ಬೆಂಗಳೂರು: ಕೋವಿಡ್ 19 ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಆದೇಶ ಮಾಡಿದ ಮೇಲೆ ಸಾವಿರಾರು ಜನ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುತ್ತಿದೆ ವೈದ್ಯಕೀಯ ಲೋಕ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಮತ್ತಷ್ಟು ತೀವ್ರವಾಗಿಯೂ ಕಾಡಲಿದೆ ಎನ್ನುವುದು ಮತ್ತೂಂದು ಆಘಾತಕಾರಿ ವಿಷಯ. ಸೋಂಕು ವ್ಯಾಪಕವಾಗಿ ಹರಡಿದ ಬೆನ್ನಲ್ಲೆ ಅನೇಕ ನಿಯಂತ್ರಣಾ ಕ್ರಮ ಜಾರಿಗೆ ತರಲಾಯಿತು. ಇದರಲ್ಲಿ ಲಾಕ್‌ಡೌನ್ ಮುಖ್ಯವಾದುದು. ಇದರಿಂದ ಜನರು ಮನೆಯಲ್ಲೇ ಉಳಿಯುವಂತಾಯಿತು.
ಜತೆಗೆ ದೇಶದ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿತು. ಪರಿಣಾಮ ಜನರ ತಲಾದಾಯದ ಮೇಲೂ ಆಯಿತು. ಇದರಿಂದ ಜನರು ಮತ್ತಷ್ಟು ಕುಗ್ಗಿದ್ದು, ಜೀವನ ನಡೆಸಲು ಪರಿತಪಿಸುವ ಸ್ಥಿತಿ ತಲುಪಿದ್ದಾರೆ. ಎಲ್ಲರೂ ಮತ್ತೂಮ್ಮೆ ಬದುಕಿನ ಭಾಗವನ್ನು ಪುನರಾರಂಭಿಸಬೇಕಿದೆ. ಇದು ಸವಾಲು ನಿಜ. ಅಸಾಧ್ಯವಲ್ಲ ಎನ್ನುತ್ತಾರೆ ಮನೋವೈದ್ಯರು. ರಾಜ್ಯದ ಬಹುತೇಕ ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತಕ್ಕೆ ಕೈ ಹಾಕಿವೆ. ಇನ್ನೊಂದೆಡೆ ಆದಾಯದ ಕುಸಿಯುತ್ತಿದ್ದು, ಅಗತ್ಯ ಜೀವನಕ್ಕೆ ಕಡಿವಾಣ ಬಿದ್ದಿದೆ. ಇದು ಇನ್ನೊಂದು ವರ್ಗದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಶೇ.20-30ರಷ್ಟು ಖಿನ್ನತೆ ಹೆಚ್ಚುವ ಸಾಧ್ಯತೆ: ಕೋವಿಡ್ 19 ಸೃಷ್ಟಿಸಿದ ಬದಲಾವಣೆಗಳಿಂದ 2020-21ನೇ ಸಾಲಿನಲ್ಲಿ ರಾಜ್ಯದಲ್ಲಿ ಶೇ.20- 30ರಷ್ಟು ಖಿನ್ನತೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ನಿಮ್ಹಾನ್ಸ್‌ನ ವೈದ್ಯರು. ಈ ನಿಟ್ಟಿನಲ್ಲಿ ಡ್ರಗ್ ಪ್ರೂಕ್ಯೂಪ್‌ಮೆಂಟ್, ವೈದ್ಯರಿಗೆ ಸಲಹೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೂ ತರಬೇತಿ ನೀಡಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರು ಮಾಹಿತಿ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ.ರಜಿನಿ, ಯಾವುದೇ ವ್ಯಕ್ತಿಯಾಗಲಿ ತಮ್ಮ ಇಚ್ಛೆಯಂತೆ ಅಥವಾ ತಾವು ಯೋಜಿಸಿದಂತೆ ಸಂಗತಿಗಳು ನಡೆಯದಿರುವಾಗ ಹಾಗೂ ಮುಖ್ಯವಾಗಿ ವಿರುದ್ಧವಾಗಿ ಘಟನೆಗಳು ನಡೆದಾಗ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಹೊರಬರುವ ಸುಲಭ ಮಾರ್ಗವೆಂದರೆ “”ಮಾತನಾಡುವುದು, ತಮ್ಮ ನೋವನ್ನು ಹಂಚಿಕೊಳ್ಳುವುದು” ಎಂದರು. ಇಂಥ ಪ್ರಕರಣ ಹೆಚ್ಚುವ ಸಾಧ್ಯತೆ ಮನಗಂಡ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಖಿನ್ನತೆ ಒಳಗಾದ ವ್ಯಕ್ತಿಯ ಸುತ್ತಮುತ್ತಲಿರುವವರು ಧೈರ್ಯ ತುಂಬುವ ಕೆಲಸ ಮಾಡಬೇಕು. ಕೌನ್ಸೆಲಿಂಗ್‌ಗೆ ಕರೆತರುವ ಕಾರ್ಯ ಮಾಡಬೇಕು ಎಂದರು.
