ದೊಡ್ಡಬಳ್ಳಾಪುರ: ಗೋ ತಳಿಗಳನ್ನು ಸಂರಕ್ಷಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರು ಕೃಷಿಯಲ್ಲಿ ತೊಡಗುವ ಮೂಲಕ ಗೋ ಸಂಪತ್ತನ್ನು ರಕ್ಷಿಸಿ ನಾಡಿಗೆ ಸೇವೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯಲ್ಲಿ ಬೃಂದಾವನ- ಕೃಷಿ ಅರಣ್ಯ ಯೋಜನೆಯಡಿ ಸಸಿ ನೆಡು ಸಪ್ತಾಹದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಘಾಟಿ ಕ್ಷೇತ್ರದ ಗುಡ್ಡಗಾಡು ಪ್ರದೇಶದ ಮಧ್ಯೆ ಸಹ, ಕೃಷಿ ಅರಣ್ಯವನ್ನು ಬೆಳೆಸುತ್ತಿರುವುದು ಅದ್ಭುತ ಕೆಲಸವಾಗಿದೆ. ರೈತರು ಮನಸ್ಸು ಮಾಡಿದರೆ, ಎಲ್ಲಾದರೂ ಕೃಷಿ ಮಾಡಲು ಸಾಧ್ಯ ಎಂದು ತೋರಿಸಿದ್ದು, ನಾಡಿನ ರೈತರಿಗೆ ಇದು ಪ್ರೇರಣೆಯಾಗಿದೆ. ರೈತರಿಗೆ ಅನುಕೂಲವಾಗುವ ಗೋ ತಳಿಗಳ ಸಂರಕ್ಷಣೆಯಲ್ಲಿ ರಾಷ್ಟ್ರೋತ್ತಾನ ಪರಿಷತ್ ಕೈಗೊಂಡಿರುವ ಕಾರ್ಯಗಳು ಅಭಿನಂದನೀಯವಾಗಿದೆ.
ಇದನ್ನೂ ಓದಿ:ರಂಜನ್ ದೇಶಪ್ರೇಮಕ್ಕೆ ಸಲಾಂ…ಒಂದು ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜ ಸಂಗ್ರಹ; ಏನಿದರ ಉದ್ದೇಶ?
ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ ಎಂದರು. ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಏಳು ದಿನಗಳ ಕಾಲ ಸಸಿ-ನೆಡು ಸಪ್ತಾಹ ನಡೆಯಲಿದ್ದು, ವಿವಿಧ ಮಾದರಿಯ 6 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆಗಸ್ಟ್ 15ರವರೆಗೆ ಸಪ್ತಾಹ ನಡೆಯಲಿದೆ. ಪ್ರತಿದಿನ ಒಬ್ಬೊಬ್ಬ ಗಣ್ಯರು ಆಗಮಿಸಿ ಸಸಿ ನೆಡಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್. ಆರ್.ವಿಶ್ವನಾಥ್, ಆರ್‌ಎಸ್‌ಎಸ್ ಸಹಸರ ಕಾರ್ಯವಾಹಕ ಮುಕುಂದ, ರಾಷ್ಟ್ರೋತ್ಥಾನ ಪರಿಷತ್ ಉಪಾಧ್ಯಕ್ಷ ದ್ವಾರಕಾನಾಥ್ ಹಾಜರಿದ್ದರು.