ಬೀದರ: ಅನಧೀಕೃತವಾಗಿ ಕೆಮಿಕಲ್ ಸಂಗ್ರಹ ಪ್ರಕರಣ ಮತ್ತು ಅಕ್ರಮ ಗುಟ್ಕಾ ತಯಾರಿಕೆ ಪ್ರಕರಣದಲ್ಲಿ ಮಾಹಿತಿ ಕಲೆ ಹಾಕಿ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳದೇ ಹಾಗೂ ಅಕ್ರಮ ಚಟುವಟಿಕೆ ತಡೆಯುವಲ್ಲಿ ವಿಫಲರಾಗಿ ಕರ್ತವ್ಯ ಲೋಪ ಎಸಗಿದ ಹಿನ್ನಲೆ ಹುಮನಾಬಾದ್ ಪಿಎಸ್‌ಐ ಮಂಜುನಾಥ ಗೌಡ ಪಾಟೀಲ ಅವರನ್ನು ಅಮಾನತ್ತು ಮಾಡಿ ಎಸ್‌ಪಿ ಚೆನ್ನಬಸವಣ್ಣ ಎಸ್‌ಎಲ್ ಆದೇಶ ಹೊರಡಿಸಿದ್ದಾರೆ.
ಹುಮನಾಬಾದ್ ಎಎಸ್‌ಪಿ ಅವರ ವರದಿ ಆಧಾರದ ಮೇಲೆ ಅಮಾನತ್ತು ಮಾಡಲಾಗಿದೆ. ಜತೆಗೆ ಹುಮನಾಬಾದ್ ಸಿಪಿಐ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ಎಸ್‌ಪಿ ‘ಉದಯವಾಣಿ’ಗೆ ಖಚಿತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ಚಿಟಗುಪ್ಪ ಪಿಎಸ್‌ಐ ನೇತೃತ್ವದ ತಂಡ ದಾಳಿ ನಡೆಸಿ ಕ್ರಮ ಕೈಗೊಂಡಿದ್ದು, ಎರಡೂ ಪ್ರಕರಣಗಳ ಮುಂದಿನ ತನಿಖೆಯನ್ನು ಚಿಟಗುಪ್ಪ ಮತ್ತು ಬಸವಕಲ್ಯಾಣ ಸಿಪಿಐ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುಮನಾಬಾದ ತಾಲೂಕಿನ ಹುಡಗಿ ಶಿವಾರದಲ್ಲಿ ಮೇ 24ರಂದು ಅಕ್ರಮವಾಗಿ ಪ್ರತಿಷ್ಠಿತ ಬ್ರ್ಯಾಂಡ್ ನ ಪಾನ ಮಸಾಲಾಗಳಲ್ಲಿ ವಿಷಪೂರಿತ ಪದಾರ್ಥಗಳಿಂದ ಕಲಬೆರಕೆ ಮಾಡಿ ತಯ್ಯಾರಿಸುತ್ತಿದ್ದ ಅಡ್ಡಾ ಮೇಲೆ ಚಿಟಗುಪ್ಪ ಠಾಣೆ ಪಿಎಸ್‌ಐ ಮಹೇಂದ್ರಕುಮಾರ ನೇತೃತ್ವದ ತಂಡ ದಾಳಿ ಮಾಡಿ ಸುಮಾರು
63.22 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ದಾಳಿ ವೇಳೆ 5.5 ಲಕ್ಷ ರೂ. ಮೌಲ್ಯದ 11 ಪಾನಮಸಾಲಾ ಪ್ಯಾಕೆಟ್ ಮಾಡುವ ಯಂತ್ರ, 28 ಲಕ್ಷ ರೂ. ಮೌಲ್ಯದ 6 ಲಾರಿಗಳು, 7.33ಲಕ್ಷ ಮೌಲ್ಯದ 4890ಕೆಜಿ ಕಚ್ಚಾ ವಸ್ತುಗಳು, 20.58ಲಕ್ಷ ಮೌಲ್ಯದ ಪಾನ ಮಸಾಲಾ 15ದೊಡ್ಡ ಮತ್ತು 8ಸಣ್ಣ ಪಾನ ಮಸಾಲಾ ಪ್ಯಾಕೆಟ್ ಸೇರಿ ಇನ್ನೂ ಸಾವಿರಾರು ರೂಪಾಯಿ ಮೌಲ್ಯದ ಮತ್ತಿತರ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಹುಡಗಿ ಗ್ರಾಮದ ಬಳಿಯ ತಗಡದ ಶೆಡ್‌ನಲ್ಲಿ ಬ್ಯಾರಲ್‌ಗಳು ಮತ್ತು ಮೂರು ಲಾರಿಗಳಲ್ಲಿ ಮಾನವ ಜೀವನಕ್ಕೆ ಹಾನಿಯಾಗುವಂತ ರೋಗ ಸೋಂಕು ಹರಡುವಂತ ಹಾಗೂ ವಾತಾವರಣವನ್ನು ಹಾನಿ ಮಾಡುವಂಥ ಕೆಮಿಕಲ್‌ನ್ನು ಅನಧೀಕೃತವಾಗಿ ಸಂಗ್ರಹ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರ ತಂಡ ದಾಳಿ ನಡೆಸಿ ಸುಮಾರು 87.59ಲಕ್ಷ ರೂ. ಮೌಲ್ಯದ 81.06ಟನ್ ಕೆಮಿಕಲ್ ಜಪ್ತಿ ಮಾಡಿಕೊಳ್ಳಲಾಗಿತ್ತು.