Advertisement

ದೇವಧರ್‌ ಟ್ರೋಫಿ: ರಿಯಾನ್‌ ಪರಾಗ್‌ ಅವರ ಮತ್ತೂಂದು ಸ್ಫೋಟಕ ಶತಕ

12:47 AM Aug 02, 2023 | Team Udayavani |

ಪುದುಚೇರಿ: ರಿಯಾನ್‌ ಪರಾಗ್‌ ಅವರ ಮತ್ತೂಂದು ಸ್ಫೋಟಕ ಶತಕ ಸಾಹಸದಿಂದ ಪಶ್ಚಿಮ ವಲ ಯವನ್ನು 157 ರನ್ನುಗಳ ಭಾರೀ ಅಂತ
ರದಿಂದ ಕೆಡವಿದ ಪೂರ್ವ ವಲಯ “ದೇವಧರ್‌ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದೆ. ಗುರುವಾರ ನಡೆಯುವ ಪ್ರಶಸ್ತಿ ಸಮರದಲ್ಲಿ ದಕ್ಷಿಣ ವಲಯವನ್ನು ಎದುರಿಸಲಿದೆ.

Advertisement

ಸೆಮಿಫೈನಲ್‌ ಮಹತ್ವ ಪಡೆದಿದ್ದ ಮಂಗಳವಾರದ ಈ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪೂರ್ವ ವಲಯ 7 ವಿಕೆಟಿಗೆ 317 ರನ್‌ ಬಾರಿಸಿ ಸವಾಲೊಡ್ಡಿತು. ಪಶ್ಚಿಮ ವಲಯ 34 ಓವರ್‌ಗಳಲ್ಲಿ 162ಕ್ಕೆ ಕುಸಿಯಿತು.

ಮಣಿಶಂಕರ್‌ ಮುರಸಿಂಗ್‌ ಮತ್ತು ಆಲ್‌ರೌಂಡರ್‌ ಉತ್ಕರ್ಷ್‌ ಸಿಂಗ್‌ ಘಾತಕ ಬೌಲಿಂಗ್‌ ದಾಳಿ ಮೂಲಕ ಪಶ್ಚಿಮ ವಲಯವನ್ನು ಪರದಾಡುವಂತೆ ಮಾಡಿದರು. ಮಣಿ ಶಂಕರ್‌ 5 ವಿಕೆಟ್‌ ಹಾಗೂ ಉತ್ಕರ್ಷ್‌ 3 ವಿಕೆಟ್‌ ಕಿತ್ತರು. ನಾಯಕ ಹಾಗೂ ಆರಂಭಕಾರ ಹಾರ್ವಿಕ್‌ ದೇಸಾಯಿ ಏಕಾಂಗಿಯಾಗಿ ಹೋರಾಡಿ 92 ರನ್‌ ಬಾರಿಸಿದ್ದೊಂದೇ ಪಶ್ಚಿಮ ವಲಯದ ಗಮ ನಾರ್ಹ ಸಾಧನೆ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ದೇಸಾಯಿ ಮಾತ್ರ ಕ್ರೀಸಿಗೆ ಅಂಟಿ ಕೊಂಡು ನಿಂತರು. ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು.

