Advertisement

ಕುಂಬಾರರ ಬದುಕಲ್ಲಿ ಮಂಕಾದ ಪಣತಿ! ಮಣ್ಣಿನ ಹಣತೆಗಿಲ್ಲ ಬೇಡಿಕೆ

05:28 PM Nov 11, 2020 | sudhir |

ಗಜೇಂದ್ರಗಡ: ಬದುಕಿನ ಅಂಧಕಾರ ಕಳೆದು ಬೆಳಕಿನೆಡೆಗೆ ದಾರಿ ತೋರುವ ದೀಪಗಳ ಹಬ್ಬ ದೀಪಾವಳಿಯಲ್ಲಿ ಹಣತೆಗೆ ಹೆಚ್ಚಿನ ಬೇಡಿಕೆ. ಆದರೆ, ಕುಂಬಾರರ ಮಣ್ಣಿನ ಹಣತೆ ಆಧುನಿಕತೆಯ ಬಿರುಗಾಳಿಗೆ ಆರುತ್ತಿರುವುದರಿಂದ ಕುಂಬಾರರ ಬದುಕು ಅಕ್ಷರಶಃ ಕತ್ತಲಾಗುತ್ತಿದೆ.

Advertisement

ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ, ಕುಂಬಾರರ ಬದುಕು ಕಷ್ಟಕರವಾಗಿದೆ.
ಕೇವಲ ಹಲವಾರು ವರ್ಷಗಳಿಂದ ಕುಂಬಾರ ಕುಟುಂಬಗಳು ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಹಣತೆಗಳ ಮಾರಾಟ ಭರ್ಜರಿಯಾಗಿ ಮಾಡುತ್ತಿದ್ದವು. ವರ್ಷ ಕಳೆದಂತೆ ಹಣತೆಗಳಿಗೆ ಬೇಡಿಕೆ ಕುಂದಿದ್ದು, ಕುಂಬಾರರ ಬದುಕಿನ ಬಂಡಿ ಸಾಗಿಸುವುದು ದುಸ್ತರವಾಗಿದೆ. ಕುಂಬಾರರ ಹಣತೆ ಈಗ ಎಲ್ಲರಿಂದ ಕಡೆಗಣನೆಗೆ ಒಳಗಾಗುತ್ತಿರುವುದು ಖೇದಕರ ಸಂಗತಿಯಾಗಿದೆ.

ಕುಂಬಾರರ ಶ್ರಮಕ್ಕೆ ಫಲವಿಲ್ಲ
ದಶಕದ ಹಿಂದೆ ದೀಪಾವಳಿ ಹಬ್ಬ ಬಂತೆಂದರೆ ಸಾಕು ಕುಂಬಾರರಿಗೆ ಕೈ ತುಂಬ ಕೆಲಸವಿರುತ್ತಿತ್ತು. ಆಗ ಅಕ್ಷರಶಃ ಅವರ ಬದುಕಿಗೆ ಬೆಳಕಿನ ಹಬ್ಬವೇ ಅದಾಗಿತ್ತು. ದೀಪವಾಳಿ ಎರಡು ತಿಂಗಳ ಮುಂಚೆಯೇ ಜೇಡಿ ಮಣ್ಣು ತಂದು, ಹದ ಮಾಡಿ ಮನೆಯ ಎಲ್ಲ ಸದಸ್ಯರು ಸೇರಿ ಸಾವಿರಾರು ಹಣತೆ ತಯಾರಿಸಿ ಮನೆಯೊಳಗೆ, ಅಂಗಳ, ಖಾಲಿ ಜಾಗದಲ್ಲಿ ಆರಲು ಇಡುತ್ತಿದ್ದರು. ಗ್ರಾಹಕರು ಮುಗಿಬಿದ್ದು ಮಣ್ಣಿನ ಹಣತೆಗಳನ್ನು 5 ರಿಂದ 10 ಡಜನ್‌ ಅವರೆಗೆ ಒಯ್ಯುತ್ತಿದ್ದರು. ಆದರೆ, ಈಗ ಅದೆಲ್ಲವೂ ಮಾಯವಾಗಿದೆ. ಆದರೆ, ಇಂದು ಕುಂಬಾರ ಕುಂಟುಂಬಗಳು ಒಂದು ಟ್ರಾಕ್ಟರ್‌ ಮಣ್ಣು ತಂದು ಕೆಲವೇ, ಕೆಲವು ಹಣತೆ ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ:ನಕಲಿ ವೋಟರ್ ಐಡಿ ಪ್ರಕರಣ: ಶಾಸಕ ಮುನಿರತ್ನಗೆ ಮತ್ತಷ್ಟು ಸಂಕಷ್ಟ?

ದೀಪದ ಬುಡದಲ್ಲಿ ಕತ್ತಲು
ದೀಪಾವಳಿಗೂ ಮುನ್ನ ಆಧುನಿಕ ಯಂತ್ರಗಳ ಮೂಲಕ ತಯಾರಿಸಿದ ಪಿಂಗಾಣಿಯ ಬಣ್ಣ ಬಣ್ಣದ ವಿವಿಧ ನಮೂನೆಯ ಚಿತ್ತಾಕರ್ಷಕ ಹಣತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿನಲ್ಲೂ ಕತ್ತಲು ಆವರಿಸಿದಂತಾಗಿದೆ

Advertisement

ಮಣ್ಣಿನ ಹಣತೆ ಕೇಳ್ಳೋರೇ ಇಲ್ಲ
ದೀಪ ಹಚ್ಚಲು ದೀರ್ಘ‌ ಕಾಲ ಬಾಳಿಕೆ ಬರುವ ಮಣ್ಣಿನ ಹಣತೆಗಳೇ ಶ್ರೇಷ್ಠ. ಇವು ಎಷ್ಟೊತ್ತು ದೀಪ ಹಚ್ಚಿದರೂ ಏನೂ ಆಗುವುದಿಲ್ಲ. ಜೋಡಿ ಹಣತೆಗೆ ಕೇವಲ 10 ರಿಂದ 15 ರೂ. ವರೆಗೆ ಮಾರಾಟ ಮಾಡಿದರೂ ಸಹ ಮಣ್ಣಿನ ಹಣತೆಗಳನ್ನು ಜನತೆ ಕೊಂಡುಕೊಳ್ಳದಿರುವುದು ವಿಪರ್ಯಾಸ.

ಸರ್ಕಾರದ ಪ್ರೋತ್ಸಾಹವಿಲ್ಲ
ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪಿಂಗಾಣಿ ಹಾವಳಿಯಿಂದಾಗಿ ಮಣ್ಣಿನ ಹಣತೆಗೆ ಬೆಲೆ ಇಲ್ಲದಾಗಿದೆ. ಸರ್ಕಾರ ತಮಗೆ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ಇದರಿಂದಾಗಿ ಕುಂಬಾರರ ಜೀವನ ಬೂದಿ ತಿಂದು ಬೂದಿ ಕಕ್ಕುವಂತಾಗಿದೆ ಎನ್ನುತ್ತಾರೆ ಅನಸವ್ವ ಕುಂಬಾರ.

– ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next