ಮನುಷ್ಯನ ದುರಾಸೆಗೆ ಜಗತ್ತಿನ ಎಲ್ಲವೂ ಕೂಡ ಬಲಿಯಾಗುತ್ತಿದೆ. ಮನುಷ್ಯನು ಪರಿಸರದೊಂದಿಗೆ ಬದುಕುವುದನ್ನು ಬಿಟ್ಟು ಎಲ್ಲವನ್ನು ಕೂಡ ದೋಚುವ ದುರಾಸೆಯು ಮನುಕುಲವನ್ನು ಸಂಕಷ್ಟಕ್ಕೆ ಗುರಿ ಮಾಡಿದೆ. ಈ ದುರಾಸೆಯಿಂದಲೇ ಜಲಮೂಲಗಳು ಬತ್ತಿ ಹೋಗುತ್ತಿದೆ. 5-6 ದಶಕದ ಹಿಂದೆ ಸ್ವಲ್ಪ ಅಗೆದರು ನೆಲದಲ್ಲಿ ನೀರು ಉಕ್ಕಿ ಬರುತ್ತಿತ್ತು. ಎಂತಹ ಬಿಸಿಲಿನಲ್ಲೂ ಕುಡಿಯುವ ನೀರಿಗೆ ತೊಂದರೆ ಇರುತ್ತಿರಲಿಲ್ಲ. ಈಗ ಎಲ್ಲ ಬದಲಾಗಿದೆ. 80ರ ದಶಕದಲ್ಲಿ ತೆರೆದ ಬಾವಿಗೆ ಬದಲಾಗಿ ಕೊಳವೆ ಬಾವಿಗಳನ್ನು ಕೊರೆಯಲು ಆರಂಭಿಸಿದ ನಮ್ಮ ರಾಜ್ಯದ ಬಹುತೇಕ ಕಡೆ ಅಂತರ್ಜಾಲ ಪಾತಳಕ್ಕೆ ಹೋಗಿದೆ.
ಹಿಂದೆ ಕೆರೆ ಕಟ್ಟೆಗಳು, ನದಿ ನೀರನ್ನು ಮತ್ತು ತೆರೆದ ಬಾವಿ ನೀರನ್ನು ಕುಡಿಯಲು ಬಳಸುತ್ತಾ ಇದ್ದೆವು. ಆದರೆ ಮಳೆಯ ಕೊರತೆಯಿಂದ ನೀರು ಸಿಗದೇ ಇದ್ದಾಗ ಕೊಳವೆ ಬಾವಿಯನ್ನು ಕೊರೆಯಲು ಸರಕಾರ ಮುಂದಾಯಿತು. ಆರಂಭದಲ್ಲಿ ಇದು ಪ್ರಯೋಜನಕಾರಿಯಾಯಿತು.
ನಮ್ಮ ರಾಜ್ಯದ ನಗರ ಗಳು ಮತ್ತು ಹಳ್ಳಿಗಳ ಬಾಯಾರಿಕೆಯನ್ನು ಕೊಳವೆಬಾವಿ ನೀಗಿಸುತ್ತಿತ್ತು. ಯಾವಾಗ ಬೇಕಾದರೂ ನೀರು ಸಿಗುತ್ತಿತ್ತು. ಕುಡಿಯುವ ನೀರಿಗಾಗಿ ಮಾತ್ರ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ ಮನುಷ್ಯನ ದುರಾಸೆಯಿಂದಾಗಿ ಕೊಳವೆ ಬಾವಿ ನೀರನ್ನು ಕೃಷಿ ಚಟುವಟಿಕೆಗಳಿಗೂ ಉಪಯೋಗಿಸಲು ಶುರು ಮಾಡಿದೆವು.
