ಬೆಂಗಳೂರು: “ದೇಸಿ ಸೊಗಡಿನ ಕಲೆಗಳಲ್ಲಿರುವ ಸರಳ ಹಾಗೂ ನೈಜತೆಯ ಅಂಶಗಳಿಗೆ ಮನುಷ್ಯನಲ್ಲಿ ಜೀವಕಳೆ ತುಂಬುವ ಶಕ್ತಿ ಇದೆ’ ಎಂದು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಭೂಮಿ ಕಲಾ ಸಂಸ್ಥೆಯು ಭಾನುವಾರ ರವೀಂದ್ರ ಕಲಾಕ್ಷೇತ್ರ ಆವರಣದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಕಲಾವಿದ ಎಸ್.ಶಿವಕುಮಾರ್ ಅವರ “ಸಹಜ ರೇಖಾಚಿತ್ರಗಳು’ ಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಭಾವನೆಗಳನ್ನು ಮುಕ್ತವಾಗಿ ಆವರಿಸಿ ಕಾಲಕ್ಕೆ ತಕ್ಕಂತೆ ತನ್ನದೇ ನೆಲದಲ್ಲಿ ಅವನನ್ನು ಜೀವಂತವಾಗಿಡುವ ಕಲೆಯೇ ದೇಸಿ ಕಲೆ.
ಈ ದೇಸಿ ಕಲೆಗಳಲ್ಲಿನ ಸರಳ ಹಾಗೂ ನೈಜತೆ ಅಂಶಗಳಿಗೆ ಮನುಷ್ಯನಲ್ಲಿ ಜೀವಕಳೆ ತುಂಬುವ ಶಕ್ತಿ ಇದೆ. ಹಾಗಾಗಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿನ ದೇಸಿ ಕಲೆಗಳನ್ನು ಪೋತ್ಸಾಹಿಸುವ ಕೆಲಸವನ್ನು ಸಂಬಂಧಿಸಿದ ಅಕಾಡೆಮಿಗಳು ಮಾಡಬೇಕು. ಆ ಮೂಲಕ ಅಕಾಡೆಮಿಗಳು ಶ್ರೇಷ್ಠ ಕಲಾವಿದರು ಹಾಗೂ ಶೈಕ್ಷಣಿಕ ಸವಲತ್ತುಗಳನ್ನು ಹೊಂದಿರುವ ಪ್ರತಿಭೆಗಳಿಗೆ ಮಾತ್ರ ಸೀಮಿತ ಎಂಬ ತಪ್ಪುಕಲ್ಪನೆ ದೂರವಾಗಬೇಕು ಎಂದು ಹೇಳಿದರು.
“ದ.ರಾ. ಬೇಂದ್ರೆ, ಚಂದ್ರಶೇಖರ ಕಂಬಾರರಂತಹ ಮಹನೀಯರು ಕನ್ನಡ ಕಾವ್ಯ ಲೋಕಕ್ಕೆ ಹೊಸಭಾಷ್ಯ ಬರೆದರು. ದೇವನೂರರ ಕುಸುಮಬಾಲೆ ಕಾದಂಬರಿ ದೇಸಿ ಭಾಷೆಯ ಸೊಗಡನ್ನು ಉಣಬಡಿಸಿ ಬದಲಾವಣೆಗೆ ದಾರಿ ಮಾಡಿತು. ಆ ರೀತಿ ಸಹಜ ಕಲೆ ಆಧುನಿಕ ಕಲೆಯೊಂದಿಗೆ ಸಂಲಗ್ನಗೊಳ್ಳಬೇಕು. ಇಲ್ಲದಿದ್ದಲ್ಲಿ ಯಾವುದೇ ಪ್ರಕಾರದ ಕಲೆಗಳು ಸಂಕೀರ್ಣಗೊಂಡು ಜಡವಾಗುತ್ತಾ ಕೇವಲ ಬೌದ್ಧಿಕ ಮಟ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತವೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ ಮಾತನಾಡಿ, ಸವಲತ್ತುಗಳನ್ನಷ್ಟೇ ಕೇಳುವ ಕಲಾವಿದರಿಗೆ ದಿನಗೂಲಿ ನೌಕರನಾದ ಎಸ್.ಶಿವಕುಮಾರ್ ಪ್ರೇರಣೆಯಾಗಬೇಕು. ಇನ್ನೊಬ್ಬರನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವ ಅತ್ಯಗತ್ಯ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಕಲಾವಿದ ಪಿಕಾಸೊನನ್ನು ಐದಾರು ದಶಕಗಳಿಂದ ಹೊಗಳುತ್ತಾ ಬರಲಾಗುತ್ತಿದೆ. ಕೆಲ ಚರಿತ್ರೆಕಾರರಂತೂ ಆತನೊಂದಿಗೆ ಒಡನಾಟ ಹೊಂದಿದ್ದವರಂತೆಯೇ ವರ್ಣಿಸಿದ್ದಾರೆ. ಆದರೆ, ಅವರಿಗಿಂತಲೂ ಶ್ರೇಷ್ಠ ಪಿಕಾಸೊಗಳು ನಮ್ಮ ಮನೆ ಮಕ್ಕಳಲ್ಲಿ, ಗ್ರಾಮೀಣ ಪ್ರದೇಶಗಳ ಚಿಕ್ಕಪುಟ್ಟ ಸಂಗತಿಗಳಲ್ಲೂ ಆವರಿಸಿದ್ದಾರೆ. ಅದನ್ನು ಯಾರೂ ಕಂಡುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಾನಪದ ವಿದ್ವಾಂಸ ಡಾ. ಅಪ್ಪಗೆರೆ ತಿಮ್ಮರಾಜು ಮತ್ತಿತರರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.