ಮಸ್ಕತ್: ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಕನ್ನಡ ತರಗತಿಗಳ ವಿದ್ಯಾರ್ಥಿಗಳು ಇತ್ತೀಚಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಎಸ್.ಡಿ.ಟಿ. ಪ್ರಸಾದ್ ಅವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಧರ್ಮಾಸ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ಕರ್ನಾಟಕದ ನಾಡಗೀತೆಯನ್ನು ಹಾಡಿದರು. ಅನಂತರ ವಿವಿಧ ತರಗತಿಗಳ ವಿದ್ಯಾರ್ಥಿಗಳು ಕರ್ನಾಟಕದ ಹಾಗೂ ದೇಶದ ಮೇರು ವ್ಯಕ್ತಿಗಳ ಪಾತ್ರವನ್ನು ನಿಭಾಯಿಸುವುದರ ಮೂಲಕ ಛದ್ಮವೇಷವನ್ನು ಮಾಡಿದರು. ಜತೆಗೆ ಕನ್ನಡ ಒಗಟುಗಳನ್ನು, ಗಾದೆಗಳನ್ನು ಹೇಳುವುದು, ಜಾನಪದ ಗೀತ ಗಾಯನ, ಶಿಕ್ಷಕರ ಕುರಿತು ಕನ್ನಡದಲ್ಲಿ ಭಾಷಣ ಹಾಗೂ ಇನ್ನುಳಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದರು.
ಇದೇ ವೇಳೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಹಾಗೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಶಾಲೆಯ ಗುರುವೃಂದದವರಾದ ಸುಧಾ ಶಶಿಕಾಂತ್, ಜಯಶ್ರೀ ಛಬ್ಬಿ, ಸ್ಮಿತಾ ಹೊಳ್ಳ, ಪ್ರೀತಿ ಶಿವಯೋಗಿ, ಕವಿತಾ ಜಗದೀಶ್, ಶೋಭಾ ರಮೇಶ್, ನಿರ್ಮಲ ಅಮರೇಶ್, ಜ್ಯೋತಿ ಹೆಗ್ಡೆ, ಸುಶೀಲಾ ನಲವಡಿ ಅವರನ್ನು ಗೌರವಿಸಲಾಯಿತು. ಮಸ್ಕತ್ ಕನ್ನಡ ಸಂಘದ ಉಪಾಧ್ಯಕ್ಷರಾದ ಮಂಜುನಾಥ ಸಂಘಟಿಯವರು ವಂದಿಸಿದರು.
ವರದಿ: ಸುಧಾ ಶಶಿಕಾಂತ್, ಮಸ್ಕತ್