Advertisement

ಜನನಿಬಿಡ ಪ್ರದೇಶ; ದೇವನಗರಿ ಜನರಿಗೆ ಎಸ್ಕಲೇಟರ್‌ ಸೌಲಭ್ಯ

05:52 PM Dec 14, 2022 | Team Udayavani |

ದಾವಣಗೆರೆ: ಮಹಾನಗರದ ಅತಿ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರು ಸುರಕ್ಷಿತ ಮತ್ತು ಸುಲಭವಾಗಿ ರಸ್ತೆ ದಾಟಲು ಅನುಕೂಲ ಆಗುವಂತೆ ಮಹಾನಗರ ಪಾಲಿಕೆ ಖಾಸಗಿ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌ ಬಳಿ ಅತ್ಯಾಧುನಿಕ ಸೌಲಭ್ಯದ ಎಸ್ಕಲೇಟರ್‌ ಅಳವಡಿಕೆಗೆ ಮುಂದಾಗಿದೆ.

Advertisement

ಹೌದು, ಸ್ಮಾರ್ಟ್‌ಸಿಟಿ ಆಗುತ್ತಿರುವ ದಾವಣಗೆರೆ ನಾಗರಿಕರಿಗೆ ಸ್ಮಾರ್ಟ್‌ ಆಗಿಯೇ ಮೂಲ ಸೌಲಭ್ಯ ಒದಗಿಸಬೇಕು ಎಂಬ ಪರಿಕಲ್ಪನೆಯೊಂದಿಗೆ ಮಹಾನಗರ ಪಾಲಿಕೆ ಎಸ್ಕಲೇಟರ್‌ ಸೇವೆ ಪ್ರಾರಂಭಿಸಲಿದೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ.

ಅದೇ ರೀತಿ ಪ್ರತಿ ನಿತ್ಯ ದಾವಣಗೆರೆಗೆ ವಿವಿಧ ಕೆಲಸ ಕಾರ್ಯಗಳಿಗೆ ಬಂದು ಹೋಗುವವರೂ ಸೇರಿದಂತೆ ಜನರ ಓಡಾಟವೂ ಹೆಚ್ಚಿರುತ್ತದೆ. ಕೆಲವೆಡೆ ಪಾದಚಾರಿಗಳಿಗೆ ರಸ್ತೆ ದಾಟುವುದು ಸುಲಭದ ಮಾತಲ್ಲ. ಪಾದಚಾರಿಗಳು ಅನುಭವಿಸುವ ತೊಂದರೆ ನಿವಾರಿಸುವ ಉದ್ದೇಶದಿಂದ ಮಹಾನಗರಪಾಲಿಕೆಯ 2022- 23 ನೇ ಸಾಲಿನ ಆಯ-ವ್ಯಯದಲ್ಲಿ ಸ್ಕೈವಾಕ್‌ ನಿರ್ಮಾಣದ ಘೋಷಣೆ ಮಾಡಿತ್ತು. ಆದರೆ ಸ್ಕೈವಾಕ್‌ ಬದಲಿಗೆ ಎಸ್ಕಲೇಟರ್‌ ಅಳವಡಿಸಿದರೆ ಉತ್ತಮ
ಎಂಬುದಾಗಿ ಸಾರ್ವಜನಿಕ ವಲಯದಿಂದ ಕೇಳಿ ಬಂದ ಅಭಿಪ್ರಾಯದಂತೆ ನಗರ ಪಾಲಿಕೆ ಎಸ್ಕಲೇಟರ್‌ ಆಳವಡಿಕೆಗೆ ಮುಂದಾಗಿದೆ.

ಎಲ್ಲೆಲ್ಲಿ ಎಸ್ಕಲೇಟರ್‌?: ಮೇಯರ್‌ ಜಯಮ್ಮ ಗೋಪಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರು ರಸ್ತೆ ದಾಟುವುದಕ್ಕೇ ಹರಸಾಹಸ ಪಡುವಂತಹ ವಾತಾವರಣವಿರುವ ಕಡೆ ಸ್ಕೈವಾಕ್‌ ನಿರ್ಮಾಣದ ಅಗತ್ಯತೆ ಕುರಿತು ಚರ್ಚೆ ನಡೆದಿತ್ತು. ಮಹಾನಗರಪಾಲಿಕೆ ಬಜೆಟ್‌ನಲ್ಲಿ ಪ್ರತಿ ಸ್ಕೈವಾಕ್‌ಗೆ 50 ಲಕ್ಷದಂತೆ ಒಟ್ಟು ಒಂದು ಕೋಟಿ ರೂ. ಅನುದಾನ ಮೀಸಲಿಡುವ ಪ್ರಸ್ತಾಪನೆ ಮಾಡಲಾಗಿತ್ತು.

ಆದರೆ ಸ್ಕೈವಾಕ್‌ಗಿಂತ ಎಸ್ಕಲೇಟರ್‌ ಉತ್ತಮ ಎಂಬ ಜನರಿಂದ ಒತ್ತಡ, ಅಭಿಪ್ರಾಯ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಳೆ ಬಸ್‌ ನಿಲ್ದಾಣ ಮತ್ತು ರೈಲ್ವೆ ಸ್ಟೇಷನ್‌ ಸಮೀಪ ಎಸ್ಕಲೇಟರ್‌ ಕಾರ್ಯ ನಿರ್ವಹಿಸುವ ಕಾಲ ಸನ್ನಿಹಿತವಾಗಿದೆ. ಮಹಾನಗರ ಪಾಲಿಕೆ ಮುಂದೆ ನಗರ ಸಾರಿಗೆ ಬಸ್‌ಗಳು ನಿಲುಗಡೆ ಮಾಡುತ್ತಿವೆ.

Advertisement

ಜೊತೆಗೆ ಎದುರಿಗೇ ರೈಲ್ವೆ ನಿಲ್ದಾಣ ಇರುವುದರಿಂದ ಸಹಜವಾಗಿಯೇ ಪ್ರತಿ ದಿನ ಜನ, ವಾಹನಗಳ ಸಂಚಾರದ ದಟ್ಟಣೆ ಇರುತ್ತದೆ. ಮುಖ್ಯವಾಗಿ ಹಳೆ ಮತ್ತು ಹೊಸ ದಾವಣಗೆರೆಗೆ ಪ್ರಮುಖ ಸಂಪರ್ಕ ಕೊಂಡಿಯೂ ಆಗಿರುವುದರಿಂದ ಇಲ್ಲಿ ಎಸ್ಕಲೇಟರ್‌ ಅತಿ ಅಗತ್ಯ ವಾಗಿದೆ. ಸಂಚಾರಿ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಆಗಲಿದೆ. ಹಳೆ ದಾವಣಗೆರೆಯನ್ನೂ ಸಂಪರ್ಕಿಸುವ ಚಿಂತನೆಯೂ ನಡೆದಿದೆ.

ದಾವಣಗೆರೆಯ ಪ್ರಮುಖ ವೃತ್ತ ಮಹಾತ್ಮ ಗಾಂಧಿ ವೃತ್ತಕ್ಕೆ ಹೊಂದಿಕೊಂಡಂತೆ ಪುನರ್‌ ನಿರ್ಮಾಣ ಆಗುತ್ತಿರುವ ಖಾಸಗಿ ಬಸ್‌ ನಿಲ್ದಾಣ ಬಳಿಯೂ ಎಸ್ಕಲೇಟರ್‌ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿದೆ. ಖಾಸಗಿ ಬಸ್‌ ನಿಲ್ದಾಣ ಹತ್ತಿರ ನಿರ್ಮಿಸಿದರೆ ಸಾಕಷ್ಟು ಅನುಕೂಲ ಆಗಲಿದೆ ಎಂಬುದು ಜನಾಭಿಪ್ರಾಯವಾಗಿದೆ. ಒಟ್ಟಾರೆ ಕೆಲವೇ ದಿನಗಳಲ್ಲಿ ದಾವಣಗೆರೆ ರಸ್ತೆಗಳ ಪಕ್ಕದಲ್ಲಿ ಎಸ್ಕಲೇಟರ್‌ ಗಳು ಕಾಣಸಿಗಲಿವೆ.

ಪಾಲಿಕೆಯ 2022-23ನೇ ಸಾಲಿನಲ್ಲಿ ಮಹಾನಗರ ಪಾಲಿಕೆ ಮತ್ತು ರೇಣುಕಾ ಮಂದಿರದ ಬಳಿ ಸ್ಕೈವಾಕ್‌ ನಿರ್ಮಾಣದ ಪ್ರಸ್ತಾವನೆ ಮಾಡಲಾಗಿತ್ತು. ತಲಾ 50 ಲಕ್ಷದಂತೆ ಒಂದು ಕೋಟಿ ಅನುದಾನ ಮೀಸಲಿಡುವ ತೀರ್ಮಾನ ಸಹ ಕೈಗೊಳ್ಳಲಾಗಿತ್ತು. ಆದರೆ ಸ್ಕೈವಾಕ್‌ಗಳಗಿಂತಲೂ ಎಸ್ಕಲೇಟರ್‌ ಅಳವಡಿಸುವುದು ಉತ್ತಮ ಎಂಬ ಒತ್ತಾಸೆ ಕೇಳಿ ಬಂದಿದೆ. ಎಲ್ಲ ರೀತಿಯ ಅಭಿಪ್ರಾಯ ಪಡೆದು ಖಾಸಗಿ ಬಸ್‌ ನಿಲ್ದಾಣ, ಮಹಾನಗರ ಪಾಲಿಕೆ ಬಳಿ ಎಸ್ಕಲೇಟರ್‌ ಅಳವಡಿಸುವ ಚಿಂತನೆ ನಡೆದಿದೆ.
ಎಸ್‌.ಟಿ. ವೀರೇಶ್‌, ಮಾಜಿ ಮೇಯರ್‌

ಎಸ್ಕಲೇಟರ್‌ ಅಳವಡಿಕೆ ಉತ್ತಮ ಯೋಜನೆ. ಆದರೆ, ಅತಿ ಹೆಚ್ಚಿನ ಜನರ ಓಡಾಟದ ಪ್ರದೇಶದಲ್ಲಿ ಬಹಳಷ್ಟು ಅತ್ಯಾಧುನಿಕ ವ್ಯವಸ್ಥೆಯ ಎಸ್ಕಲೇಟರ್‌ ಅಳವಡಿಸಬೇಕಾಗುತ್ತದೆ. ಸಾಕಷ್ಟು ಜನರು ಎಸ್ಕಲೇಟರ್‌ ಬಳಕೆಗೆ ಹಿಂದೇಟು ಹಾಕುವುದನ್ನು ಕಾಣಬಹುದು. ರಸ್ತೆಗಳಲ್ಲಿ ಎಸ್ಕಲೇಟರ್‌ ಅಳವಡಿಕೆ ವೆಚ್ಚ ಮತ್ತು ತ್ರಾಸದಾಯಕ. ಹಾಗಾಗಿ ಜನರು ಸುಲಭವಾಗಿ ರಸ್ತೆಗಳ ದಾಟುವಂತೆ ರ್‍ಯಾಂಪ್‌ಗ್ಳ ಅಳವಡಿಕೆ ಸೂಕ್ತ ಎಂದೆನಿಸುತ್ತದೆ. ಎಸ್ಕಲೇಟರ್‌ ಅಳವಡಿಕೆ
ಮಾಡಿದರೂ ಆಯಾ ಜಾಗದಲ್ಲಿ ಡಿವೈಡರ್‌ ಮಾಡುವ ಜೊತೆಗೆ ಎಲ್ಲರೂ ಕಡ್ಡಾಯವಾಗಿ ಎಸ್ಕಲೇಟರ್‌ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು.
ಎಂ.ಜಿ. ಶ್ರೀಕಾಂತ್‌
ಸಾಮಾಜಿಕ ಕಾರ್ಯಕರ್ತ

*ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next