ಅವುಗಳ ಕಥೆಗಳು ನಾರ್ವೆಯ ಜಾನಪದದಲ್ಲಿ ಹಾಸುಕೊಕ್ಕಾಗಿವೆ. ಎಷ್ಟರ ಮಟ್ಟಿಗೆ ಎಂದರೆ ನಾರ್ವೆಯ 19ನೇ ಯ ಶತಮಾನದ ಪ್ರಸಿದ್ಧ ನಾಟಕಕಾರ ಹೆನ್ರಿಕ್ ಇಬ್ಸೆನ್ ಬರೆದ ಪಿಯರ್‌ಗಿಂಟ್‌ನಲ್ಲಿ ಸಹ ಟ್ರೋಲ್‌ಗಳ ಮಹಾರಾಜ ಡೋವೆಗುಬ್ಬೆನ್ ಬರುತ್ತಾನೆ.
Advertisement
ಇತ್ತೀಚಿನ ಸಿನೆಮಾಗಳಲ್ಲಿ ಸಹ ಅವುಗಳನ್ನು ಕಾಣಬಹದು. ಉದಾಹರಣೆಗೆ ಹ್ಯಾರಿ ಪಾಟರ್, ಪ್ರೋಜನ್ ಇತ್ಯಾದಿ. ಅವುಗಳು ಅರವತ್ತು ಅಡಿ ಎತ್ತರದ ಸೆನ್ಜಾ ತರವೂ ಇರಬದು ಅಥವಾ ಕುಬjವೂ ಆಗಿರಬಹುದು. ಅವುಗಳ ಬಗ್ಗೆ ಬಹಳಷ್ಟು ಮೂಢನಂಬಿಕೆಗಳು ಸಹ ಪ್ರಚಲಿತವಾಗಿವೆ. ಉದಾಹರಣೆಗೆ ಅವುಗಳ ಹೆಸರನ್ನು ಹೇಳಿದರೂ ಸಾಕು, ಉಚ್ಚರಿಸಿದವರು ಸತ್ತು ಬಿಡುತ್ತಾರೆ ಎಂದು! ಅವುಗಳು ನಿಶಾಚರರು, ಬೆಳಕು ಬಿದ್ದರೆ ಕಲ್ಲಿನ ಮೂರ್ತಿಯಾಗಿ ಬಿಡುತ್ತಾರೆ ಇತ್ಯಾದಿ. ಅಕ್ಕಪಕ್ಕದ ದೇಶಗಳಾದ ಸ್ವೀಡನ್, ಐಸ್ಲೆಂಡ್, ಫಿನ್ಲಂಡ್ ದೇಶಗಳಲ್ಲದೆ ನಡುಗಡ್ಡೆ ದೇಶಗಳಾದ ಗ್ರೀನ್ಲೆಂಡ್, ಫೇರೋ ಮತ್ತು ಅಲಂಡ್‌ಗಳಲ್ಲಿ ಸಹ ಅವುಗಳ ದಂತ ಕಥೆಗಳು ಕೇಳಿಬರತ್ತವೆ. ಇವುಗಳನ್ನೆಲ್ಲವನ್ನು ಒಟ್ಟಾರಿ ಸೇರಿಸಿ ನಾರ್ಡಿಕ್ ದೇಶಗಳು (Nordik countries) ಎಂದು ಕರೆಯುತ್ತಾರೆ.
Related Articles
Advertisement
ಈ ಶಬ್ದದ ಅರ್ಥ ಟ್ರೋಲ್‌ನ ನಾಲಗೆ (ಟುಂಗಾ) ಅಂತ. ಸುಮಾರು 387 ಮೀಟರ್ ಎತ್ತರದ ಗುಡ್ಡದ ತುದಿಯಲ್ಲಿ ಒಂದು ಬಂಡೆಗಲ್ಲು ಪ್ರಾಣಿಯ ಉದ್ದ ನಾಲಗೆಯಂತೆ ಚಾಚಿ ನಿಂತಿದೆ. ಅದರ ವರ್ಣನೆಯನ್ನು ಓದಿ, ಅದರ “ನಾಲಗೆಯ’ ಮೇಲೆ ನಿಂತ ಪ್ರಯಾಣಿಕರ ಅದ್ಭುತ ಫೋಟೋಗಳನ್ನು ನೋಡಿ ನಾವು ನಾಲ್ವರು ಉತ್ಸುಕರಾಗಿದ್ದೆವು. ಹಿಮಕಾನಾ ಇರುವ ನೆಡ್ ಸ್ಟ್ರಾಂಡ್ ಪ್ರದೇಶ ಹೌಗೆಸಂಡ್ (Haugesund) ಬಂದರಿನಿಂದ 50 ಕೀ.ಮೀ ದೂರದಲ್ಲಿದೆ. ನಾವು ಬಂದ ಕ್ರೂಸ್ ಹಡಗು ಅಂದು ಬೆಳಗ್ಗೆ ಹನ್ನೊಂದಕ್ಕೆ ಆ ಬಂದರಿಗೆ ಬಂದು ತಲುಪಿದ ತತ್‌ಕ್ಷಣ ಒಂದು ಟ್ಯಾಕ್ಸಿಯನ್ನು ಹತ್ತಿ ಒಂದು ತಾಸಿನ ಅನಂತರ ಈ ಹಳ್ಳಿಗೆ ಬಂದು ತಲುಪಿದೆವು. ಊರ ಮಧ್ಯದಲ್ಲಿ ಒಂದು ಪುಟ್ಟ ಸುಂದರ ಚರ್ಚ್. ಟ್ರೋಲ್ ದಂತ ಕಥೆಯ ಪ್ರಕಾರ ಆ ಊರಿನ ಜನ ತಮ್ಮ ಚರ್ಚ್‌ಗೆ ಗಂಟೆ ಕೊಳ್ಳಲು ನಿರ್ಧರಿಸಿದಾಗ ಊರಿನವರ ಹತ್ತಿರ ಹಣ ಇರಲಿಲ್ಲವಂತೆ. ಹಿಮಕಾನಾ ಎನ್ನುವ ಹೆಸರಿನ ಬಹಳ ಶ್ರೀಮಂತ ಟ್ರೋಲ್ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಕೆಲವರು ಇದನ್ನು ಹಿಮಕೋನಾ ಅನ್ನುತ್ತಾರೆ. ಆಕೆಗೆ ಗಂಟೆಯ ಶಬ್ದ ಆಗದು. ಆಕೆಯನ್ನು ಆ ಊರಿನ ಬಡ ಜನರು ಸಹಾಯ ಕೋರಿದಾಗ ಮೊದಲು ಒಲ್ಲೆ ಎಂದಳು. ಆಮೇಲೆ ಆಕೆ ಒಪ್ಪಿ ಹಣ ಕೊಡುವಾಗ ಹಾಕಿದ ಶರತ್ತೆಂದರೆ ತಾನಿರುವತನಕ ಆ ಗಂಟೆಯನ್ನು ಬಾರಿಸಬಾರದು! ಜನರು ಸಮ್ಮತಿಸಿದರು. ಒಂದು ದಿನ ಪಾದ್ರಿಯ ಮಗಳ ಅಕಾಲ ಮೃತ್ಯುವಾದಾಗ ದುಃಖದಲ್ಲಿ ಮುಳುಗಿದ್ದ ಆಕೆಯ ತಂದೆ ಆ ಶರತ್ತನ್ನು ಮರೆತು ಇಡೀ ದಿನ ಗಂಟೆ ಬಾರಿಸಲು ಆಜ್ಞೆ ಕೊಟ್ಟ. ಗುಡ್ಡ, ಕಣಿವೆ, ಮತ್ತು ಫಿಯೋರ್ಡ್ ತುಂಬ ಅದರ ಶಬ್ದ ಪ್ರತಿಧ್ವನಿಸುತ್ತಿತ್ತು. ಅದನ್ನು ಸಹಿಸಲಾರದೆ ಆಕೆ ಗುಡ್ಡದಿಂದ ಧಾವಿಸಿ ಭರದಿಂದ ಇಳಿದು ಬಂದಳಂತೆ. ಚರ್ಚ್‌ಗೆ ಬರುತ್ತಲೇ ಬೆಳಗು ಹರಿಯಿತು. ಆಗ ಆಕೆ ಅಲ್ಲೇ ಶಿಲೆಯಾಗಿ ಬಿಟ್ಟಳಂತೆ. ಕೆಲವು ದಂತ ಕಥೆಗಳಲ್ಲಿ ರಾತ್ರಿಯಿಡೀ ನಿಶಾಚರರಾದ ಟ್ರೋಲ್‌ಗಳು ಬೆಳಕನ್ನು ಕಂಡ ಕೂಡಲೇ ಅವರ ಪ್ರಾಣ ಹೋಗಿಬಿಡುತ್ತದೆ ಎಂಬ ಮೂಢ ನಂಬಿಕೆ! ನಾವು ಆ ಬೆಟ್ಟವನ್ನು ಹತ್ತುವ ದಿನ ರಣ ಬಿಸಿಲು. ಬೆಟ್ಟದ ತುದಿಯಿಂದ ಎರಡೇ ಕೀ.ಮೀ.ದೂರವಾದರೂ ಹೆಜ್ಜೆ ಹೆಜ್ಜೆಗೆ ಮೇಲೇರುವ ಹೇರ್‌ಪಿನ್ ಬೆಂಡ್ ಆಕಾರದ ಪಥ. ಮಧ್ಯ ದಾರಿಯಲ್ಲಿ ಒಂದು ಮುಚ್ಚಿದ ಗೈಟು ಬಿಡಿಸಿ ಹೊಲದಲ್ಲಿ ಮೇಯುತ್ತಿದ್ದ ದೈತ್ಯಾಕಾರದ ಆಕಳುಗಳು ಟ್ರೋಲ್ ಇರಬಹುದೇನೋ ಅನ್ನುವ ಹೆದರಿಕೆ ಹುಟ್ಟಿಸುತ್ತಿದ್ದವು! ಈ ಚಾರಣ ನಾವು ಮೂರು ದಿನಗಳ ಹಿಂದೆ ಸ್ಟ್ರಾವಾಂಗರ್ ಊರಲ್ಲಿ ಹತ್ತಿದ ಬಹು ಜನಪ್ರಿಯ ಪಲ್ಪಿಟ್ ರಾಕ್‌ಗೆ ಹೋಲಿಸಿದರೆ ಅಷ್ಟು ಎತ್ತರ ಅಲ್ಲ, ಹಾಗೇ ಇಲ್ಲಿ ಹೆಚ್ಚು ಜನ ಸಂದಣಿಯೂ ಇರಲಿಲ್ಲ. ಆದರೆ ರಾಚಿದ ಬಿಸಿಲು ಮತ್ತು ಕಡಿದಾದ ದಾರಿ ನಮ್ಮನ್ನು ಸುಸ್ತು ಮಾಡಿತು. ಕೊನೆಯ ಭಾಗದಲ್ಲಿ ಮಾತ್ರ ಇದ್ದ ಮರಗಳ ಗುಂಪೊಂದು ತಂಪನ್ನು ನೀಡಿತ್ತು. ಅದನ್ನು ದಾಟಿದಂತೆಯೇ ಕಂಡಿದ್ದು ಆಕೆಯ ನಾಲಗೆಯನ್ನು ಹೋಲುವ ಚಪ್ಪಟೆ ಕಲ್ಲಿನ ಚಾಚು; ಅದರ ಮೇಲೆ ನಿಂತು ಸೆಲ್ಫಿ ಫೋಟೊ ತೆಗೆಯುತ್ತಿದ್ದರು ಒಂದಿಬ್ಬರು ಟೂರಿಸ್ಟ್‌ಗಳು. ಆ ಶಿಲೆಯ ರೂಪ ಟ್ರೋಲ್ ಹಿಮಕಾನಾಳ ಮುಖದಂತಿದೆ ಅಂತ ಹೇಳುವ ವಾಡಿಕೆ. ಯಥಾ ಪ್ರಕಾರ ಆ ಬಂಡೆಯ ಬದಿಯ ಮರದಡಿಯಲ್ಲಿ ಬಾಯಿ ಚಪ್ಪರಿಸುತ್ತ ಪಿಕ್‌ನಿಕ್ ಮಾಡಿ ಸರತಿ ಪ್ರಕಾರ ಒಬ್ಬೊಬ್ಬರೇ “ನಾಲಗೆಯ’ ತುದಿಯ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದಾಯಿತು. ಆಮೇಲೆ ಎಲ್ಲರೂ ಎಚ್ಚರಿಕೆಯಿಂದ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ಅದರ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದೆವು. 370 ಮೀಟರ್ ಕೆಳಗೆ ಬೃಹದಾಕಾರದ ಲಿಸೆವಾಟ್ ನೆಟ್ ಕೆರೆಯ ನೀಲಿ ವರ್ಣದ ನೀರಿನ ತೆರೆಗಳ ಮೇಲೆ ಸೂರ್ಯನ ಕಿರಣಗಳ ನರ್ತನ. ಅದೊಂದು ಅದ್ಭುತ ದೃಶ್ಯ, ಅವಿಸ್ಮರಣೀಯ ಅನುಭವ. ನಮಗಾಗಿ ಕಾಯಲು ಹೇಳಿದ್ದ ಟ್ಯಾಕ್ಸಿಯವನು ಏನಾದರೂ ಕೈಕೊಟ್ಟನೆಂದರೆ ನಮ್ಮ ಕ್ರೂಸ್ ಶಿಪ್ ನಮ್ಮನ್ನು ಬಿಟ್ಟೇ ಇಂಗ್ಲೆಂಡಿಗೆ ಹೊರಟು ಹೋದೀತೆಂದು ಹೆದರಿ ಅವಸರದ ಅವರೋಹಣ ಶುರು ಮಾಡಿದೆವು. ಹತ್ತುವಾಗ ಉಬ್ಬಸ ಬರುತ್ತಿದ್ದರೆ ಇಳಿಯುವಾಗ ಮೊಣಕಾಲಿನ ಮೇಲೆ ಒತ್ತಡ ಬೀಳುತ್ತಿತ್ತು. ಕೆಳಗೆ ಇಳಿಯುವಾಗ ನಮ್ಮನ್ನೇ ದುರುಗುಟ್ಟಿ ನೋಡುತ್ತಿದ್ದ ಹೊಲದಲ್ಲಿ ಹೊರಕ್ಕೆ ಬಿಟ್ಟಿದ್ದ ಮೂರು ಹಸುಗಳನ್ನು ದಾಟಿ ಊರು ತಲುಪಿದಾಗ ಚರ್ಚಿನ ಗಂಟೆ ನಾಲ್ಕು ಸಲ ಬಾರಿಸಿತು. ಎಲ್ಲೂ ಟ್ರೋಲ್ ಸ್ಮಾರಕ ಕಾಣಲಿಲ್ಲ! ಯಾವ ಟ್ರೋಲ್‌ಗಳೂ ಹಿಂಬಾಲಿಸಿಲ್ಲ ಅಂತ ಖಚಿತ ಪಡಿಸಿಕೊಂಡು ನಮ್ಮ ಕ್ರೂಸ್ ಹಡಗಿಗೆ ಮರಳಿದೆವು.