ಲಿಂಗಸುಗೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ವಾಟ್ಸ್‌ಅಪ್‌ನಲ್ಲಿ ಹಿಂದೂ ಮಹಾಪುರುಷರನ್ನು ಅವಮಾನಿಸುವ ಭಾವಚಿತ್ರ, ಸಂದೇಶ ಹರಿದಾಡಿದ್ದರಿಂದ ಹಲವರ ಆಕ್ರೋಶಕ್ಕೆ ಕಾರಣವಾಗಿ ಭಾನುವಾರ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಫೇಸ್‌ಬುಕ್‌ನಲ್ಲಿ ಹಿಂದೂ ನಾಯಕರನ್ನು ಅವಮಾನಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ ಪಟ್ಟಣದ ನಿವಾಸಿ ಸೈಯದ್ ಬಿನ್ ಅಹಮ್ಮದ್‌ನನ್ನು (20)ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೈಯದ್ ಬಿನ್ ಅಹಮ್ಮದ್, ತನ್ನ ಫೇಸ್‌ಬುಕ್ ಖಾತೆಯಲ್ಲಿ ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರಗಳ ಮೇಲೆ ಟಿಪ್ಪು ಸುಲ್ತಾನ್‌ನ ಎಡಗಾಲು ಇಟ್ಟಂತಹ ಭಾವಚಿತ್ರ ಹಾಕಿ, ಅವಹೇಳನಕಾರಿ ಯಾಗಿ ಬರೆದು ಪೋಸ್ಟ್ ಮಾಡಿದ್ದಲ್ಲದೆ, ಇದನ್ನು ವಾಟ್ಸ್ ಅಪ್‌ನಲ್ಲಿ ಹರಿಬಿಟ್ಟಿದ್ದು ಮರಾಠ, ವಾಲ್ಮೀಕಿ ಹಾಗೂ ಹಾಲುಮತ ಸಮುದಾಯದ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದರಿಂದ ಭಾನುವಾರ ಮಧ್ಯಾಹ್ನ ಗಡಿಯಾರ ವೃತ್ತದ ಬಳಿ ಸೇರಿದ ಈ ಸಮುದಾಯದ ನೂರಾರು ಯುವಕರು ಆರೋಪಿ ಮನೆಗೆ ನುಗ್ಗುವ ಪ್ರಯತ್ನ ಮಾಡಿದರು. ಇದಕ್ಕೆ ಹೆದರಿ ಆರೋಪಿ, ಮನೆ ಹಿಂಬಾಗಿಲಿನಿಂದ ಓಡಿ ಹೋಗಿ ಪೊಲೀಸ್ ಠಾಣೆಗೆ ತೆರಳಿ ಶರಣಾದ. ಈ ಮಧ್ಯೆ, ಆರೋಪಿಯ ಸ್ನೇಹಿತ ಮಂಜುನಾಥ ಉದ್ರಿಕ್ತ ಗುಂಪಿನ ವಿರುದ್ಧ ರೇಗಾಡಿದ್ದರಿಂದ ಆಕ್ರೋಶಗೊಂಡ ಗುಂಪು ಆತನ ಮೇಲೆ ಹಲ್ಲೆ ನಡೆಸಿತು. ಸಿಪಿಐ ಯಶವಂತ ಬಿಸನಳ್ಳಿ ಯುವಕನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರತಿಭಟನೆ: ನಂತರ, ಉದ್ರಿಕ್ತರ ಗುಂಪಿನ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಆರೋಪಿ ವಿರುದ್ಧ ಘೋಷಣೆ ಕೂಗಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಧಾವಿಸಿದ ಸಿಪಿಐ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದರಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು, ಆರೋಪಿ ಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿ ಸಲು ಪೊಲೀಸರು ಜೀಪ್‌ನಲ್ಲಿ ಕರೆದೊಯ್ಯುತ್ತಿರುವಾಗ ಜೀಪ್ ಮೇಲೆ ಕಲ್ಲು ತೋರಾಟ ನಡೆಸಿದರು. ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 10ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದರು. ಪಟ್ಟಣದ ಕೆಲ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.