ಟ್ರೆಂಡ್ ನೋಡಿ ಸ್ಟಾರ್ಟ್ ಅಪ್ ಮಾಡಿ: ಜನ ಕೋವಿಡ್ 19 ಬರುವುದಕ್ಕೂ ಮುನ್ನ ಹಣ ಖರ್ಚು ಮಾಡುತ್ತಿದ್ದಂತೆ ಖರ್ಚು ಮಾಡಲು ಇನ್ನು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗಲಿದೆ. ತೀವ್ರ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಸದ್ಯ ಸ್ಟಾರ್ಟ್‌ಅಪ್ ಸೇರಿದಂತೆ ವಿವಿಧ ಸಣ್ಣ ಉದ್ಯೋಗಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಇವರು ಸಹ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ಇನ್ಫಿನಿಟಿ ಇನ್ವೆಸ್ಟ್‌ಮೆಂಟ್ ಸಂಸ್ಥೆಯ ಸಂಸ್ಥಾಪಕ ಸುರಜ್‌ಶ್ರಾಫ್. ಉದ್ಯೋಗ ಕಳೆದುಕೊಂಡವರೂ ಸ್ಟಾರ್ಟ್‌ಅಪ್ ಪ್ರಾರಂಭಿಸಬಹುದು. ಆದರೆ, ಈಗ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿ ಜನ ಖರ್ಚು ಮಾಡುವುದರಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಲಿದ್ದಾರೆ. ಅಗತ್ಯ ವಸ್ತು ಗಳಿಗೆ ಮಾತ್ರ ಆದ್ಯತೆ ನೀಡಲಿದ್ದಾರೆ. ಹೀಗಾಗಿ, ಜನ ನಿತ್ಯ ಬಳಸುವ ವಸ್ತುಗಳಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದರು.
ಆಪ್ತ ಸಮಾಲೋಚಕರ ತಂಡದಿಂದ ಸೇವೆ : ಬೆಂಗಳೂರು: ದೀರ್ಘಾವಧಿಯ ಲಾಕ್‌ಡೌನ್‌ನಿಂದ ಖಿನ್ನತೆಗೆ ಒಳಗಾಗದಂತೆ ಸಮಸ್ಯೆ ಪರಿಹರಿಸಲು ಫೋನ್ ಮತ್ತು ಸ್ಕೈಪ್ ಮೂಲಕ ಮನೋವೈದ್ಯರು ಸಮಾಲೋಚಕರ ತಂಡ ರಚಿಸಿಕೊಂಡು ನೆರವಿಗೆ ಮುಂದಾಗಿದ್ದಾರೆ. ಲಾಕ್‌ಡೌನ್ ಬಳಿಕ ಖಿನ್ನತೆ ಪ್ರಕರಣ ಹೆಚ್ಚಾಗುತ್ತಿದ್ದು, ಸದ್ಯ ಎದು ರಾದ ಏಕಾಂತ, ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತು ಸಮಯವನ್ನು ಹೇಗೆ ಕಳೆಯಬೇಕೆಂದು ಹಲವರಿಗೆ ಅರ್ಥವಾಗುತ್ತಿಲ್ಲ. ಕೆಲವರಿಗೆ ಏಕಾಗ್ರತೆಯಿಂದ ಪತ್ರಿಕೆ ಓದಲು, ಚಿಕ್ಕಪುಟ್ಟ ಕೆಲಸಗಳನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆತ್ಮೀಯರನ್ನು ಭೇಟಿಯಾಗಲೂ ಸಾಧ್ಯವಾಗದೆ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತ ಗೊಂದಲ ಎದುರಿಸುತ್ತಿದ್ದಾರೆ. ಆಪ್ತ ಸಮಾಲೋಚನೆಗಾಗಿ ಹಿರಿಯ ನಾಗರಿಕರು, ಮಧ್ಯ ವಯಸ್ಕರರು ಕರೆ ಮಾಡುತ್ತಿದ್ದಾರೆ ಎಂದು ಅನ್ ಲೀಶ್ ಪಾಸಿಬ ಲಿಟೀಸ್‌ನ ಆಪ್ತ ಸಮಾಲೋಚಕಿ ಡಾ.ಭವ್ಯ ತಿಳಿಸಿದರು.
ಫೋನ್ ಹಾಳಾಗಿದ್ದಕ್ಕೆ ಖಿನ್ನತೆ! ಎಲ್ಲ ಸಮಯದಲ್ಲೂ ಟಿವಿ ಮತ್ತು ಮೊಬೈಲ್ ನೋಡುವುದರಿಂದ ನನಗೆ ಕಿರಿಕಿರಿ ಮತ್ತು ಹತಾಶೆ ಉಂಟಾಗುತ್ತಿದೆ. ಆದರೆ ನಾನು ಇನ್ನೇನು ಮಾಡಬಹುದು? ಎಂದು ಯುವಕನೊಬ್ಬ ಪ್ರಶ್ನಿಸಿದರೆ, ಲಾಕ್‌ಡೌನ್ ನಿಂದ ತನ್ನ ಮನೆಗೆ ಹೋಗಲಾಗದ ವ್ಯಕ್ತಿಯೊಬ್ಬ, “ನನ್ನ ಫೋನ್ ಬಿದ್ದು ಹಾಳಾಗಿದೆ. ಎಲ್ಲಾ ಅಂಗಡಿಗಳನ್ನು ಮುಚ್ಚಿರುವ ಕಾರಣ ಹೊಸದನ್ನು ಖರೀದಿಸಲು ಆಗುತ್ತಿಲ್ಲ. ಫೋನ್ ಇಲ್ಲದೆ ನನಗೆ ಎಲ್ಲವನ್ನೂ ಕಳೆದುಕೊಂಡಾಗಿದೆ ಎಂದು ಕೇಳುತ್ತಾರೆ ಎಂದು ನಿಮ್ಹಾನ್ಸ್ ಮನೋವೈದ್ಯ ಡಾ.ಸಚಿನ್ ತಿಳಿಸಿದರು. ಮಾಹಿತಿಗೆ ಮೊ: 97388 04882 ಸಂಪರ್ಕಿಸಬಹುದು.
–ಹಿತೇಶ್. ವೈ