ಉಳ್ಳಾಲ: ಬಾಯಿ ಆರೋಗ್ಯ ನೀತಿಯಡಿ ದಂತ ಭಾಗ್ಯ ಯೋಜನೆಯಡಿ ದೇಶದಲ್ಲಿ ಮೊದಲ ಬಾರಿಗೆ “ದಂತ ಭಾಗ್ಯ ಆರೋಗ್ಯ ಯೋಜನೆ’ ಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಕರ್ನಾಟಕದ್ದಾಗಿದ್ದು, ಈಗಾಗಲೇ ಸುಮಾರು 10,000 ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.
ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ದೇರಳಕಟ್ಟೆ ಯೇನಪೊಯ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ದಂತ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ನಡೆದ ಆನ್ ಆಪ್‌ಡೆಟ್ ಆನ್ ಓರಲ್ ಹೆಲ್ತ್ ಪಾಲಿಸಿ (ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿಯಾಮಾವಳಿಯ ನವೀಕರಣ) ಎಂಬ ವಿಷಯದ ಕುರಿತು ಜರಗಿದ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
60ಕ್ಕಿಂತ ಹೆಚ್ಚಿನ ಹರೆಯದ ವೃದ್ಧರು ಉತ್ತಮವಾಗಿ ನಗುವಂತಾಗಬೇಕು ಹಾಗೂ ಬಾಯಿಗೆ ಸಂಬಂಧಿಸಿದ ಯಾವುದೇ ರೋಗಗಳು ಬಾರದಂತೆ ನೋಡಿಕೊಳ್ಳುವ ಉದ್ದೇಶ ದಿಂದ ಬಾಯಿ ಆರೋಗ್ಯ ನೀತಿಯಂತೆ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಕೇಂದ್ರ ಸರಕಾರವೂ ಅದನ್ನೇ ಅನುಸರಿಸಿ ಕೊಂಡು ದೇಶಾದ್ಯಂತ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಕ್ಲಿನಿಕ್ ನಡೆ ಸಲು ಇಚ್ಛಿಸುವ ವೈದ್ಯರಿಗೆ ರಾಜ್ಯ ಸರಕಾರದಿಂದ ಸಾಲ ನೀಡಲಾಗು ವುದು ಎಂದರು.
ಯೇನಪೊಯ ವಿ.ವಿ. ಕಾಲೇಜಿನ ಕುಲಪತಿ ವೈ. ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಕುಲಪತಿ ಡಾ| ಎಂ. ವಿಜಯ್ ಕುಮಾರ್, ಕುಲಸಚಿವ ಡಾ| ಜಿ. ಶ್ರೀ ಕುಮಾರ್ ಮೆನನ್, ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿ¿åಮಾವಳಿಯ ಅಧ್ಯಕ್ಷ ಡಾ| ಗಣೇಶ್ ಶೆಣೈ ಪಂಚ್‌ಮಾಲ್, ಉಪನಿರ್ದೇಶಕ ಡಾ| ಎ.ಕೆ. ಪ್ರಮೀಳಾ, ರಾಜ್ಯ ಆರೋಗ್ಯ ನೀತಿಯ ಸಲಹೆಗಾರ ಡಾ| ವಿ.ನವೀನ್ ಶಂಕರ್, ಯೇನಪೊಯ ದಂತ ಕಾಲೇಜಿನ ಉಪ ಪ್ರಾಂಶುಪಾಲ ಡಾ| ಶ್ಯಾಮ್ ಭಟ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ| ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ| ರೇಖಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರವೀಣ್ ಜೋಡಲ್ಲಿ ಅವರು ವಂದಿಸಿದರು.