ ಮೇಲೆ ನಿನಗೆ ಈ ಸಿಟ್ಟು ಎಲ್ಲಿಂದ ಬಂತು ?’ ಎಂದು ಕೇಳಿದರು. ತತ್‌ಕ್ಷಣ ತನ್ನ ತಪ್ಪಿನ ಅರಿವಾಗಿ ಯಮಒಕಾ ತನ್ನ ಬಟ್ಟೆಯ ಚೀಲವನ್ನು ಆಶ್ರಮದ ಒಳಗಿಟ್ಟು. ಅಲ್ಲಿನ ಕೆಲಸದಲ್ಲಿ ತೊಡಗಿದನು.
ಇನ್ನೊಂದಿ ಕಥೆಯಲ್ಲಿ ಇನ್ನೊಬ್ಬ ವಿದ್ಯಾರ್ಥಿಗೆ ಜಪಾನಿಗಳು ತಯಾರಿಸುವ ಚಾಹ ಕುಡಿಯುವ ಕಪ್‌ಗ್ಳನ್ನು ಕಂಡುಬಹಳ ಆಶ್ಚರ್ಯವಾಯಿತು. ಅವರು ಅಷ್ಟು ನಾಜೂಕಾದ, ತೆಳ್ಳಗಿನ ಕಪ್‌ಗಳನ್ನು ಯಾಕೆ ತಯಾರಿಸುತ್ತಾರೆ ? ಅವುಗಳು ಒಡೆದು ಹೋಗುವ ಅಪಾಯ ಹೆಚ್ಚು ಅಲ್ಲವೇ ಎಂಬ ಪ್ರಶ್ನೆ ಆತನನ್ನು ಕಾಡುತ್ತಿತ್ತು. ಒಂದು ದಿನ ತನ್ನ ಗುರುಗಳ ಬಳಿ ತನ್ನ ಸಂದೇಹದ ಬಗ್ಗೆ ಭಿನ್ನವಿಸಿಕೊಂಡನು. ಆಗ ಗುರುಗಳು, ಅದು ಕಪ್ ಬಳಕೆದಾರರಿಗೆ ಒಂದು ಪಾಠವಿ ದ್ದಂತೆ. ಕಪ್ ಅನ್ನು ಬಹಳ ಎಚ್ಚರಿಕೆಯಿಂದ ಅದಕ್ಕೆ ಹಾನಿ ಯಾಗ ದಂತೆ ಬಳಸುವಂತಾಗಬೇಕು ಹಾಗೂ ಯಾವು ದೊಂದು ಕೆಲಸ ಮಾಡುತ್ತೇವೆಯೋ ಅದರತ್ತ ನಮ್ಮ ಗಮನ ಕೇಂದ್ರೀಕರಿಸು ವಂತಾಗಬೇಕು. ಅಲ್ಲದೆ ಕಪ್ ತೆಳ್ಳಗಿದ್ದರೆ ಹಗುರವಾಗಿರುತ್ತದೆ.
ನಾಜೂಕಾಗಿರುವುದರಿಂದ ಆಕರ್ಷಕವಾಗಿ ಕಾಣುತ್ತದೆ. ಹಾಗೇ ಕಪ್ ತಯಾರಿಸಿದ ವ್ಯಕ್ತಿಯ ವೃತ್ತಿ ಪರಿಣತಿಯನ್ನು ಸೂಚಿಸುತ್ತದೆ ಎಂಬುದು ಜಪಾನಿಗಳ ಚಿಂತನೆ ಎಂದು ವಿವರಿಸಿದರು. ಯಾರೇ ಆಗಲಿ, ಕಲಿಯುವ ಮನಸ್ಸು ಮತ್ತು ತಾಳ್ಮೆ ಅತೀ ಅಗತ್ಯ. ಆಗ ಮಾತ್ರ ಸಾಧನೆಗೈಯಲು ಸಾಧ್ಯ. ನಾನು ಬಹಳಷ್ಟು ಕಲಿತಿದ್ದೇನೆ ಎಂಬ ಹುಂಬುತನ ಬಿಟ್ಟು, ಕಲಿಯುವುದು ಬಹಳಷ್ಟಿದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು.