ಹೊಸದಿಲ್ಲಿ: “ಕೋವಿಡ್ ವೈರಸ್ ಹೊಡೆದೋಡಿಸುವಲ್ಲಿ ದೇಸೀ ಆಹಾರ ಸೇವನೆ, ದೈಹಿಕ ಸದೃಢತೆ ಅತ್ಯಂತ ಸಹಕಾರಿ. ನನ್ನ ವಯಸ್ಸು ಮತ್ತು ಸಕ್ಕರೆ ಕಾಯಿಲೆ ನಡುವೆಯೂ ಕೊರೊನಾದಿಂದ ಹೊರಬರಬಹುದು ಎಂಬ ಬಗ್ಗೆ ದೃಢ ನಿರ್ಧಾರ ತಳೆದಿದ್ದೆ.
ಇದಕ್ಕೆ ಸಹಕಾರ ನೀಡಿದ್ದು ನನ್ನ ದೈಹಿಕ ಸದೃಢತೆ, ಮಾನಸಿಕ ಸ್ಥಿರತೆ, ನಿಯಮಿತವಾಗಿ ವ್ಯಾಯಾಮ, ಅಂದರೆ ಯೋಗ, ನಡಿಗೆ. ಇದರ ಜತೆಗೆ ದೇಸಿ ಆಹಾರವನ್ನೇ ಸೇವಿಸುತ್ತಿದ್ದೆ. ಯಾವಾಗಲೂ ನಾನು ಸಾಂಪ್ರದಾಯಿಕ ಆಹಾರವನ್ನೇ ಬಳಕೆ ಮಾಡುತ್ತೇನೆ. ಅದರಲ್ಲೂ ಸ್ವಯಂ ಐಸೋಲೇಶನ್ ವೇಳೆಯಲ್ಲಿ ಹೆಚ್ಚಾಗಿ ಇದೇ ಆಹಾರ ಬಳಕೆ ಮಾಡಿದೆ ಎಂದು ಉಪ ರಾಷ್ಟ್ರಪತಿ ಹೇಳಿದ್ದಾರೆ.
ಕೊರೊನಾದಿಂದ ಗುಣಮು ಖರಾದ ಬಳಿಕ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಅವರು ಹಂಚಿಕೊಂಡಿದ್ದಾರೆ. ಕೊರೊನಾ ಬಂದವರು ನಿಯಮಿತವಾಗಿ ವಾಕಿಂಗ್, ಜಾಗಿಂಗ್ ಅಥವಾ ಯೋಗ ಮಾಡಬೇಕು. ಹಾಗೆಯೇ ಪೋಷಕಾಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಯಾವುದೇ ಕಾರಣಕ್ಕೂ ಜಂಕ್‌ಫುಡ್ ತಿನ್ನಲೇ ಬಾರದು. ಅಷ್ಟೇ ಅಲ್ಲ, ಕೊರೊನಾ ನಿಮ್ಮನ್ನು ಏನೋ ಮಾಡಿಬಿಡುತ್ತೆ ಎಂದು ಎದೆಗುಂದಬಾರದು. ಜತೆಗೆ ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು, ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಹೋಂ ಕ್ವಾರಂಟೈನ್‌ನಲ್ಲಿ ದಿನಪ್ರತಿಗಳು, ಮ್ಯಾಗಜಿನ್‌ಗಳು ಮತ್ತು ಲೇಖನಗಳನ್ನು ಓದುವ ಮೂಲಕ ಸಮಯ ಕಳೆದೆ. ಜತೆಗೆ ಸ್ವಾತಂತ್ರ್ಯ ಹೋರಾಟದ ಪುಸ್ತಕಗಳ ಅಧ್ಯಯನ ಮಾಡಿದೆ. ಪ್ರತಿ ವಾರ ಸ್ವಾತಂತ್ರ್ಯ ಯೋಧರ ಬಗ್ಗೆ ಎರಡು ಫೇಸ್‌ಬುಕ್ ಪೋಸ್ಟ್‌ಗಳನ್ನು ಬರೆಯುತ್ತಿದ್ದೆ. ಕೊರೊನಾ ಕಾಣಿಸಿಕೊಂಡ ಅವಧಿಯಲ್ಲಿ ಚೇತರಿಕೆಯಾಗುವಂತೆ ಹಾರೈಸಿದವರಿಗೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು, ಇತರ ವೈದ್ಯಕೀಯ ಸಿಬಂದಿಗೆ ಧನ್ಯವಾದಗಳು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.