Advertisement

ಎಸ್‌ಪಿ ನಾಯಕ ನರೇಶ್‌ ಬಿಜೆಪಿಗೆ

07:30 AM Mar 13, 2018 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ಆಘಾತದ ನಡುವೆಯೇ ಸಮಾಜವಾದಿ ಪಕ್ಷಕ್ಕೆ ಮತ್ತೂಂದು ಹಿನ್ನಡೆಯಾಗಿದೆ. ರಾಜ್ಯಸಭೆಗೆ ಟಿಕೆಟ್‌ ಪಡೆಯಲು ವಿಫ‌ಲರಾಗಿರುವ ಎಸ್‌ಪಿ ನಾಯಕ ನರೇಶ್‌ ಅಗರ್ವಾಲ್‌ ಬಿಜೆಪಿ ಸೇರಿದ್ದಾರೆ. ಜತೆಗೆ, ಹರ್ದೋಯಿ ಕ್ಷೇತ್ರದ ಶಾಸಕರಾಗಿರುವ ಅವರ ಪುತ್ರ ನಿತಿನ್‌ ಅಗರ್ವಾಲ್‌ ಕೂಡ ಬಿಜೆಪಿ ಸೇರಿದ್ದಾರೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರ ಹಿಂದೆ ಬಿಎಸ್ಪಿ ಅಭ್ಯರ್ಥಿಯ ರಾಜ್ಯಸಭೆ ಪ್ರವೇಶ ತಡೆಯುವ ಲೆಕ್ಕಾಚಾರ ಇದೆೆ.

Advertisement

ಗುಜರಾತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಹ್ಮದ್‌ ಪಟೇಲ್‌ರನ್ನು ರಾಜ್ಯಸಭೆ ಪ್ರವೇಶಿಸದಂತೆ ತಡೆಯಲು ನಡೆಸಿದ ಯತ್ನದ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲೂ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಇಲ್ಲಿ ಒಟ್ಟು 10 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. 1 ಕ್ಷೇತ್ರ ಎಸ್ಪಿಗೆ ಕಟ್ಟಿಟ್ಟ ಬುತ್ತಿ. ಮತ್ತೂಂದು ಕ್ಷೇತ್ರಕ್ಕಾಗಿ ಪಕ್ಷಗಳ ನಡುವೆ ಭಾರೀ ಪೈಪೋಟಿ ಆರಂಭವಾಗಿದೆ. ಪ್ರತಿ ಅಭ್ಯರ್ಥಿ ಗೆಲ್ಲಲು 37 ಮತಗಳ ಅವಶ್ಯಕತೆಯಿದೆ. ಬಿಎಸ್‌ಪಿ ಅಭ್ಯರ್ಥಿ ಭೀಮರಾವ್‌ ಅಂಬೇಡ್ಕರ್‌ ಅವರು ತಮ್ಮ ಪಕ್ಷದ 19, ಎಸ್ಪಿಯ 10 ಹಾಗೂ ಕಾಂಗ್ರೆಸ್‌ನ 7 ಮತಗಳ ಮೂಲಕ ರಾಜ್ಯಸಭೆ ಪ್ರವೇಶಿಸುವುದರಲ್ಲಿದ್ದರು. ಆದರೆ, ಈಗ ನರೇಶ್‌ ಹಾಗೂ ಪುತ್ರನನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಾರಣ, ಬಿಎಸ್ಪಿ ಅಭ್ಯರ್ಥಿಯ ಗೆಲುವು ಕಷ್ಟವಾಗಿದೆ. ಬಿಜೆಪಿಯ 9ನೇ ಅಭ್ಯರ್ಥಿ ಜಯ ಸಲೀಸಾಗಲಿದೆ.

ವಿವಾದಿತ ಹೇಳಿಕೆ: ಬಿಜೆಪಿಗೆ ಸೇರ್ಪಡೆ ನಂತರ ಮಾತನಾಡಿದ ನರೇಶ್‌, ಸಮಾಜವಾದಿ ಪಕ್ಷ ರಾಜ್ಯಸಭೆಗೆ ನನಗೆ ಟಿಕೆಟ್‌ ಕೊಡಲಿಲ್ಲ. ಆದರೆ, ಸಿನಿಮಾಗಳಲ್ಲಿ ಹಾಡಿ, ನರ್ತಿಸುವವರಿಗೆ (ಜಯಾಬಚ್ಚನ್‌) ಟಿಕೆಟ್‌ ನೀಡಿದೆ ಎಂದು ಕಿಡಿಕಾರಿದರು. ಆದರೆ,  ಈ ಹೇಳಿಕೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದು, “ನರೇಶ್‌ರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ. ಆದರೆ, ಜಯಾ ಬಚ್ಚನ್‌ ಬಗ್ಗೆ ಅವರಾಡಿರುವ ಮಾತುಗಳು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ. ನರೇಶ್‌ ಸೇರ್ಪಡೆ ಕುರಿತು ಬಿಜೆಪಿಯಲ್ಲೇ ಅಸಮಾಧಾನ  ಎದ್ದಿದೆ.

ಅತ್ತ, ಕೇಂದ್ರ ಸಚಿವರಾದ ತಾವರ್‌ ಚಂದ್‌ ಗೆಹೊಟ್‌, ಧರ್ಮೇಂದ್ರ ಪ್ರಧಾನ್‌, ರವಿಶಂಕರ ಪ್ರಸಾದ್‌, ಸಚಿವ ಅರುಣ್‌ ಜೇಟ್ಲಿ ಮತ್ತಿತರರು ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next