ಕಾಸರಗೋಡು: ಸೀತಾಂಗೋಳಿ – ವಿದ್ಯಾನಗರ ರಾಜ್ಯ ಹೆದ್ದಾರಿಯ ಕಣ್ಣೂರು – ಅನಂತಪುರ ರಸ್ತೆಯ ಸಿದ್ದಿಬೈಲು ಮೋರಿ ಸಂಕ ಉದ್ಘಾಟನೆಗೊಂಡು ಒಂದು ವರ್ಷದಲ್ಲೇ ಸಂಕದ ಸ್ಲಾಬ್ ಕುಸಿದು ಬಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.ಸ್ಲಾಬ್ ಕುಸಿದು ತಿಂಗಳುಗಳೇ ಕಳೆದರೂ ಯಾವುದೇ ರೀತಿಯ ತುರ್ತು ಕಾಮಗಾರಿಗೆ ಮುಂದಾಗದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ
ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಣ್ಣೂರು 9ನೇ ವಾರ್ಡ್‌ಗೆ ಒಳಪಡುವ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ರಸ್ತೆಯ ಸಿದ್ದಿಬೈಲುನಲ್ಲಿ ಮೋರಿ ಸಂಕ ಕುಸಿದು ರಸ್ತೆಯ ಮಧ್ಯೆಯೇ ಹೊಂಡ ನಿರ್ಮಾಣವಾಗಿ ಅನೇಕ ತಿಂಗಳುಗಳೇ ಕಳೆದಿವೆ. ಅಧಿಕಾರಿಗಳು ತುರ್ತು ಭೇಟಿ ನೀಡಿ ಅಪಘಾತವನ್ನು ಆಹ್ವಾನಿಸುತ್ತಿರುವ ಬಗ್ಗೆ ಸೂಚನಾ ಫಲಕವನ್ನಾದರೂ ಸ್ಥಾಪಿಸದೇ ಇರುವುದರಿಂದ ಇಲ್ಲಿ ಪ್ರತಿನಿತ್ಯ ಸಣ್ಣಪುಟ್ಟ ಅವಘಡಗಳಿಗೆ ಕಾರಣವಾಗುತ್ತಲೇ ಇದೆ. ಇದರಿಂದಾಗಿ ಪ್ರಯಾಣಿಕರ ರೋಷ ಮತ್ತಷ್ಟು ಹೆಚ್ಚಿದೆ.
ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಳಕ್ಕೆ ರಾಜ್ಯ,ಹೊರ ರಾಜ್ಯ ಯಾತ್ರಾರ್ಥಿಗಳು, ಕಿನ್‌ಫ್ರಾ ಇಂಡಸ್ಟ್ರೀಯಲ್‌ಗೆ ಸರಕು ಸಾಗಿಸುವ ಘನ ವಾಹನಗಳು, ವಿವಿಧ ಶಾಲಾ ಕಾಲೇಜು ವಾಹನಗಳು, ಮಾಯಿ ಪ್ಪಾಡಿ – ನಾಯ್ಕಪು ಮೂಲಕ ಕುಂಬಳೆಗೆ ಹತ್ತಿರದ ದಾರಿಯಲ್ಲಿ ತಲುಪುವ ವಾಹನಗಳು ಅಲ್ಲದೆ ಪ್ರತಿ ದಿನ ನೂರಾರು ವಾಹನಗಳು ಸಂಚರಿ ಸುವ ಈ ಮುಖ್ಯ ರಸ್ತೆಯಲ್ಲಿರುವ ಮೋರಿ ಸಂಕ ಇದೀಗ ಸಂಪೂರ್ಣ ಕುಸಿತದ ಭೀತಿ ಎದುರಿಸುತ್ತಿದೆ.
ಪಂಚಾಯತ್ ಪ್ರತಿ ವಾರ್ಷಿಕ ಮುಂಗಡಪತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹಾಗೂ ಸುರಕ್ಷತೆಗೆ ಕೋಟಿ ರೂ. ಲೆಕ್ಕದಲ್ಲಿ ಅನುದಾನ ಮೀಸಲಿರಿಸಿದ್ದರೂ, ಇಂತಹ ತುರ್ತು ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ. ಇದೀಗ ಈ ಮೋರಿ ಸಂಕದ ಉದ್ಘಾಟನೆ ನಡೆದು ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಇನ್ನೊಂದೆಡೆ ಮೋರಿ ಸಂಕದ ಕಾಮಗಾರಿ ಭ್ರಷ್ಟಾ ಚಾರದ ಪರಮಾವಧಿ ಎಂದು ನಾಗರಿ ಕರು ದೂರಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ವಿವಿಧ ಭರವಸೆಗಳನ್ನು ನೀಡಿ ಗೆದ್ದ ನಂತರ ಇಂತಹ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಸ್ಪಂದಿಸದೆ ನಿರ್ಲಕ್ಷ್ಯಧೋರಣೆ ತಳೆಯುತ್ತಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೇವಲ ಒಂದು ವರ್ಷದಲ್ಲೇ ಕುಸಿದ ಕಳಪೆ ಗುಣಮಟ್ಟದ ಸಂಕವನ್ನು ನಿರ್ಮಿಸಿ ಕೊಟ್ಟದ್ದಕ್ಕಾಗಿ ಸಂಬಂಧಪಟ್ಟವರು ತಲೆತಗ್ಗಿಸಬೇಕಾಗಿದೆ. ಸಾರ್ವಜನಿಕರನ್ನು ಮೋಸ ಗೊಳಿಸುವ ಇಂತಹ ಕೆಲಸಗಳ ಬಗ್ಗೆ ನೋವಿದೆ. ಇಂತಹ ಅನಾಸ್ಥೆಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಪ್ರಯತ್ನ ನಮ್ಮದು. ಇನ್ನಾದರೂ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡದಂತೆ ಸಂಬಂಧಿತ ಇಲಾಖೆಯು ಎಚ್ಚರಿಕೆ ವಹಿಸಬೇಕಾಗಿದೆ.
– ಮೊಹಮ್ಮದ್,ಸ್ಥಳೀಯ ನಿವಾಸಿ