Advertisement

ಮೆಡಿಕಲ್‌ ಕಾಲೇಜ್‌ ಹೆಚ್ಚಳದಿಂದ ಇಲಾಖೆ ಮಹತ್ವ ಕಡಿಮೆ: ಪಾಟೀಲ

06:30 AM Dec 09, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೆಡಿಕಲ್‌ ಕಾಲೇಜುಗಳ ಸಂಖ್ಯೆ ಹೆಚ್ಚಾದಷ್ಟು ಆರೋಗ್ಯ ಇಲಾಖೆಯ ಅಸ್ತಿತ್ವ ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌ ಪಾಟೀಲ ಆತಂಕ ವ್ಯಕ್ತಪಡಿಸಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಕಾಯಕಲ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಡಿಕಲ್‌ ಕಾಲೇಜುಗಳ ಸಂಖ್ಯೆ ಹೆಚ್ಚಳದಿಂದ ಜಿಲ್ಲಾಸ್ಪತ್ರೆಗಳ ಮಹತ್ವ ಕಡಿಮೆಯಾಗುತ್ತಿದೆ. ಇನ್ನು ಮೆಡಿಕಲ್‌ ಕಾಲೇಜುಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಮುಂದಿನ ದಿನಗಳಲ್ಲಿ ಇಲಾಖೆಯ ಹೆಸರು ಸಮಾಜದಲ್ಲಿ ಕ್ಷೀಣಿಸುತ್ತದೆ ಎಂದರು.

ಕೇಂದ್ರ ಸರ್ಕಾರದಿಂದ ಬರುವ ಹೆಚ್ಚಿನ ಅನುದಾನವನ್ನು ಮೆಡಿಕಲ್‌ ಕಾಲೇಜುಗಳು ಪಡೆಯುತ್ತಿದ್ದು, ಇದರಲ್ಲಿ ಜಿಲ್ಲಾಸ್ಪತ್ರೆಗಳು ಹಿಂದೆ ಬಿದ್ದಿವೆ. ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲವೊಂದು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಅರ್ಹತೆಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಸಾಮರ್ಥಯವಿದ್ದರೂ, ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನೆ ಮಾಡುತ್ತಿರುವುದು ನೋವಿನ ಸಂಗತಿ. ಖಾಸಗಿ ಆಸ್ಪತ್ರೆಗಳಿಗಿಂತಲೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆರಿಗೆಗಳು ಆಗುತ್ತಿದ್ದು, ವೈದ್ಯರು ಅಂತಹ ಸಂದರ್ಭಗಳಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸಾಮಾನ್ಯ ಜನರ ಮನಸ್ಸು ಗೆಲ್ಲುವಂತಹ ಆಸ್ಪತ್ರೆಗಳನ್ನಾಗಿ ಸಾರ್ವಜನಿಕ ಆಸ್ಪತ್ರೆಗಳನ್ನು ರೂಪಿಸುವ ಜವಾಬ್ದಾರಿಯನ್ನು ವೈದ್ಯರು ವಹಿಸಿಕೊಳ್ಳಬೇಕಿದ್ದು, ಇಲಾಖೆಯ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದರೆ ಕಾಯಕಲ್ಪದಂತಹ ಎರಡು ಪಟ್ಟು ಹೆಚ್ಚಿನ ಪ್ರಶಸ್ತಿಗಳನ್ನು ನೀಡಲು ಉತ್ಸಾಹ ಬರುತ್ತದೆ. ಜತೆಗೆ ಮುಂದಿನ ವರ್ಷದಿಂದ ಕೇಂದ್ರ ಸರ್ಕಾರಕ್ಕಿಂತಲೂ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಜವೇದ್‌ ಅಖ್ತರ್‌, ಆಯುಕ್ತ ಡಾ.ಪಂಕಜ್‌ ಕುಮಾರ್‌ ಪಾಂಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ರತನ್‌ ಕೇಲ್ಕರ್‌, ಆರೋಗ್ಯ ಮತ್ತು ಕುಟುಂಟ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಎಸ್‌.ಪುಷ್ಪರಾಜ್‌, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ.ಸತೀಶ್‌ ಹಾಜರಿದ್ದರು.