ಹೀಗೆ ಕೊಳವೆ ಬಾವಿ ನೀರಿನ ಪ್ರಮಾಣ ಕಡಿಮೆಯಾಯಿತು. ಮೊದಲೆಲ್ಲ 100ಅಡಿ ಕೊರೆದರೆ ಲಭ್ಯ ವಾಗುತಿದ್ದ ನೀರು ಈಗ 1000ಅಡಿ ಕೊರೆದರು ಸಿಗುತ್ತಿಲ್ಲ. ಯಾವಾಗ ಕೊಳವೆ ಬಾವಿ ನೀರನ್ನು ಕೃಷಿ ಉದ್ದೇಶಕ್ಕೆ ಬಳಸಲು ತೊಡಗಿದೆವೋ ಆಗ ಅದರ ಸಂಖ್ಯೆ ಕೂಡ ಹೆಚ್ಚಾಗತೊಡಗಿತು. ಇದರಿಂದ ಅಂತರ್ಜಲ ಪ್ರಮಾಣ ಕುಸಿಯಿತು. ತೆರೆದ ಬಾವಿ ಮತ್ತು ಕೆರೆ ಕಟ್ಟೆಗಳಲ್ಲಿ ಸಂಗ್ರಹ ವಾಗುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಯಿತು.
ಈಗ 1500 ಅಡಿ ಕೊರೆದರು ಕೆಲವು ಕಡೆ ನೀರು ಲಭ್ಯ ವಾಗುತ್ತಿಲ್ಲ. ಈ ರೀತಿ ಕೊಳವೆ ಬಾವಿಗಳನ್ನು ಕೊರೆಯುತ್ತಾ ಭೂ ಗರ್ಭ ದಲ್ಲಿರುವ ನೀರನ್ನು ಖಾಲಿ ಮಾಡುತ್ತ ಹೋದರೆ ಮುಂದಿನ ಜನಾಂಗದ ಭವಿಷ್ಯವನ್ನು ನಾವೇ ಹಾಳು ಮಾಡಿದ ಹಾಗೆ ಆಗುತ್ತದೆ. ಅಂತರ್ಜಲ ಎನ್ನುವುದು ಬ್ಯಾಂಕ್ ನ ಉಳಿತಾಯ ಖಾತೆ ಇದ್ದಂತೆ.
ಅದರಲ್ಲಿ ಅವಾಗವಾಗ ಹಣವನ್ನು ಜಮೆ ಮಾಡಿದರೆ ಮಾತ್ರ ಖಾತೆ ಇಂದ ಹಣವನ್ನು ವಾಪಾಸ್ ಪಡೆಯ ಬಹುದು. ಆದರೆ ಖಾತೆಯಲ್ಲಿರುವ ಹಣವೇ ಖಾಲಿಯಾದರೆ ಹಣವೇ ವಾಪಾಸ್ ಪಡೆಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಅಂತರ್ಜಲ ಮರು ಪೂರಣವಿಲ್ಲದೆ ಅದನ್ನು ಬರಿದು ಮಾಡುತ್ತ ಹೋದರೆ ಇದು ಗಂಭೀರವಾಗುತ್ತದೆ.
ನೀರಿನ ಕೊರತೆಯನ್ನು ನಿವಾರಿಸಲು ಕೊಳವೆ ಬಾವಿ ಕೊರೆಯೋದೊಂದೇ ಪರಿಹಾರವಲ್ಲ. ಬತ್ತಿ ಹೋದ ನದಿಗಳನ್ನು, ಕರೆಯನ್ನು ಪುನಃಚೇತನ ಗೊಳಿಸಬೇಕು. ಕೆರೆಗಳಲ್ಲಿ ಹೂಳು ತೆಗೆಯುವುದು ಹಾಗೂ ಮಳೆ ನೀರನ್ನು ಇಂಗಿಸುವ ಮೂಲಕ ನೀರಿನ ಕೊರತೆಯನ್ನು ಕಡಿಮೆ ಮಾಡುವ ಪ್ರಯತ್ನ ಎಲ್ಲರಿಂದಲೂ ಆಗಬೇಕಾಗಿದೆ.
-ದಿವ್ಯಾ ಕೆರ್ವಾಶೆ
ಎಂ.ಪಿ.ಎಂ., ಕಾಲೇಜು ಕಾರ್ಕಳ