ಬೆಂಗಳೂರು: “ಮೂವತ್ತಾರು ವರ್ಷಗಳ ಇಲಾಖೆಯ ಸೇವೆ ತೃಪ್ತಿ ತಂದಿದ್ದು ರಾಜ್ಯದ ಜನತೆ ಹಾಗೂ ಸರ್ಕಾರಕ್ಕೆ ಋಣಿಯಾಗಿ ರುತ್ತೇನೆ’ ಎಂದು ರಾಜ್ಯ ಪೊಲೀಸ್ ಇಲಾಖೆಯ ನಿರ್ಗಮಿತ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ತಿಳಿಸಿದರು.
ರಾಜ್ಯದ ಮೊಟ್ಟಮೊದಲ ಮಹಿಳಾ ಡಿಜಿ- ಐಜಿಪಿ ನೀಲಮಣಿ ಎನ್.ರಾಜು, ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್, ಗೃಹರಕ್ಷಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಶುಕ್ರವಾರ ಸೇವೆಯಿಂದ ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಇಲಾಖೆಯಿಂದ ಬೀಳ್ಕೊಡುಗೆ ನೀಡಲಾಯಿತು.
ಇಲಾಖೆಯ ವತಿಯಿಂದ ಪಥಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಲಾ ಯಿತು. ಈ ವೇಳೆ ಮಾತನಾಡಿದ ನೀಲಮಣಿ ಎನ್.ರಾಜು, ಇಲಾಖೆಯ ಮುಖ್ಯಸ್ಥೆಯಾಗಿ ಜವಾಬ್ದಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಪ್ತಿಯಿದೆ. ಹಲವು ಸವಾಲಿನ ಸಂದರ್ಭದಲ್ಲೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲೂ ಭದ್ರತೆ, ಕಾನೂನು ಸುವ್ಯವಸ್ಥೆ ಯಶಸ್ವಿಯಾಗಿ ನಿಭಾಯಿಸಲಾಯಿತು.
ಈ ಕಾರ್ಯಕ್ಕೆ ಕೇಂದ್ರ ಚುನಾವಣಾ ಆಯೋಗದ ಪ್ರಶಸ್ತಿ ಕೂಡ ಬಂದಿತ್ತು ಎಂದು ಸ್ಮರಿಸಿದರು. ರಾಘವೇಂದ್ರ ಔರಾದ್ಕರ್ ಮಾತನಾಡಿ, ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಿರುವುದು ಸಾಧನೆ ಎಂದು ಭಾವಿಸುತ್ತೇನೆ. ಈ ವರದಿಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಜಾರಿಮಾಡುವ ವಿಶ್ವಾಸವಿದೆ ಎಂದರು.
ಎಂ.ಎನ್.ರೆಡ್ಡಿ ಮಾತನಾಡಿ, ಸುದೀರ್ಘ ಸೇವೆ ಕುರಿತು ಹೆಮ್ಮೆಯಿದೆ. ಇಲಾಖೆ ಸಿಬ್ಬಂದಿ ನೆರವಿನಿಂದ ಸಂತೋಷದಿಂದ ಕಾರ್ಯನಿರ್ವ ಹಿಸಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಕುಟುಂಬ ವರ್ಗ ಹಾಜರಿತ್ತು. ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.