ಯಲಹಂಕ: ಇತ್ತೀಚೆಗೆ ಭಾರತೀಯತೆ ಎಂಬ ಪರಿಕಲ್ಪನೆಯನ್ನು ಸೀಮಿತ ಚೌಕಟ್ಟಿನೊಳಗೆ ಬಂಧಿಸಿ, ಅದಕ್ಕೆ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ನೀಡಿ, ಪ್ರಾದೇಶಿಕ ಹಾಗೂ ದೇಸಿ ಸಂಸ್ಕೃತಿಗಳನ್ನು ತುಳಿಯುವ ಸಂಚು ಉತ್ತಮ ಬೆಳವಣಿಗೆಯಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಹಾಗೂ ದೇಸೀ ದಿನದ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡುತಾ ಭಾರತೀಯತೆ ಅನ್ನುವುದು ಎಲ್ಲಾ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಉಪಸಂಸ್ಕೃತಿ, ಉಪಭಾಷೆಗಳು ಎಲ್ಲವನ್ನೂ ಒಳಗೊಳ್ಳುವಂಥದ್ದು ಎಂದರು.
ಭಾರತೀಯತೆಯನ್ನು ನಾವು ಸಂಕುಚಿತಗೊಳಿಸಿದರೆ, ಒಂದು ನಿರ್ದಿಷ್ಟ ಚೌಕಟ್ಟಿಗೆ ಅಳವಡಿಸಿದರೆ ಅದು ನಿಜವಾದ ಅರ್ಥದ ಭಾರತೀಯತೆ ಆಗುವುದಿಲ್ಲ. ಎಲ್ಲ ವೈವಿಧ್ಯತೆಗಳನ್ನೊಳಗೊಂಡಾಗ ಮಾತ್ರ. ಅದರ ಸೊಗಡುಗಳನ್ನು ತನ್ನೊಡಲೊಳಗೆ ತುಂಬಿಸಿಕೊಂಡಾಗ ಮಾತ್ರ ಭಾರತೀಯತೆ ಮೈತಳೆಯುತ್ತದೆ. ನಾವು, ಕನ್ನಡಿಗರು, ಕನ್ನಡ ಭಾಷೆಯನ್ನಾಡುವುದಕ್ಕೆ, ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುವುದಕ್ಕೆ ಹಿಂಜರಿಯಬಾರದು ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಮಾತನಾಡಿ ಬೆಂಗಳೂರು ಜಾಗತಿಕ ನಗರವಾಗಿ ಬೆಳೆದು ನಿಂತಿರುವ ಈ ಸಂದರ್ಭದಲ್ಲಿ ನಮ್ಮ ಸರ್ಕಾರ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನಗಳನ್ನಳವಡಿಸಿ ನಿರ್ಮಿಸಬೇಕು.
ಈ ನಿಟ್ಟಿನಲ್ಲಿ ಸೂಕ್ತ ಸಂಶೋಧನೆ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಗೆ ನಮ್ಮಲ್ಲಿರುವ ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜ್‌ಗಳ ಪ್ರತಿಭಾವಂತರನ್ನು ಹಾಗೂ ಪ್ರಯೋಗಾಲಯಗಳನ್ನು ಬಳಸಿಕೊಳ್ಳಬೇಕು ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಚ್.ಸಿ. ನಾಗರಾಜ್ ಪ್ರಾಧ್ಯಾಪಕಿ ಆಯೇಷ ಸಿದ್ದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.