Advertisement
“ಎದುರಾರೈ ನಿನಗೆ ಸಮನಾರೈ, ಎದುರಾರೈ ಜಗದ್ಗುರುವೇ ಸಮನಾರೈ ‘ ಈ ಜಗದ್ಗುರು ಬಾಲನಾಗಿದ್ದಾಗಲೇ ತಾನು ರಣವಿಕ್ರಮ ಎಂದು ತೋರಿದ್ದಾನೆ. ಕುರುಕ್ಷೇತ್ರ ಯುದ್ಧದಲ್ಲಿ ಇವನ ಎದುರು ಯಾರೂ ಇರಲಿಲ್ಲ, ಸಮನಾಗಿರುವವರೂ ಯಾರೂ ಇಲ್ಲ. ಹಾಗಿದ್ದ ಮೇಲೆ ಅವನೇಕೆ ಯುದ್ಧ ಮಾಡಿಯಾನು? ತಾನು ಸಾರಥಿಯಾಗಿ ಉಳಿಯುವನೇ ಹೊರತು, ಯುದ್ಧ ಮಾಡಲಾರೆ ಎಂದು ಘೋಷಿಸುತ್ತಾನೆ.
Related Articles
Advertisement
ಚೆಸ್ ಆಟ ಆಡಿದ್ದೀರಿ ಅಥವಾ ನೋಡಿದ್ದೀರಿ ಎಂದುಕೊಳ್ಳುವಾ. ಒಮ್ಮೆಗೆ ಒಂದು ಆಟವನ್ನು ಎಷ್ಟು ಮಂದಿ ಆಡುತ್ತಾರೆ ? ಹೌದು ಹಲವು ರೀತಿ ಆಡಬಹುದು. ನೀವೊಬ್ಬರೇ ಎರಡೂ ಪಾರ್ಟಿಗೆ ಆಡಬಹುದು, ಯಂತ್ರದ ಜತೆಗೆ ನೀವು ಆಡಬಹುದು ಅಥವಾ ಒಬ್ಬ ಎದುರಾಳಿಯೊಡನೆ ಆಡಬಹುದು. ಈ ಆಟದಲ್ಲಿ ಎದುರಿಗೆ ಇರುವವರು ಸದಾ ಎದುರಾಳಿಯೇ ಸರಿ. ನಿಮ್ಮ ಸಮ ಅಥವಾ ಒಂದೇ ತಂಡದಲ್ಲಿ ಇರುವವರು ಅಂತ ಯಾರೂ ಇಲ್ಲ.
ಟೆನಿಸ್ ಅಥವಾ ಟೇಬಲ್ ಟೆನಿಸ್ ಆಡಿರುತ್ತೀರಿ ಅಥವಾ ನೋಡಿರುತ್ತೀರಿ ಅಲ್ಲವೇ? ಗೋಡೆಯ ಜತೆ ಆಡುವುದಿಲ್ಲ ಎಂದರೆ ಖಂಡಿತ ನಿಮ್ಮ ಜತೆ ಆಡಲು ಆ ಬದಿಯಲ್ಲಿ ಮಗದೊಬ್ಬ ವ್ಯಕ್ತಿ ಬೇಕೇಬೇಕು. ಆ ವ್ಯಕ್ತಿ ಎದುರಾಳಿಯೇ ಆಗಿರುತ್ತಾರೆ. ಸರಿ, ಈ ಯಾವುದೇ ಆಟದಲ್ಲೂ ಡಬಲ್ಸ್ ಆಡಬಹುದು. ಈ ಡಬಲ್ಸ್ ಎಂಬುದು ಗಂಡಿನ ಜೋಡಿ ಗಂಡು ಅಥವಾ ಹೆಣ್ಣಿನ ಜೋಡಿ ಹೆಣ್ಣು ಎಂಬುದೂ ಆಗಬಹುದು, ಅಥವಾ Mixed Doubles ಕೂಡಾ ಆಗಬಹುದು. ಈ ಸಂದರ್ಭದಲ್ಲಿ, ಏನರ್ಥವಾಗುತ್ತದೆ ಎಂದರೆ, ಬದಿಯಲ್ಲಿ ಇರುವವರು ನಿಮ್ಮದೇ ಸಮ ಅಥವಾ ತಂಡದವರು. ಎದುರಿಗೆ ಇರುವವರು ಎದುರಾಳಿ ಅಥವಾ ವೈರಿಪಡೆಯವರೇ ಆಗಿರುತ್ತಾರೆ. “ವೈರಿ ಪಡೆ’ ಎಂದ ಮಾತ್ರಕ್ಕೆ ಹೋರಾಟ, ಕೊಲ್ಲುವಿಕೆ ಅಂತೆಲ್ಲ ಅಲ್ಲ ಬದಲಿಗೆ ಸಿಂಪಲ್ ಆಗಿ ಹೇಳಬೇಕು ಎಂದರೆ ಒಬ್ಬರ ನಡೆಗೆ ಮತ್ತೊಬ್ಬರ ಮರು ನಡೆ ಅಥವಾ ಅಡ್ಡ ನಡೆ ಎನ್ನಬಹುದು. ಒಟ್ಟಾರೆ ಗೆಲುವಿನತ್ತ ಸಾಗುವ ನಡೆ ಅಷ್ಟೇ.
