Advertisement
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಡೆನ್ಮಾರ್ಕ್ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ಈ ಹಿನ್ನಲೆಯಲ್ಲಿ ಅತ್ಯಗತ್ಯ ಮತ್ತು ಅನಿವಾರ್ಯ ಕೆಲಸವಿದ್ದರೆ ಮಾತ್ರ ಮುನ್ನಚ್ಚೆರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸರಕಾರ ಸೂಚಿಸಿದ ದೇಶಗಳಿಗೆ ಪ್ರಯಾಣ ಕೈಗೊಳ್ಳಬಹುದು ಎಂದು ಸರಕಾರ ತಿಳಿಸಿದೆ. ಆದರೆ ಆ ದೇಶಗಳಿಂದ ಡೆನ್ಮಾರ್ಕ್‌ಗೆ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದ್ದು, ಡ್ಯಾನಿಶ್ ನಿವಾಸಿಗಳು ಮಾತ್ರ ನಿರ್ದಿಷ್ಟ ದೇಶಗಳಿಗೆ ತೆರಳಿ ಹಿಂದಿರುಗಿ ಬರಬಹುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕೆಲ ರಾಷ್ಟ್ರಗಳಿಗೆ ತನ್ನ ನಿವಾಸಿಗಳಿಗೆ ಪ್ರಯಾಣ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ಡೆನ್ಮಾರ್ಕ್ ಇಯು ಐರೋಪ್ಯ ಒಕ್ಕೂಟದ ದೇಶಗಳಿಗೆ ಮಾತ್ರ ತನ್ನ ರಾಷ್ಟ್ರದ ಗಡಿ ಬಾಗಿಲನ್ನು ತೆರೆದಿದೆ. ಯಾವುದೇ ಕ್ವಾರಂಟೈನ್ ನಿಬಂಧನೆ ಮತ್ತು ಸಂಚಾರ ನಿಯಮಗಳಿಲ್ಲದೇ ಮುಕ್ತವಾಗಿ ಡೆನ್ಮಾರ್ಕ್ ದೇಶಿಗರು ಅಲ್ಲಿಗೆ ಭೇಟಿ ನೀಡಬಹುದಾಗಿದ್ದು, ಅಲ್ಲಿಯವರೂ ಡೆನ್ಮಾರ್ಕ್‌ಗೆ ಯಾವುದೇ ಭೀತಿ ಇಲ್ಲದೇ ಬರಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ನಾವು ಸುರಕ್ಷಿತವಾಗಿದ್ದೇವೆ ಎಂಬ ನಂಬಿಕೆ
ಸರಕಾರ ಘೋಷಿಸಿರುವ ಈ ನಿರ್ಧಾರದ ಕುರಿತು ಡೆನ್ಮಾರ್ಕ್ ವಿದೇಶಾಂಗ ಸಚಿವ ಜೆಪ್ಪೆ ಕೊಫೊಡ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದು, ಡೆನ್ಮಾರ್ಕ್ ಮತ್ತು ಯುರೋಪ್ ಸುರಕ್ಷಿತ ಘಟ್ಟದಲ್ಲಿದ್ದೇವೆ ಎಂಬ ನಂಬಿಕೆಯೇ ಫಲಿತಾಂಶವೇ ಈ ಸಡಿಲಿಕೆ. ಆದರೆ ಸಂಪೂರ್ಣವಾಗಿ ಸೋಂಕು ನಿವಾರಣೆಯಾಗದ ಕಾರಣ ಮುಂದಿನ ದಿನಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ತಿಳಿಸಿದ್ದು, ವಿಶ್ವದ ಕೆಲ ದೇಶಗಳಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಲೇ ಇದೆ. ಹಾಗಾಗಿ ಪ್ರಯಾಣಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ.