Advertisement

ರಸ್ತೆ ಸುರಕ್ಷತಾ ಕ್ರಮಗಳ ಪಾಲನೆಗೆ ಜಿಲ್ಲಾಧಿಕಾರಿ ಸೂಚನೆ

05:08 PM May 06, 2019 | Suhan S |

ಹಾಸನ: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದು ಅವುಗಳ ಪಾಲನೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕ ಮಾಹಿತಿ, ಜಾಗೃತಿ ಚಟುವಟಿಕೆಗಳು ಪರಿಣಾಮಕಾರಿ ಯಾಗಿ ನಡೆಯಬೇಕಿದೆ ಎಂದರು.

ಇಲಾಖೆಗಳ ಸಹಕಾರ ಅಗತ್ಯ: ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿಯಲ್ಲಿ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟೀಯ ಹೆದ್ದಾರಿ ಇಲಾಖೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ ಫ‌ಲಕಗಳನ್ನು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫ‌ಲಕ, ಅಳವಡಿಸಬೇಕು. ನಿರಂತರ ಅರಿವಿನ ಚಟುವಟಿಕೆಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಅನಗತ್ಯ ರಸ್ತೆ ಉಬ್ಬುಗಳನ್ನು ತೆಗೆಯುವುದು, ಅಪಾಯಕಾರಿ ಯಾಗಿರುವ ಹಾಗೂ ಹೆಚ್ಚು ಅಪಘಾತಗಳು ನಡೆದಿರುವ ಸ್ಥಳಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಯವರು, ಡ್ರೈನೇಜ್‌ಗಳ ಅಳವಡಿಕೆ ಹಾಗೂ ರಸ್ತೆ ಸುರಕ್ಷತಾ ಕ್ರಮಗಳಿಗೆ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

Advertisement

ಶಾಲಾ ಆಡಳಿತ ಮಂಡಳಿಗಳ ಜವಾಬ್ದಾರಿ: ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಮನೆಗೆ ಕಳುಹಿಸುವ ಜವಾಬ್ದಾರಿ ಶಾಲೆಗಳ ಆಡಳಿತ ಮಂಡಳಿಯದ್ದಾಗಿದೆ. ಇದಕ್ಕೆ ಅಗತ್ಯ ಬಸ್‌, ಕ್ಯಾಬ್‌ಗಳನ್ನು ನಿಯೋಜಿಸಬೇಕು. ಹಾಗೂ ಖಾಸಗಿ ವಾಹನಗಳಲ್ಲಿ ಬರುವ ಮಕ್ಕಳಿಗೆ, ಪೋಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ ತಾವು ಕೂಡ ಅದರಲ್ಲಿ ಭಾಗವಹಿಸಿ ಸೂಚನೆಗಳನ್ನು ನೀಡುವುದಾಗಿ ಅವರು ಹೇಳಿದರು.

ಶಾಲಾ ವಾಹನದಲ್ಲಿ ಹೆಚ್ಚು ಮಕ್ಕಳನ್ನು ತುಂಬಬೇಡಿ: ಯಾವುದೇ ಶಾಲಾ ಮಕ್ಕಳು ಗೂಡ್ಸ್‌ ವಾಹನದಲ್ಲಿ ಬಾರದಂತೆ ಗಮನ ವಹಿಸಬೇಕು. ಮಾರುತಿ ವ್ಯಾನ್‌ಗಳ ನಿಯಮ ಬಾಹಿರ‌ವಾಗಿ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಬರುವುದನ್ನು ಕಡಿವಾಣ ಹಾಕಬೇಕು ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಗಾರ್ಮೆಂಟ್ಸ್‌ ಹಾಗೂ ಇತರ ಕಾರ್ಖಾನೆಗಳಿಗೆ ಬರುವ ಕಾರ್ಮಿಕರಿಗೆ ಸೂಕ್ತ ಸುರಕ್ಷತೆ ಸಾರಿಗೆ ವ್ಯವಸ್ಥೆಗಳು ದೊರೆಯಬೇಕು. ಈ ಬಗ್ಗೆ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಕೈಗಾರಿಕಾ ಇಲಾಖೆಗಳು ಜಂಟಿಯಾಗಿ ಕಾರ್ಖಾನೆ ಮುಖ್ಯಸ್ಥರು ಹಾಗೂ ಕಾರ್ಮಿಕ ಮುಖ್ಯಸ್ಥರ ಸಭೆ ನಡೆಸಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂ ಮೇರಿ ಫ್ರಾನ್ಸಿಸ್‌ ಸೂಚನೆ ನೀಡಿದರು.

ಶಾಲಾ ಅವಧಿಯಲ್ಲಿ ಬಸ್‌ ಸೌಲಭ್ಯ ಕಲ್ಪಿಸಿ: ಇದೇ ರೀತಿ ಅಸಂಘಟಿತ ಕಾರ್ಮಿಕರ ಸಾಗಾಟದ ಬಗ್ಗೆಯೂ ವ್ಯವಸ್ಥಿತ ಅರಿವು ಮತ್ತು ಸೂಕ್ತ ಸಾರಿಗೆ ಸಂಪರ್ಕ ಯೋಜನೆ ರೂಪಿಸಬೇಕು. ಶಾಲಾ ಅವಧಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸುವ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ ಸಿಂಗ್‌ ರಾಥೋಡ್‌ ಅವರು ಕೈಗೊಳ್ಳಬಹುದಾದ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್‌ ಕುಮಾರ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜು, ಕಾರ್ಮಿಕ ಅಧಿಕಾರಿ ರಮೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ‌ ಮಂಜನಾಥ್‌, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next