ಈವರೆಗೂ ಎಲ್ಲವೂ ಎದುರಾರೈ ಎಂದರೆ ಎದುರಿಗೆ ಇರುವವರು, ಸಮನಾರೈ ಎಂದರೆ ತಮ್ಮೊಂದಿಗೆ ಅದೇ ಬದಿಯಲ್ಲಿರುವವರು ಅಂತಾರ್ಥವಾಯ್ತು. ಈಗ ಕೊಂಚ ಭಿನ್ನವಾಗಿ ಆಲೋಚಿಸುವ. ಕೇರಂ ಆಟವನ್ನು ಆಡಿಯೇ ಇರುತ್ತೀರಿ. ಕೇರಂ ಬೋರ್ಡ್‌ಗೆ ನಾಲ್ಕು ಬದಿಗಳು ಇರುತ್ತದೆ. ಆಟವನ್ನು ಇಬ್ಬರೇ ಆಡುತ್ತೀರಿ ಎಂದುಕೊಂಡರೆ ಆ ಎದುರಾಳಿ ನಿಮ್ಮ ಎದುರಿಗೆ ಕೂರುತ್ತಾರೆ ಎಂದಾದರೂ ಇಬ್ಬರೇ ಆಡುವ ಈ ಆಟದಲ್ಲಿ ಒಬ್ಬರ ಎಡ ಅಥವಾ ಬಲ ಬದಿಯಲ್ಲಿ ಕೂತು ಆಡಿದ್ದನ್ನು ನೋಡಿದ್ದೀರಾ? ಈಗ ಕೇರಂ ಆಟವನ್ನು ನಾಲ್ಕು ಮಂದಿ ಆಡುತ್ತಿದ್ದಾರೆ ಎಂದುಕೊಳ್ಳಿ. ಯಾವ ರೀತಿ ಕೂರುತ್ತೀರಿ? ನಿಮ್ಮ ಎದುರಿಗೆ ಇರುವವರು ನಿಮ್ಮ ತಂಡ. ನಿಮ್ಮ ಎಡ ಮತ್ತು ಬಲ ಬದಿಯಲ್ಲಿ ಇರುವವರು ನಿಮ್ಮ ಎದುರು ತಂಡದವರು. ನಿಜಾ ತಾನೇ? ಅಂದರೆ ಎದುರಾರೈ ಎಂದರೆ ನಿಮ್ಮ ಸಮ ಇರುವವರು. ಸಮನಾರೈ ಎಂದರೂ ನಿಮ್ಮ ಸಮ ಇರುವವರು. ಎದುರಾಳಿ ಯಾರೈ ಎಂದರೆ ನಿಮ್ಮ ಎಡ ಮತ್ತು ಬಲ ಇರುವವರು. ನಿಮ್ಮ ಸಮ ಪಕ್ಷದವರಾರೈ ಎಂದರೆ ಎದುರಿಗೆ ಇರುವವರು.ಕೇರಂ ಆಟದ ಮಜಾವೇ ಬೇರೆ. ಆಟದಲ್ಲಿ ಎಷ್ಟು ಜನ ಇದ್ದಾರೆ ಎಂಬ ಆಧಾರದ ಮೇಲೆ ಅವರು ಎದುರಾಳಿಯೋ ಅಥವಾ ನಿಮ್ಮದೇ ಪಡೆಯವರೋ ಅಂತಾಗುತ್ತದೆ. ಕೇರಂ ಆಟದ ಬಗ್ಗೆ ಇಷ್ಟೆಲ್ಲ ಹೇಳುವಾಗ “ಪಡೆ’ ಶಬ್ದ ಬಳಸಿದೆ, ಹಾಗಾಗಿ ಈಗ ಹೇಳಿದ ಅಷ್ಟೂ ವಿಷಯಗಳು “ಪಗಡೆ’ ಆಟಕ್ಕೂ ಅನ್ವಯ ಆಗಬಹುದು ಎನ್ನುವಿರಾ? ನನಗೆ ಈ ಪಗಡೆ ಆಟದ ಬಗ್ಗೆ ಹೆಚ್ಚು ಗೊತ್ತಿಲ್ಲ. ಮನೆಯ ಅತೀ ಹಿರಿಯರು ಕೆಲವೊಮ್ಮೆ ಆಡಿದ್ದು ನೋಡಿದ್ದೇನೆ. ಆಡುವುದನ್ನು ನೋಡಬಹುದಿತ್ತೇ ವಿನಃ, ಹಾಸು ಅಥವಾ ದಾಳವನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಈಗ ಮುಂದಿನ ಆಟದ ಬಗ್ಗೆ ಮಾತನಾಡೋಣ. ಈಗ ಹೇಳುವ ಆಟಕ್ಕೆ ಹಲವಾರು ಸ್ವರೂಪಗಳಿವೆ. 