Advertisement

ಸರ್ಕಾರಿ ಆಸ್ಪತ್ರೆ ವೈದ್ಯರಿಗೂ ಸಮಾನ ವೇತನ
ಮೆಡಿಕಲ್‌ ಕಾಲೇಜುಗಳ ವೈದ್ಯರಿಗೆ ಸಿಗುವಷ್ಟೇ ವೇತನವನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೂ ನೀಡಬೇಕಿದೆ. ಹೀಗಾಗಿ ರೆಫ‌ರಲ್‌ ವ್ಯವಸ್ಥೆಯಡಿ ಬರುವಂತಹ ಹಣದ ಪೈಕಿ ಶೇ.30ರಷ್ಟನ್ನು ವೈದ್ಯರಿಗೆ ನೀಡಬೇಕೆಂದು ಸರ್ಕಾರ ಮುಂದೆ ಪ್ರಸ್ತಾವನೆ ಇಡಲಾಗಿದ್ದು, ಅದನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಜತೆಗೆ ಆಯುಷ್ಮಾನ್‌ ಭಾರತ ಚಿಕಿತ್ಸೆಯಿಂದ ಬರುವ ಬಹುದೊಡ್ಡ ಹಣದ ಪೈಕಿ ಶೇ.70ರಷ್ಟು ಹಣವನ್ನು ರಾಜ್ಯ ಉಳಿದ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಶಿವಾನಂದ ಪಾಟೀಲ ಭರವಸೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶೋಷಣೆ: ಶಿವಾನಂದ ಪಾಟೀಲ
ಸರ್ಕಾರಿ ಆಸ್ಪತ್ರೆಗಳು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ಕೆಲ ತಪ್ಪುಗಳು ಮಾಡುತ್ತಿದೆ. ಆದರೆ, ಅದಕ್ಕಿಂತಲೂ ಎರಡು ಪಟ್ಟು ಸಾಮಾನ್ಯ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಶೋಷಣೆ ಆಗುತ್ತಿದೆ. ಅಂತಹ ಆಸ್ಪತ್ರೆಗಳ ಬಗ್ಗೆ ಸರ್ಕಾರಿ ವೈದ್ಯರು ನಿಗಾವಹಿಸಬೇಕಿದೆ. ಜತೆಗೆ ಕೆಪಿಎಂಇ ಕಾಯ್ದೆಯ ಕನಿಷ್ಠ ತಿಳುವಳಿಕೆ ಇಟ್ಟುಕೊಂಡು ಯಾವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶೋಷಣೆ ಆಗುತ್ತಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತೆರವು ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

ಕಾಯಕಲ್ಪ ಪ್ರಶಸ್ತಿ ವಿವರ
ಅತ್ಯುತ್ತಮ ಸೇವೆ ನೀಡುತ್ತಿರುವ ಜಿಲ್ಲಾಸ್ಪತ್ರೆಗಳು

ಪ್ರಥಮ ಸ್ಥಾನ(50 ಲಕ್ಷ ರೂ.)    ಚಾಮರಾಜೇಂದ್ರ ಟೀಚಿಂಗ್‌ ಆಸ್ಪತ್ರೆ, ಹಾಸನ
ದ್ವಿತೀಯ (20 ಲಕ್ಷ ರೂ.)    ಬಳ್ಳಾರಿ ಜಿಲ್ಲಾ ಆಸ್ಪತ್ರೆ

ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ತಾಲೂಕು ಆಸ್ಪತ್ರೆಗಳು
ಪ್ರಥಮ    ಗಂಗಾವತಿ ತಾಲೂಕು ಆಸ್ಪತ್ರೆ, ಕೊಪ್ಪಳ
ದ್ವೀತಿಯ    ಶ್ರೀನಿವಾಸಪುರ ತಾಲೂಕು ಆಸ್ಪತ್ರೆ, ಕೋಲಾರ

ರಾಷ್ಟ್ರೀಯ ಪ್ರಮಾಣೀಕೃತ ಸೇವೆಗಳು ನೀಡುತ್ತಿರುವ ಜಿಲ್ಲಾಸ್ಪತ್ರೆಗಳು
ತುಮಕೂರು
ಕೊಪ್ಪಳ
ವಿಜಯಪುರ
ವೆನ್‌ಲಾಕ್‌

ಸ್ವತ್ಛ ಸ್ವಸ್ತ ಸರ್ವತ್ರ ವಿಭಾಗದಲ್ಲಿ ಸ್ವತ್ಛ ರತ್ನ ಪ್ರಶಸ್ತಿ ಪಡೆದ ಸಮುದಾಯ ಆರೋಗ್ಯ ಕೇಂದ್ರಗಳು
ಕೆಂಗೇರಿ, ಬೆಂಗಳೂರು ನಗರ
ಮೂಲ್ಕಿ, ದಕ್ಷಿಣ ಕನ್ನಡ
ಬೈಂದೂರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next