ಚಿತ್ರದುರ್ಗ: ಚುನಾವಣೆಗಳಲ್ಲಿ ಒಬ್ಬೊಬ್ಬ ನಾಯಕರದ್ದು ಒಂದೊಂದು ನಂಬಿಕೆಯಿರುತ್ತದೆ. ಆ ನಂಬಿಕೆ ಗೆಲುವಿನ ಗುಟ್ಟಾಗಿರುತ್ತದೆ. ಇಂಥದ್ದೇ ಒಂದು ನಂಬಿಕೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ರಾಜಕೀಯ ಜೀವನದಲ್ಲೂ ಇದೆ.
ಅದೇ ರೀತಿಯಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಪ್ರತಿ ಚುನಾವಣೆ ಯಲ್ಲೂ ಒಂದು ಮುಸ್ಲಿಂ ಕುಟುಂಬದಿಂದ ಠೇವಣಿ ಕಟ್ಟಿಸಿಕೊಳ್ಳುತ್ತಾರೆ.
ತಿಪ್ಪಾರೆಡ್ಡಿ ಎದುರಿಸಿರುವ ಕಳೆದ 6 ಚುನಾವಣೆಗಳಿಗೂ ಟಿಎಂಕೆ ಫ್ಯಾಮಿಲಿಯ ಮಹಮ್ಮದ್ ಜಕ್ರಿಯಾ ಅವರೇ ಮೊದಲ ಚುನಾವಣೆಯಿಂದ ಇಂದಿನ ಚುನಾವಣೆವರೆಗೆ ಠೇವಣಿ ಕಟ್ಟುತ್ತಿದ್ದಾರೆ.
ಕಳೆದ 35 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಜಿ.ಎಚ್.ತಿಪ್ಪಾರೆಡ್ಡಿ ಸತತ 6 ಚುನಾವಣೆಗಳನ್ನು ಎದುರಿಸಿದ್ದು, ಒಮ್ಮೆ ಮಾತ್ರ ಸೋತಿದ್ದಾರೆ. ಈಗ ತಿಪ್ಪಾರೆಡ್ಡಿ ಎದುರಿಸುತ್ತಿರುವುದು ಸತತ ಏಳನೇ ಚುನಾವಣೆ. ಈ ಚುನಾವಣೆಗೂ ಸೂಚಕರಾಗಿ ಆಗಮಿಸಿದ್ದ ಮಹಮ್ಮದ್ ಜಕ್ರಿಯಾ ಅವರು ಠೇವಣಿಯೊಂದಿಗೆ ಬಂದಿದ್ದರು. ಆದರೆ, ಮೊದಲೇ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದ ಜಿ.ಎಚ್.ತಿಪ್ಪಾರೆಡ್ಡಿ, ಠೇವಣಿ ಹಣವನ್ನು ಚುನಾವಣಾ ಆಯೋಗಕ್ಕೆ ತುಂಬಿದ್ದರು.
ಈ ಬಗ್ಗೆ ಉದಯವಾಣಿ’ ಜತೆ ಮಾತನಾಡಿದ ಮಹಮ್ಮದ್ ಜಕ್ರಿಯಾ ಸಾಬ್, ತಿಪ್ಪಾರೆಡ್ಡಿ ಅವರ ಮೊದಲ ಚುನಾವಣೆಯಿಂದಲೂ ನಾವು ಸೂಚಕರು ಹಾಗೂ ಠೇವಣಿ ಕಟ್ಟುತ್ತೇವೆ. ಈ ಚುನಾವಣೆಗೆ ಅವರು ಮೊದಲೇ ಹಣ ತುಂಬಿದ್ದರೂ ಈಗ ತಂದಿರುವ ಹಣ ಅವರಿಗೆ ಸೇರಬೇಕು ಎಂದರು.
ಟಿಎಂಕೆ ಫ್ಯಾಮಿಲಿ ಅಂದ್ರೆ ತುರುವನೂರು ಮಹಮ್ಮದ್ ಖಾಸೀಂ ಎಂದರ್ಥ. ಜಿ.ಎಚ್. ತಿಪ್ಪಾರೆಡ್ಡಿ ಅವರ ಮೂಲ ತುರುವನೂರು ಗ್ರಾಪಂ ವ್ಯಾಪ್ತಿಯ ಕಡಬನಕಟ್ಟೆ. ಇವರದ್ದು ಜಿಎಚ್‌ಆರ್ ಫ್ಯಾಮಿಲಿ. ಅಲ್ಲಿಂದ ಈ ಎರಡೂ ಕುಟುಂಬಗಳ ಹಿರಿಯರು ಒಟ್ಟಿಗೆ ಚಿತ್ರದುರ್ಗಕ್ಕೆ ಬಂದು ನೆಲೆಸಿ ವ್ಯವಹಾರ ಶುರು ಮಾಡುತ್ತಾರೆ. ಹಿಂದಿನ ತಲೆಮಾರಿನಿಂದಲೂ ಎರಡೂ ಕುಟುಂಬಗಳ ನಡುವೆ ಅಣ್ಣ-ತಮ್ಮಂದಿರ ವಿಶ್ವಾಸವಿದೆ.
ಜಿ.ಎಚ್.ತಿಪ್ಪಾರೆಡ್ಡಿ ಅವರ 7 ಚುನಾವಣೆಗ ಳಿಗೂ ಸೂಚಕರಾಗಿದ್ದೇವೆ. ಪ್ರತಿ ಸಲವೂ ಡಿಪಾಸಿಟ್ ಕಟ್ಟುತ್ತಿದ್ದೇವೆ. ಎರಡೂ ಕುಟುಂಬಗಳು ಒಂದೇ ಮನೆಯವರಂತೆ ಇದ್ದೇವೆ. ಹಾಗಾಗಿ ಆ ಸ್ನೇಹ ಹಾಗೇ ಉಳಿದುಕೊಂಡು ಬಂದಿದೆ.
– ಮಹಮ್ಮದ್ ಜಕ್ರಿಯಾ ಸಾಬ್
– ತಿಪ್ಪೇಸ್ವಾಮಿ ನಾಕೀಕೆರೆ