2008ರ ತನಕ ಈ ಆಟವನ್ನು ಎರಡು ಪಡೆಯವರು ಆಡುತ್ತಿದ್ದರು. ಆ ಪಡೆಗಳು ಹೇಗೆ ಎಂದರೆ ಒಂದು ಪ್ರಾಂತಕ್ಕೆ, ಅಥವಾ ಒಂದು ದೇಶಕ್ಕೆ ಸೇರಿದ ಪಡೆಗಳು ಆಗಿರುತ್ತಿತ್ತು. ಆಮೇಲೆ ನೋಡಿ ಆರಂಭವಾಯ್ತು ಖರೀದಿಯ ಆಟ. ಈ ವರ್ಷ ನಮ್ಮ ವೈರಿಪಡೆಯಲ್ಲಿರುವವರೇ ಮುಂದಿನ ವರ್ಷ ನಮ್ಮ ಪಡೆಗೆ ಸೇರಬಹುದು. ಹೌದು ನಾನು ಹೇಳುತ್ತಿರೋದು ನಮ್ಮ ದೇಶದ ಖ್ಯಾತ ಆಟವಾದ, ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಬಗ್ಗೆಯೇ. 2008ರಲ್ಲಿ ಆರಂಭವಾದ ಈ ಐಪಿಎಲ್ ಸೀಸನ್ ಎಂಬುದು ಈ ಲೇಖನ ಓದುವ ಹೊತ್ತಿಗೂ ನಡೆಯುತ್ತಿರುತ್ತದೆ. ಮಾರ್ಚ್ 22ರಂದು ಆರಂಭವಾದ ಈ ಸಮರ ಮೇ 26ರ ವರೆಗೂ ನಡೆಯಲಿದೆ. ಈ ಆಟದ ವೈಶಿಷ್ಟ್ಯವೇ ಭಿನ್ನ. ಕುರುಕ್ಷೇತ್ರದ ಯುದ್ಧಕ್ಕೂ ಈ ಐಪಿಎಲ್ ಆಟಕ್ಕೂ ನನಗೆ ಬಹಳ ಸಾಮ್ಯತೆ ಕಾಣುತ್ತದೆ. ಸೋದರಮಾವ ಶಲ್ಯ ಒಂದು ಪಕ್ಷವಾದರೆ ಅವನ ಸೋದರಳಿಯಂದಿರು ವಿಪಕ್ಷ. ವಿಪಕ್ಷದಲ್ಲೇ ಇದ್ದರೂ ಆ ಸೋದರಮಾವ ಆಟ ಆಡಿದ್ದು ಮಾತ್ರ ತನ್ನ ವಿಪಕ್ಷದವರ ಜತೆ. ಶಲ್ಯನು ಎದುರಾರೈ ಎಂದರೂ ಹೂ ಎನ್ನುತ್ತಾನೆ. ಸಮರಾರೈ ಹೊಸ ಎನ್ನುತ್ತಾನೆ. ಐಪಿಎಲ್ ವಿಷಯಕ್ಕೇ ಬಂದರೆ ಈ ವರ್ಷ ಒಂದು ಪಡೆಯಲ್ಲಿದ್ದ ಒಬ್ಬ ಆಟಗಾರ, ಕಳೆದ ವರ್ಷಗಳಲ್ಲಿ ಬೇರೆಯೇ ಪಡೆಯಲ್ಲೂ ಇದ್ದಿರಬಹುದು. ಉದಾಹರಣೆಗೆ ಆಸ್ಟ್ರೇಲಿಯಾ ದೇಶದ ಆಟಗಾರರಾದ ಡೇವಿಡ್ ವಾರ್ನರ್‌ಎಂಬ ದೈತ್ಯ ಪ್ರತಿಭೆ ಐಪಿಎಲ್ ತಂಡದಲ್ಲಿ ಡೆಲ್ಲಿ ಮತ್ತು ಹೈದರಾಬಾದ್ ಮಧ್ಯೆ ಓಡಾಡಿಕೊಂಡಿದ್ದಾರೆ. ಒಂದಷ್ಟು ವರ್ಷಗಳು ಅಲ್ಲಿ, ಇನ್ನೊಂದಷ್ಟು ಇಲ್ಲಿ. ಸದ್ಯಕ್ಕೆ ಡೆಲ್ಲಿ ತಂಡದಲ್ಲಿ ಇದ್ದಾರೆ.