ಬೆಂಗಳೂರು: ಗೊಟ್ಟಿಗೆರೆ-ನಾಗವಾರ ನಡುವಿನ “ನಮ್ಮ ಮೆಟ್ರೋ’ ಸುರಂಗ ಮಾರ್ಗವು ರಕ್ಷಣಾ ಇಲಾಖೆ ಜಾಗದಲ್ಲಿ ಹಾದುಹೋಗಲಿದ್ದು, ನಿಲ್ದಾಣವನ್ನು ಕೂಡ ನಿರ್ಮಿಸಲು ಉದ್ದೇಶಿಸಲಾಗಿದೆ. ಆ ಭೂಮಿಗೆ ಪ್ರತಿಯಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಪರವಾನಗಿ ಶುಲ್ಕ ಪಾವತಿಸಬೇಕು ಎಂಬ ಷರತ್ತು ವಿಧಿಸಿದೆ. ಈ ಸಂಬಂಧ ಹಗ್ಗಜಗ್ಗಾಟ ಶುರುವಾಗಿದ್ದು, ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.
ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್ ಮೆಟ್ರೋ ನಿಲ್ದಾಣ ಮತ್ತು ಇದಕ್ಕೆ ಬಂದು ಸೇರುವ ಸುರಂಗ ಮಾರ್ಗ ಸೇರಿ ಸುಮಾರು ಎಂಟು ಸಾವಿರ ಚದರ ಮೀಟರ್ ರಕ್ಷಣಾ ಇಲಾಖೆ ಜಾಗದ ಅವಶ್ಯಕತೆ ಇದೆ. ಈ ಭೂಮಿಗೆ ಪ್ರತಿಯಾಗಿ ನಿಯಮದ ಪ್ರಕಾರ ಭೂಮಿಯ ಮಾರುಕಟ್ಟೆ ಬೆಲೆಯ ಶೇಕಡಾ ಎರಡೂವರೆಯಷ್ಟು ಮೊತ್ತವನ್ನು ಪರವಾನಗಿ ಶುಲ್ಕದ ರೂಪದಲ್ಲಿ ಪಾವತಿಸಬೇಕು ಅಥವಾ ತನ್ನ ಸಚಿವಾಲಯದಿಂದ ಶುಲ್ಕದಿಂದ ವಿನಾಯ್ತಿ ಪಡೆಯಬೇಕು ಎಂಬ ಷರತ್ತನ್ನು ಇಲಾಖೆಯು ನಿಗಮದ ಮುಂದಿಟ್ಟಿದೆ.
ವಿಳಂಬ ಸಾಧ್ಯತೆ: ವೆಲ್ಲಾರ ಜಂಕ್ಷನ್ ಮತ್ತು ಎಂ.ಜಿ. ರಸ್ತೆ ಬಳಿ ಇದೇ ಯೋಜನೆ ನಿರ್ಮಾಣಕ್ಕೆ ನೀಡಲಾದ ಭೂಮಿಗೆ ಈ ರೀತಿಯ ಯಾವುದೇ ನಿಯಮ ವಿಧಿಸಿರಲಿಲ್ಲ. ಅಷ್ಟೇ ಅಲ್ಲ, ದೆಹಲಿ ಮೆಟ್ರೋ ರೈಲು ಯೋಜನೆ ನಿರ್ಮಿಸುವಾಗಲೂ ಇದನ್ನು ಅನುಸರಿಸಿರಲಿಲ್ಲ. ಈಗ ಏಕಾಏಕಿ ಯಾಕೆ ಎಂಬ ಪ್ರಶ್ನೆ ಬಿಎಂಆರ್‌ಸಿಎಲ್ ಅನ್ನು ಚಿಂತೆಗೆ ಹಚ್ಚಿದೆ. ಬೆನ್ನಲ್ಲೇ ಈ ಸಂಬಂಧದ ಹಗ್ಗಜಗ್ಗಾಟದಿಂದ ಯೋಜನೆ ಕೂಡ ವಿಳಂಬವಾಗಲಿದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಯೋಜನಾ ವೆಚ್ಚ ಹೆಚ್ಚಳ ರೂಪದಲ್ಲಿ ಪರಿಣಮಿಸುವ ಸಾಧ್ಯತೆ ಇದೆ.
