Advertisement

ಕರ್ತವ್ಯ ಲೋಪ: ಮೂವರು ಅಧಿಕಾರಿಗಳ ಅಮಾನತು

12:56 PM Jul 23, 2022 | Team Udayavani |

ಕಲಬುರಗಿ/ಚಿಂಚೋಳಿ: ವಿವಿಧ ಇಲಾಖೆಗಳಲ್ಲಿ ಕರ್ತವ್ಯಲೋಪ ಎಸಗಿರುವ ಜೆಇ ಸೇರಿದಂತೆ ಮೂವರು ಅಧಿಕಾರಿಗಳನ್ನು ಜಿಪಂ ಸಿಇಒ ಗಿರೀಶ ಬದೋಲೆ ಅಮಾನತು ಮಾಡಿದ್ದಾರೆ.

Advertisement

ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಗಳಿಗೆ ಭೇಟಿ ನೀಡಿ ಸರ್ಕಾರಿ ಕೆಲಸ ಮತ್ತು ಅಂಗನವಾಡಿಗಳಲ್ಲಿ ಆಹಾರ ವಿತರಣೆ ಮತ್ತು ಇತರೆ ಕಾಮಗಾರಿ ವೀಕ್ಷಣೆ ವೇಳೆ ಕಳಪೆ ಕಾಮಗಾರಿ, ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಿರಿಯ ಇಂಜಿನಿಯರ್‌, ಮುಖ್ಯಶಿಕ್ಷಕ, ಪಿಡಿಒ ಅವರನ್ನು ಅಮಾನತು ಮಾಡಿದ್ದಾರೆ.

ಮೇಲ್ವಿಚಾರಕಿಗೆ ನೋಟಿಸ್‌ ಜಾರಿ: ಚಿಂಚೋಳಿ ತಾಲೂಕಿನ ಸುಲೇಪೇಟ್‌ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಇಒ ಬದೋಲೆ, ಆಹಾರ ವಿತರಣೆ ಪರಿಶೀಲನೆ ಮಾಡಿದಾಗ ಮಕ್ಕಳಿಗೆ ಆಹಾರ ವಿತರಣೆ ಸಮರ್ಪಕವಾಗಿ ಆಗದೇ ಇರುವುದು ಬಯಲಾಯಿತು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದರು. ಅಲ್ಲದೇ, ಮೇಲ್ವಿಚಾರಕಿಗೆ ನೋಟಿಸ್‌ ಜಾರಿ ಮಾಡಿದರು.

ಕಿರಿಯ ಅಭಿಯಂತರ ಅಮಾನತು

ಚಂದ್ರಂಪಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆ ಅಡಿ ಪೈಪ್‌ ಲೈನ್‌ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಇರುವುದು ಕಂಡುಬಂತು. ಆಗ ಇದಕ್ಕೆ ಸಂಬಂಧಪಟ್ಟ ಆರ್‌ಡಬ್ಲ್ಯೂಎಸ್‌ ಇಲಾಖೆಯ ಕಿರಿಯ ಅಭಿಯಂತರರ ಕರ್ತವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರ ನಿಗದಿಪಡಿಸಿದ ಅಂದಾಜು ಪಟ್ಟಿಯಂತೆ ಕಾಮಗಾರಿ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲು ಆದೇಶಿಸಿದರು.

Advertisement

ಮುಖ್ಯಶಿಕ್ಷಕ-ಪಿಡಿಒ ಅಮಾನತು

ಚಂದ್ರಂಪಳ್ಳಿ ಗ್ರಾಮದ ಶಾಲೆಯ ಮುಖ್ಯಶಿಕ್ಷಕರು ಮೊಟ್ಟೆ ವಿತರಣೆಯಲ್ಲಿ ಕರ್ತವ್ಯ ಲೋಪ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಕುಂಚಾವರಂ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ, ಮದ್ಯಪಾನ ಮಾಡಿ ಕರ್ತವ್ಯಕ್ಕೆ ಬಂದಿರುವುದನ್ನು, ಕರ್ತವ್ಯ ಲೋಪ ಎಸಗಿರುವುದನ್ನು ಪರಿಗಣಿಸಿ ಪಂಚಾಯಿತಿ ಪ್ರಭಾರಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಿದರು. ಆ ನಂತರ ಶಾದಿಪುರ ಗ್ರಾಮದ ಅಮೃತ ಕೆರೆ ವೀಕ್ಷಿಸಿದರು. ರಸ್ತೆ ಸಂಪರ್ಕ, ವಿದ್ಯುತ್‌ ಸಂಪರ್ಕ ಹಾಗೂ ಮೂಲಭೂತ ಸೌಲಭ್ಯ ಇಲ್ಲದ ತಾಂಡಾಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಜತೆ ಚರ್ಚಿಸಿದರು.

ತಾಪಂ ಇಒ ವೈ.ಎಲ್‌. ಹಂಪಣ್ಣ, ಎಇಇ ಪ್ರಕಾಶ ಕುಲಕರ್ಣಿ, ಎಇಇ ರಾಜೇಶ ಪಾಟೀಲ, ಡಾ| ಮಹಮ್ಮದ್‌ ಗಫಾರ, ಸಿಡಿಪಿಒ ಶರಣಬಸಪ್ಪ ಬೆಳಗುಂಪಿ ಮತ್ತು ವಲಯ ಅರಣ್ಯಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next