ಪರಾಗ್‌ ಮತ್ತೂಂದು ಶತಕ
ಪೂರ್ವ ವಲಯದ ಮಧ್ಯಮ ಕ್ರಮಾಂಕದ ಡ್ಯಾಶಿಂಗ್‌ ಬ್ಯಾಟರ್‌ ರಿಯಾನ್‌ ಪರಾಗ್‌ 68 ಎಸೆತಗಳಿಂದ 102 ರನ್‌ ಬಾರಿಸಿ ತಂಡದ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದರು. ಈ ಬ್ಯಾಟಿಂಗ್‌ ಅಬ್ಬರದ ವೇಳೆ 6 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿದರು. ಉತ್ತರ ವಲಯ ವಿರುದ್ಧವೂ ಸಿಡಿದು ನಿಂತಿದ್ದ ಪರಾಗ್‌ 131 ರನ್‌ ಬಾರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಆರಂಭಕಾರ ಉತ್ಕರ್ಷ್‌ ಸಿಂಗ್‌ 50 ರನ್‌ ಕೊಡುಗೆ ಸಲ್ಲಿಸಿದರು. ಅಭಿಮನ್ಯು ಈಶ್ವರನ್‌ 38, ವಿರಾಟ್‌ ಸಿಂಗ್‌ 42, ಕುಮಾರ ಕುಶಾಗ್ರ 53 ರನ್‌ ಬಾರಿಸಿದರು. ಪರಾಗ್‌-ಕುಶಾಗ್ರ ಜೋಡಿ 17.4 ಓವರ್‌ಗಳಿಂದ 6ನೇ ವಿಕೆಟಿಗೆ ಭರ್ತಿ 150 ರನ್‌ ಪೇರಿಸಿ ಪಶ್ಚಿಮ ವಲಯದ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ತಂಡದ ಮೊತ್ತವನ್ನು 157ರಿಂದ 307ಕ್ಕೆ ತಂದು ನಿಲ್ಲಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಪೂರ್ವ ವಲಯ- 7 ವಿಕೆಟಿಗೆ 319 (ರಿಯಾನ್‌ ಪರಾಗ್‌ ಔಟಾಗದೆ 102, ಕುಮಾರ ಕುಶಾಗ್ರ 53, ಉತ್ಕರ್ಷ್‌ ಸಿಂಗ್‌ 50, ವಿರಾಟ್‌ ಸಿಂಗ್‌ 42, ಶಮ್ಸ್‌ ಮುಲಾನಿ 45ಕ್ಕೆ 3). ಪ. ವಲಯ-34 ಓವರ್‌ಗಳಲ್ಲಿ 162 (ಹಾರ್ವಿಕ್‌ ದೇಸಾಯಿ 92, ಅತೀತ್‌ ಶೇs… 18, ಮಣಿಶಂಕರ್‌ ಮುರಸಿಂಗ್‌ 28ಕ್ಕೆ 5, ಉತ್ಕರ್ಷ್‌ ಸಿಂಗ್‌ 16ಕ್ಕೆ 3).

ಐದೂ ಪಂದ್ಯ ಗೆದ್ದ ದಕ್ಷಿಣ ವಲಯ
ಪುದುಚೇರಿ: ನೆಚ್ಚಿನ ತಂಡವಾಗಿರುವ ದಕ್ಷಿಣ ವಲಯ ಲೀಗ್‌ ಹಂತದ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮಂಗಳವಾರದ ಅಂತಿಮ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಬಳಗ 7 ವಿಕೆಟ್‌ಗಳಿಂದ ಮಧ್ಯ ವಲಯವನ್ನು ಪರಾಭವಗೊಳಿಸಿತು. ಸಾಯಿ ಸುದರ್ಶನ್‌ ಅವರ ಆಕರ್ಷಕ ಶತಕ ದಕ್ಷಿಣ ವಲಯದ ಯಶಸ್ವಿ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮಧ್ಯ ವಲಯ 9 ವಿಕೆಟಿಗೆ 261 ರನ್‌ ಪೇರಿಸಿದರೆ, ದಕ್ಷಿಣ ವಲಯ 48.2 ಓವರ್‌ಗಳಲ್ಲಿ 3 ವಿಕೆಟಿಗೆ 262 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.
ಮಾಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ ಆರಂಭಿಸುವ ಮೊದಲೇ ಗಾಯಾಳಾಗಿ ನಿರ್ಗಮಿಸಿದ ಬಳಿಕ ಸಾಯಿ ಸುದರ್ಶನ್‌ ಬ್ಯಾಟಿಂಗ್‌ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು. 136 ಎಸೆತಗಳಿಂದ ಅಜೇಯ 132 ರನ್‌ ಬಾರಿಸಿ ತಂಡವನ್ನು ದಡ ಸೇರಿಸಿದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ಆರಂಭಕಾರ ರೋಹನ್‌ ಕುನ್ನುಮ್ಮಾಳ್‌ 24, ಎನ್‌. ಜಗದೀಶನ್‌ 19, ರೋಹಿತ್‌ ರಾಯುಡು 37 ಮತ್ತು ವಾಷಿಂಗ್ಟನ್‌ ಸುಂದರ್‌ ಔಟಾಗದೆ 43 ರನ್‌ ಹೊಡೆದರು.
ಮಧ್ಯ ವಲಯ ಸರದಿಯಲ್ಲಿ ಮಿಂಚಿದವರು ಯಶ್‌ ದುಬೆ. ಅವರು ಸರ್ವಾಧಿಕ 77 ರನ್‌ ಹೊಡೆದರು. 38 ರನ್‌ ಗಳಿಸಿದ ಶಿವಂ ಮಾವಿ ಅವರದು ಅನಂತರದ ಹೆಚ್ಚಿನ ಗಳಿಕೆ. ಮೋಹಿತ್‌ ರೇಡ್ಕರ್‌ 51ಕ್ಕೆ 3 ವಿಕೆಟ್‌, ಅರ್ಜುನ್‌ ತೆಂಡುಲ್ಕರ್‌ ಮತ್ತು ವಿ. ಕೌಶಿಕ್‌ ತಲಾ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next