ನಿರಂತರ ಪಾವತಿ: ಪ್ರಸ್ತುತ ಲ್ಯಾಂಗ್‌ಫೋರ್ಡ್ ನಿಲ್ದಾಣ ನಿರ್ಮಾಣಕ್ಕಾಗಿ ಪಡೆಯಲು ಉದ್ದೇಶಿಸಿರುವ ಜಾಗದ ಮಾರುಕಟ್ಟೆ ದರ ಪ್ರತಿ ಚದರ ಮೀಟರ್‌ಗೆ ಲಕ್ಷ ರೂ. ಇದೆ. ಕೇವಲ ಎಂಟು ಸಾವಿರ ಚದರ ಮೀಟರ್‌ಗೆ ಲೆಕ್ಕಹಾಕಿದರೆ, ಅಂದಾಜು ಎರಡು ಕೋಟಿ ರೂ. ಆಗುತ್ತದೆ. ಇದನ್ನು ಪ್ರತಿ ವರ್ಷ ಪರವಾನಗಿ ಶುಲ್ಕದಲ್ಲಿ ನಿರಂತರವಾಗಿ ಪಾವತಿಸಬೇಕಾಗುತ್ತದೆ. ರಕ್ಷಣಾ ಭೂಮಿಗೆ ಸಂಬಂಧಿಸಿದ ಅಡತಡೆಗಳ ನಿವಾರಣೆಗಾಗಿಯೇ ಮಂಡಳಿಯೊಂದನ್ನು ರಚಿಸಲಾಗಿದೆ. ಮಂಡಳಿ ಸಭೆ ಹಾಗೂ ಈಚೆಗೆ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲೂ ಈ ಕುರಿತು ಚರ್ಚೆ ಆಗಿದೆ. ಪರವಾನಗಿ ಶುಲ್ಕದ ಬಗ್ಗೆಯೂ ಚರ್ಚೆ ಆಗಿದ್ದು, ಯಾವುದೇ ಇತ್ಯರ್ಥ ಆಗಿಲ್ಲ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಒತ್ತಡದಲ್ಲಿ ಬಿಎಂಆರ್‌ಸಿಎಲ್: ಡೈರಿ ವೃತ್ತದಿಂದ ಲ್ಯಾಂಗ್‌ಫೋರ್ಡ್ ನಿಲ್ದಾಣದ ಮೂಲಕ ವೆಲ್ಲಾರ ಜಂಕ್ಷನ್ ನಡುವಿನ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ತಾಂತ್ರಿಕ ಬಿಡ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರ್ಥಿಕ ಬಿಡ್ ಬಾಕಿ ಇದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಗುತ್ತಿಗೆದಾರರಿಗೆ ಜಾಗ ಹಸ್ತಾಂತರಿಸಬೇಕಾಗುತ್ತದೆ. ಆದರೆ, ಮತ್ತೂಂದೆಡೆ ಮಂಡಳಿ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ, ಹೊಸ ಷರತ್ತಿನಿಂದ ಲ್ಯಾಂಗ್‌ಫೋರ್ಡ್ ನಿಲ್ದಾಣ ವಿಚಾರ ಕಗ್ಗಂಟಾಗಿದೆ. ಈ ಮಧ್ಯೆ ವೆಲ್ಲಾರ ಜಂಕ್ಷನ್ ಬಳಿ ಇರುವ ಭೂಮಿ ಕೂಡ ತನ್ನದು ಎಂದು ರಕ್ಷಣಾ ಇಲಾಖೆ ಹೇಳುತ್ತಿದೆ. ಇನ್ನೊಂದು ಕಡೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಚೆಗಷ್ಟೇ ಮೆಟ್ರೋ ಪ್ರಗತಿ ಪರಿಶೀಲನೆ ನಡೆಸಿ, ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ನಿಗಮವು ಈಗ ಒತ್ತಡಕ್ಕೆ ಸಿಲುಕಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಬೆಂಗಳೂರು ಅಭಿವೃದ್ಧಿ ಖಾತೆ ಸ್ವತಃ ಮುಖ್ಯಮಂತ್ರಿಗಳ ಬಳಿ ಇದೆ. ಆದ್ದರಿಂದ ಈ ಕುರಿತು ರಕ್ಷಣಾ ಸಚಿವರೊಂದಿಗೆ ಚರ್ಚಿಸಿ, ಮನವೊಲಿಸುವ ಅವಶ್ಯಕತೆ ಇದೆ. ಅಥವಾ ಮಂಡಳಿ ಮನವೊಲಿಸಿ, ಭೂಮಿ ಪಡೆದು ಕಾಮಗಾರಿಗೆ ಮುಂದಾಗಬೇಕು. ನಂತರ ಈ ಪರವಾನಗಿ ಶುಲ್ಕ ವಿಚಾರ ಬಗೆಹರಿಸಿಕೊಳ್ಳಬಹುದು. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಭೂಮಿ ವಿವಾದದಲ್ಲೂ ಇದೇ ನೀತಿ ಅನುಸರಿಸಲಾಗಿತ್ತು ಎಂದು ತಜ್ಞರು ಹೇಳುತ್ತಾರೆ.
ಸುರಂಗಕ್ಕೆ ಅನುಮತಿ ಅಗತ್ಯವಿಲ್ಲ?: ಮೆಟ್ರೋ ರೈಲು ನಿಯಮಗಳ ಪ್ರಕಾರ ಯಾವುದೇ ಮೆಟ್ರೋ ಯೋಜನೆಗೆ ಸಂಬಂಧಿಸಿದ ಸುರಂಗ ಮಾರ್ಗ ನಿರ್ಮಾಣಕ್ಕೆ ಆ ಮಾರ್ಗದಲ್ಲಿ ಬರುವ ಭೂಮಾಲೀಕರ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ನಿಲ್ದಾಣ ನಿರ್ಮಾಣಕ್ಕೆ ಮಾತ್ರ ಅನುಮತಿ ಕಡ್ಡಾಯ. ಇನ್ನು ಮಾರ್ಗ ನಿರ್ಮಾಣದ ವೇಳೆ ಕಟ್ಟಡಗಳು ಜಖಂಗೊಂಡರೆ, ಅವುಗಳಿಗೆ ಪರಿಹಾರ ನೀಡುವುದು ಆಯಾ ಮೆಟ್ರೋ ರೈಲು ನಿಗಮಗಳ ಜವಾಬ್ದಾರಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಮೆಟ್ರೋ ಯೋಜನೆಗೆ ಬೇಕಿರುವ ರಕ್ಷಣಾ ಇಲಾಖೆ ಭೂಮಿ (ಚ.ಮೀ.ಗಳಲ್ಲಿ).
ನಿಲ್ದಾಣ ತಾತ್ಕಾಲಿಕ ಶಾಶ್ವತ
ಲ್ಯಾಂಗ್‌ಫೋರ್ಡ್ 1,858.52 6,231.74
ವೆಲ್ಲಾರ 92.33 3393.05
ಎಂ.ಜಿ. ರಸ್ತೆ 1,468.31 3,801.42
ಒಟ್ಟಾರೆ 3,419.16 13,426.22
* ವಿಜಯಕುಮಾರ್ ಚಂದರಗಿ