Advertisement

ಸಮಸ್ಯೆಗೆ ಪರಿಹಾರದ ಭರವಸೆ ನೀಡಿದ ಜಿಲ್ಲಾಧಿಕಾರಿ

05:50 PM Dec 22, 2017 | Team Udayavani |

ಮೈಸೂರು: ಅಂಗವಿಕಲರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿ ಹಾಗೂ ಇನ್ನಿತರ ಕಡೆ ರ್‍ಯಾಂಪ್‌ ಅಳವಡಿಸಿ, ಉದಯಗಿರಿ ಕೆಇಬಿ ಕಾಲೋನಿಯಲ್ಲಿ ಪುಂಡರ ಹಾವಳಿ ತಪ್ಪಿಸುವುದು ಸೇರಿದಂತೆ ಇನ್ನಿತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲೆಯ ಹಲವು ಕಡೆಗಳಿಂದ ಒಟ್ಟು 16 ದೂರುಗಳು ಜಿಲ್ಲಾಧಿಕಾರಿಗಳ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಕೇಳಿಬಂತು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿದ ವಿದ್ಯಾರಣ್ಯಪುರಂ ನಿವಾಸಿ ವೆಂಕಟಕೃಷ್ಣ, ಅಂಗವಿಕಲರಿಗಾಗಿ ಸರ್ಕಾರಿ ಕಚೇರಿ ಹಾಗೂ ಇನ್ನಿತರ ಕಡೆ ರ್‍ಯಾಂಪ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮೈಸೂರಿನ ಸರ್ಕಾರಿ ಕಚೇರಿ, ಕಲ್ಯಾಣ ಮಂಟಪಗಳಲ್ಲೂ ಕಡ್ಡಾಯವಾಗಿ ರ್‍ಯಾಂಪ್‌ ಅಳವಡಿಸಲು ಆದೇಶಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಂದೀಪ್‌, ಈ ಕಾನೂನು ಈಗಾಗಲೇ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಅಂಗವಿಕಲರಿಗಾಗಿ ಪ್ರತ್ಯೇಕ ರ್‍ಯಾಂಪ್‌ ಅಳವಡಿಸುವಂತೆ ಆದೇಶಿಸಲಾಗುವುದು ಎಂದರು.

ಪುಂಡರ ಹಾವಳಿ ತಪ್ಪಿಸಿ: ನಗರದ ಉದಯಗಿರಿ ಕೆಇಬಿ ಕಾಲೋನಿ ನಿವಾಸಿ ಶಿವಶಂಕರ್‌, ತಮ್ಮ ಬಡಾವಣೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ತಮ್ಮ ನಿವಾಸದ ಎದುರು ಪ್ರತಿದಿನ ರಾತ್ರಿ 8 ರಿಂದ 11 ಗಂಟೆವರೆಗೂ ಅನೇಕ ಯುವಕರು ಮಾತನಾಡಿಕೊಂಡು ಕೂರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ 2 ಬಾರಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಮತ್ತೆ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡೀಸಿ, ಪೊಲೀಸರು, ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಹಿನಕಲ್‌ನ ಸ್ವಾಮಿ, ಹಿನಕಲ್‌ನ ಸರ್ವೆ ನಂ.123/1ರ 1 ಎಕರೆ 10 ಗುಂಟೆ ಜಾಗ ನಮ್ಮ ಅಜ್ಜಿ ಹೊನ್ನಮ್ಮ ಅವರಿಗೆ ಸೇರಿದೆ. ಆದರೆ ಈ ಭೂಮಿಯನ್ನು ಮುಡಾದಿಂದ ನಾವು ಸ್ವಾಧೀನಪಡಿಸಿಕೊಂಡಿಲ್ಲ ಎಂದು ಮುಡಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಜಾಗವನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ದೂರಿದರು. 

Advertisement

ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಕಾಂತರಾಜು, ಈ ಬಗ್ಗೆ ತಹಶೀಲ್ದಾರ್‌ರಿಂದ ಮಾಹಿತಿ ಕೇಳಿದ್ದು, ಬಳಿಕ, ಲಿಖೀತ ಪತ್ರ 
ನೀಡಲಾಗುವುದೆಂದರು. ಉಳಿದಂತೆ ಹುಣಸೂರಿನ ಜ್ಯೋತಿನಗರದ ನಿವಾಸಿ ಜಗದೀಶ್‌, ತಮ್ಮ ನಿವಾಸದ ಬಳಿಯ ಮಸೀದಿಗಳು ತುಂಬಾ ಶಬ್ಧ ಮಾಡುತ್ತಾ, ಸ್ಥಳೀಯರಿಗೆ ತೊಂದರೆ ನೀಡುತ್ತಿವೆ ಎಂದು ದೂರಿದರು. ತಿ.ನರಸೀಪುರದ ನಂದೀಪುರ ಗ್ರಾಮದಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಅಪಘಾತ ತಪ್ಪಿಸಿ, ಗಂಗಕಲ್ಯಾಣ ಯೋಜನೆಯ 2 ಅರ್ಜಿ ತಿರಸ್ಕರಿಸಲಾಗಿದೆ. ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಮನೆಗಾಗಿ ಅರ್ಜಿಸಲ್ಲಿಸುತ್ತಿದ್ದೇನೆ ಇದನ್ನು ಪರಿಗಣಿಸಿ ಎಂದು ಮನವಿ ಮಾಡಿದರು. ಅಲ್ಲದೆ ತಿ.ನರಸೀಪುರದ ಸೋಸಲೆ ನಾಡಕಚೇರಿಯ ಕಂಪ್ಯೂಟರ್‌ ಸಮಸ್ಯೆ ಸರಿಪಡಿಸಿ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್‌, ಜಿಪಂ ಸಿಇಒ ಪಿ.ಶಿವಶಂಕರ್‌, ನಗರಪಾಲಿಕೆ ಆಯುಕ್ತ ಜಗದೀಶ್‌, ಮುಡಾ ಆಯುಕ್ತ ಕಾಂತರಾಜು ಇದ್ದರು.

ಅಕ್ರಮ ಕಟ್ಟಡ ನಿರ್ಮಾಣ ಕುಂಬಾರಕೊಪ್ಪಲಿನ ಮಹದೇವು ಮಾತನಾಡಿ, ತಮ್ಮ ಮನೆ ಪಕ್ಕದಲ್ಲಿ ಅಕ್ರಮವಾಗಿ ಮನೆ
ನಿರ್ಮಿಸುತ್ತಿರುವ ಕುರಿತು ಪಾಲಿಕೆ ವಲಯ ಕಚೇರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಅಧಿಕಾರಿಗಳು ಸಂಬಂಧಪಟ್ಟವರಿಗೆ ತಿಳಿವಳಿಕೆ ಪತ್ರ, ನೋಟಿಸ್‌ ನೀಡಿದ್ದರು. ಆದರೆ ನೋಟಿಸ್‌ ನೀಡಿದ ಬಳಿಕವೂ ಅಕ್ರಮವಾಗಿ ಮನೆ ಕಟ್ಟಡ ನಿರ್ಮಿಸಲಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಂದೀಪ್‌ ಡಿ., ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next