Advertisement
ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನದಲ್ಲಿ ಸಾಮಾಜಿಕ ಕಾರ್ಯಕರ್ತರು, ಸರಕಾರಿ ನೌಕರರು, ರಾಜಕಾರಣಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಸಹಿತ ಜನಸಾಮಾನ್ಯರು ಪಾಲ್ಗೊಂಡಿದ್ದರು.ಜಿಲ್ಲಾಧಿಕಾರಿ ಕಚೇರಿ ವ್ಯಾಪ್ತಿಯ ಎಂಟು ಪ್ರವೇಶ ದ್ವಾರಗಳ ಮುಂದೆ ಪ್ರತಿಭಟನಕಾರರು ಜಮಾಯಿಸಿ ಸಿಬಂದಿಗಳ ಒಳಪ್ರವೇಶವನ್ನು ತಡೆದರು. ಇದರಿಂದ ಜಿಲ್ಲಾಧಿಕಾರಿ ಕಚೇರಿ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಕನ್ನಡ ಉಳಿಸಿ, ಕನ್ನಡ ರಕ್ಷಿಸಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಈ ಸಂದರ್ಭ ಕೊಂಡೆವೂರು ಶ್ರೀಗಳು ಮಾತನಾಡಿ, ಕನ್ನಡಿಗರ ಏಕಧ್ವನಿ ಕೇರಳ ಸರಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಕನ್ನಡಿಗರ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಖರವಾಗಲಿದೆ. ಕನ್ನಡ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಲು ನಡೆಯುತ್ತಿರುವ ಕಾನೂನಾತ್ಮಕ ಹೋರಾಟವಾಗಿದ್ದು, ಬಲವಂತದ ಮಲಯಾಳ ಭಾಷಾ ಹೇರಿಕೆ ಸಲ್ಲ ಎಂದರು.
Related Articles
ಮೌಲನಾ ಅಬ್ದುಲ್ ಅಸೀಸ್ ಮಾತನಾಡಿ, ಬೃಹತ್ ಸಂಖ್ಯೆಯಲ್ಲಿ ಸೇರಿರುವ ಜನರು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿ. ಹಲವು ಆಚಾರ ವಿಚಾರಗಳಿಗೆ ಮಾನ್ಯತೆ ನೀಡಿದ ಕನ್ನಡ ಸಂಸ್ಕೃತಿಯ ಮೇಲೆ ಬಲವಂತದ ಭಾಷಾ ಮಸೂದೆ ಹೇರಿಕೆ ಸರಿಯಲ್ಲ. ಕನ್ನಡಿಗರ ಸಂಸ್ಕೃತಿ ಅಸ್ಮಿತೆಗೆ ಧಕ್ಕೆ ಬಂದಲ್ಲಿ ಜಾತಿ, ಮತ ಭೇದವಿಲ್ಲದೆ ಹೋರಾಡಲು ಸದಾ ಸಿದ್ಧ ಎಂದರು. ಜಿಲ್ಲೆಯಲ್ಲಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಹಕ್ಕನ್ನು ಕಸಿಯಬಾರದು, ಎಲ್ಲ ಸ್ತರಗಳಲ್ಲೂ ಕನ್ನಡಿಗರಿಗೆ ಮಾನ್ಯತೆ ಹಾಗೂ ಗೌರವ ದೊರಕಬೇಕು ಎಂದರು.
Advertisement
ರಕ್ತ ಸುರಿಸಲೂ ಸಿದ್ಧ ಬೇಳ ಇಗರ್ಜಿಯ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ ಮಾತನಾಡಿ, ಕನ್ನಡ ತನು, ಮನ ಹಾಗೂ ಭುಜಗಳು ಹೋರಾಟದ ಮೂಲಕ ಒಂದಾಗಿವೆ. ಕನ್ನಡ ಉಳಿಸಲು ರಕ್ತ ಸುರಿಸಲೂ ಸಿದ್ಧ ಎಂದರು. ಭಾಷಾ ಮಸೂದೆ ಎಂಬುದು ನಿಧಾನಗತಿಯ ವಿಷವಿದ್ದಂತೆ. ಇಂತಹ ಮಸೂದೆಯು ಕಾಸರಗೋಡಿಗೆ ಅಗತ್ಯವಿಲ್ಲ, ಜಿಲ್ಲೆಧಿಯಿಂದ ಈ ಮಸೂದೆಯನ್ನು ಜೂನ್ 1ರೊಳಗೆ ಹಿಂಪಡೆಯಬೇಕು ಎಂದರು. ಕೊಂಕಣಿ ಕ್ರೈಸ್ತ ಸಮುದಾಯದ 20,000 ಮಂದಿ ಕನ್ನಡದ ಪರ ಇದ್ದಾರೆ ಎನ್ನುವ ಭರವಸೆಯ ಮಾತಗಳನ್ನಾಡಿದರು. ಮಹಾಲಿಂಗೇಶ್ವರ ಎಂ.ವಿ. ದಿಕ್ಸೂಚಿ ಭಾಷಣ ಮಾಡಿದರು. ಕಾಸರಗೋಡು ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿ.ಪಂ. ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ ಮಾತನಾಡಿದರು. ಬೆಂಗಳೂರಿನ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ನೇತೃತ್ವದಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಂ ಕುನ್ನಿಲ್, ಕೇರಳ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ, ಹಿರಿಯ ಕನ್ನಡ ಹೋರಾಟಗಾರ ಅಡೂರು ಉಮೇಶ್ ನಾೖಕ್, ಪುರುಷೋತ್ತಮ ಮಾಸ್ಟರ್, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕಮಲಾಕ್ಷ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಎಸ್.ವಿ. ಭಟ್, ಜಾನಪದ ಪರಿಷತ್ತಿನ ಕೇಶವ ಪ್ರಸಾದ್ ನಾಣಿತ್ತಿಲು, ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ, ಬ್ಯಾರಿ ಅಕಾಡೆಮಿಯ ಆಯಿಷಾ ಪೆರ್ಲ, ಪ್ರಭಾವತಿ ಕೆದಿಲಾಯ ಮೊದಲಾದವರಿದ್ದರು. ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಟಿ.ಡಿ. ಸದಾಶಿವ ರಾವ್ ವಂದಿಸಿದರು. ಸತೀಶ್ ಧರ್ಮತ್ತಡ್ಕ ನಿರೂಪಿಸಿದರು.