ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜನಿಗೆ ಜಾಮೀನು ಮಂಜೂರು ಮಾಡಲು 70ನೇ ಸಿಸಿಎಚ್ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಈ ಸಂದರ್ಭದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ನ್ಯಾಯಾಲಯ ಹೊಟ್ಟೆ ಮಂಜ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಜತೆಗೆ ಪ್ರಕರಣ ಪ್ರತಿನಿತ್ಯ ಒಂದಿಲ್ಲೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪಿಗಳ ಬಂಧನವಾಗುತ್ತಲೇ ಇದೆ. ಅಲ್ಲದೆ, ನವೀನ್ ಕುಮಾರ್ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಹೊರ ಬಂದ ಬಳಿಕ ತನಿಖೆ ಸಹಕಾರ ನೀಡದೆ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಬಹುದು ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ನವೀನ್ ಕುಮಾರ್‌ಗೂ ಮೊದಲು ಗಿರೀಶ್ ಎಂಬಾತನನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವೇಳೆ ಪ್ರಕರಣ ಕುರಿತಂತೆ ಗಿರೀಶ್ ಕೆಲ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದ. ಬಳಿಕ ನ್ಯಾಯಾಲಯದ ಮುಂದೆಯೂ ಹಾಜರಾಗಿ ಐಪಿಸಿ 164 ಅಡಿಯಲ್ಲಿ ಸ್ವ ಇಚ್ಚಾ ಹೇಳಿಕೆ ದಾಖಲಿಸಿದ್ದ. ನಂತರ ಎಸ್‌ಐಟಿ ಈತನನ್ನು ಬಿಟ್ಟು ಕಳುಹಿಸಿತ್ತು.
ಹೊರ ಹೋದ ನಂತರ ನಿಲುವು ಬದಲಿಸಿದ್ದ ಗಿರೀಶ್, ನಾನು ಎಸ್‌ಐಟಿ ಬಲವಂತಕ್ಕೆ ಸ್ವ ಇಚ್ಚಾ ಹೇಳಿಕೆ ದಾಖಲಿಸಿದ್ದೆ ಎಂದು ಉಲ್ಟಾ ಹೊಡೆದಿದ್ದ. ಇದನ್ನು ಉದಾಹರಿಸಿದ ಕೋರ್ಟ್, ಹೊರಗಿನ ಒತ್ತಡ ಹೇಳಿಕೆ ಮತ್ತು ನಿಲುವು ಬದಲಿಸಲು ಕಾರಣ ಆಗಬಹುದು. ಈ ಕಾರಣದಿಂದ ಜಾಮೀನು ನಿರಾಕರಿಸಲಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.