ಅಥಣಿ: ರಾಜ್ಯ ಸಾರಿಗೆ ಇಲಾಖೆಯ ಖಾಸಗೀಕರಣಕ್ಕೆ ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಮಾತನಾಡಿ, ವಿದೇಶಿ ಕಂಪನಿಯೊಂದು ಸಾರಿಗೆ ಇಲಾಖೆಗೆ 10 ರಿಂದ 30 ಸಾವಿರದಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಉಚಿತವಾಗಿ ನೀಡಲಿದೆ.
ಜತೆಗೆ, ಈ ಎಲ್ಲ ವಾಹನಗಳ ನಿರ್ವಹಣೆ ಮತ್ತು ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಚಾಲಕ ಮತ್ತು ನಿರ್ವಾಹಕರು ಮತ್ತು ಸಿಬ್ಬಂದಿಗಳ ಸಂಬಳದ ವೆಚ್ಚವನ್ನು ಕೂಡ ಭರಿಸಲಿದೆ. ಲಾಭದಲ್ಲಿ ಶೇ.60ರಷ್ಟು ಪಾಲನ್ನು ಸಾರಿಗೆ ಇಲಾಖೆಗೆ ನೀಡಲಿದೆ ಎಂದರು. ವಿದೇಶಿ ಕಂಪನಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ಇಷ್ಟರಲ್ಲಿಯೇ ವಿದೇಶಕ್ಕೆ ತೆರಳಿ ಮುಖ್ಯಮಂತ್ರಿಗೆ ವರದಿ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ 1.30 ಲಕ್ಷ ಸಾರಿಗೆ ನೌಕರರು ಹಗಲು ರಾತ್ರಿ ಎನ್ನದೇ ದುಡಿಯುತ್ತಾರೆ. ಆದರೆ, ಅವರಿಗೆ ನಿಗಮದಿಂದ ಸಂಬಳ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಅಲ್ಲದೆ ಅವರಿಗೆ ಸಿಗಬೇಕಾದ ಸವಲತ್ತುಗಳೂ ಕೂಡ ಸಿಗುತ್ತಿಲ್ಲ. ಹೀಗಾಗಿ, ನಮ್ಮನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಅನೇಕ ವರ್ಷಗಳಿಂದ ರಾಜ್ಯ ಸರಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ ಕೃಷ್ಣಾ ನದಿಯಿಂದ ನೀರು ಬಿಡಲು ಯಾವುದೇ ಒಪ್ಪಂದ ಮಾಡಿಕೊಳ್ಳುತ್ತೇ ನೆಂದು ಎಲ್ಲಿಯೂ ಹೇಳಿಲ್ಲ. ಆದರೆ, ಬೇಸಿಗೆ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ 4 ಟಿಎಂಸಿ ನೀರು ಬಿಡುವ, ಮಳೆಗಾಲದ ಸಂದರ್ಭ ಆಲಮಟ್ಟಿ ಜಲಾ ಶಯದ ಹಿನ್ನೀರಿನಿಂದ 4 ಟಿಎಂಸಿ ನೀರು ಬಿಡುವ ಮಹಾರಾಷ್ಟ್ರದ ಪ್ರಸ್ತಾವನೆ ಪರಿಶೀಲಿಸುವು ದಾಗಿ ಹೇಳಿದ್ದಾರೆ. ಅವರ ಹೇಳಿಕೆ ತಪ್ಪಾಗಿ ಬಿಂಬಿಸಲಾಗಿದೆ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