ಪುದುಚೇರಿ: ದೇವಧರ್ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ದಕ್ಷಿಣ ವಲಯದ ನಾಗಾಲೋಟ ಮುಂದುವರಿದಿದೆ. ರವಿವಾರದ ಪಂದ್ಯ ದಲ್ಲಿ ಅಗರ್ವಾಲ್ ಬಳಗ ಪೂರ್ವ ವಲಯವನ್ನು 5 ವಿಕೆಟ್‌ಗಳಿಂದ ಮಣಿಸಿ ಸತತ 4ನೇ ಜಯ ಸಾಧಿಸಿತು. ಇದರೊಂದಿಗೆ ಫೈನಲ್ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪೂರ್ವ ವಲಯ 46 ಎಸೆತಗಳಲ್ಲಿ 229ಕ್ಕೆ ಆಲೌಟ್ ಆಯಿತು. ದಕ್ಷಿಣ ವಲಯ 44.2 ಓವರ್‌ಗಳಲ್ಲಿ 5 ವಿಕೆಟಿಗೆ 230 ರನ್ ಬಾರಿಸಿತು. ಇದು ಪೂರ್ವ ವಲಯಕ್ಕೆ 4 ಪಂದ್ಯಗಳಲ್ಲಿ ಎದುರಾದ ಮೊದಲ ಸೋಲು. ಅಜೇಯ ದಕ್ಷಿಣ ವಲಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ (16 ಅಂಕ).
ನಾಯಕ ಮಾಯಾಂಕ್ ಅಗರ್ವಾಲ್ ಮತ್ತು ವನ್‌ಡೌನ್ ಆಟಗಾರ ಸಾಯಿ ಸುದರ್ಶನ್ ಅವರ 118 ರನ್ ಜತೆಯಾಟ ದಕ್ಷಿಣ ವಲಯದ ಗೆಲುವನ್ನು ಸುಲಭಗೊಳಿಸಿತು. ಅಗ ರ್ವಾಲ್ ಮತ್ತೂಂದು ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 84 ರನ್ ಬಾರಿಸಿದರು (88 ಎಸೆತ, 6 ಬೌಂಡರಿ, 1 ಸಿಕ್ಸರ್). ಸಾಯಿ ಸುದರ್ಶನ್ ಸೊಗಸಾದ ಆಟದ ಮೂಲಕ 53 ರನ್ ಹೊಡೆದರು (67 ಎಸೆತ, 4 ಬೌಂಡರಿ, 1 ಸಿಕ್ಸರ್). ಎನ್. ಜಗದೀಶನ್ 32, ರೋಹಿತ್ ರಾಯುಡು 24, ರೋಹನ್ ಕುನ್ನುಮ್ಮಾಳ್ 18 ರನ್ ಕೊಡುಗೆ ಸಲ್ಲಿಸಿದರು.
ಎಂದಿನಂತೆ ಕರ್ನಾಟಕದ ತ್ರಿವಳಿ ವೇಗಿಗಳಿಂದ ಮಿಂಚಿನ ದಾಳಿ ನಡೆಯಿತು. ವಿ. ಕೌಶಿಕ್ 3, ವಿದ್ವತ್ ಕಾವೇರಪ್ಪ 2 ಹಾಗೂ ವಿಜಯ್‌ಕುಮಾರ್ ವೈಶಾಖ್ ಒಂದು ವಿಕೆಟ್ ಕೆಡವಿದರು. ಸಾಯಿ ಕಿಶೋರ್ ಕೂಡ 3 ವಿಕೆಟ್ ಕಿತ್ತು ಮಿಂಚಿದರು.
ಪೂರ್ವ ವಲಯದ ಬ್ಯಾಟಿಂಗ್ ಸರದಿಯಲ್ಲಿ ಗಮನ ಸೆಳೆದವರೆಂದರೆ ವಿರಾಟ್ ಸಿಂಗ್ (49), ಶುಭಾÅಂಶು ಸೇನಾಪತಿ (44), ಆಕಾಶ್ ದೀಪ್ (44) ಮತ್ತು ಮುಖ್ತರ್ ಹುಸೇನ್ (33). ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದ ರಿಯಾನ್ ಪರಾಗ್ ಇಲ್ಲಿ ಗಳಿಸಿದ್ದು ಕೇವಲ 13 ರನ್.
143ಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ಪೂರ್ವ ವಲಯವನ್ನು ಇನ್ನೂರರಾಚೆ ದಾಟಿಸುವಲ್ಲಿ ಆಕಾಶ್ ದೀಪ್-ಮುಖ್ತರ್ ಹುಸೇನ್ ಪಾತ್ರ ಪ್ರಮುಖವಾಗಿತ್ತು. ಇವರು 9ನೇ ವಿಕೆಟಿಗೆ 74 ರನ್ ಒಟ್ಟುಗೂಡಿಸಿದರು.
ದಕ್ಷಿಣ ವಲಯ ತನ್ನ ಕೊನೆಯ ಪಂದ್ಯವನ್ನು ಮಂಗಳವಾರ ಮಧ್ಯ ವಲಯ ವಿರುದ್ಧ ಆಡಲಿದೆ.