Advertisement

ಅಕಾಲಿಕ ಮಳೆ: ನಗರದಲ್ಲಿ ಮತ್ತೆ ಆತಂಕ ಹುಟ್ಟಿಸಿದ ಡೆಂಗ್ಯೊ !

10:24 AM Mar 31, 2022 | Team Udayavani |

ಮಹಾನಗರ: ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ನಗರದಲ್ಲಿ ಸದ್ಯ ಡೆಂಗ್ಯೂ ಆತಂಕಕ್ಕೆ ಎಡೆಮಾಡಿದ್ದು, ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 32 ಡೆಂಗ್ಯೂ ಪ್ರಕರಣ ದಾಖಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲೇ 20 ಪ್ರಕರಣಗಳು ದೃಢಪಟ್ಟಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತದೆ. ಆದರೆ ಈ ವರ್ಷಾ ರಂಭದಲ್ಲೇ ಡೆಂಗ್ಯೂ ತೀವ್ರತೆ ಕಾಣಿಸಿಕೊಳ್ಳು ತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸದಿದ್ದರೆ ಮುಂಬರುವ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಬೆಳಗ್ಗಿನ ವೇಳೆ ಮೋಡ, ಮಧ್ಯಾಹ್ನ ಉರಿ ಬಿಸಿಲು ಇರುತ್ತಿದೆ. ಸಂಜೆ ಅಥವಾ ರಾತ್ರಿ ವೇಳೆ ಕೆಲವು ಕಡೆ ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ.

Advertisement

ಡೆಂಗ್ಯೂ ನಿಯಂತ್ರಣದ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ, ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮೂರು ಹಂತದಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ.

ಮೊದಲನೇ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಸರ್ವೇ ನಡೆಸಿದರೆ, ಎರಡನೇ ಹಂತದಲ್ಲಿ ಮಹಿಳಾ ಆರೋಗ್ಯ ಸುರಕ್ಷ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಾರೆ. ಮೂರನೇ ಹಂತದಲ್ಲಿ ಆರೋಗ್ಯ ನಿರೀಕ್ಷಕರಿಂದ ನಡೆಯುತ್ತಿದೆ.

ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ

ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿ ಯರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಸೊಳ್ಳೆ ಉತ್ಪತ್ತಿ ತಾಣಗಳ ಗುರುತಿಸುವಿಕೆ, ಸೊಳ್ಳೆ ಉತ್ಪತ್ತಿ ಗುರುತಿಸುವಿಕೆ, ಮನೆ ಮಂದಿಗೆ ಕೋವಿಡ್‌ ಸಹಿತ ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಸಮೀಕ್ಷೆ ವೇಳೆ ಸೊಳ್ಳೆ ಮರಿ ವಾಸ ಕಂಡುಬಂದರೆ ಹಿರಿಯ ಆರೋಗ್ಯ ಸಹಾಯಕರ ಗಮನಕ್ಕೆ ತರಲಾಗುತ್ತದೆ. ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜನಶಿಕ್ಷಣ ನೀಡಲಾಗುತ್ತಿದೆ. ಅದೇ ರೀತಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯು ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸಹಿತ ಇತರ ವಿಭಾಗದ ಅಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ.

Advertisement

ಡೆಂಗ್ಯೂ ಲಕ್ಷಣವೇನು?

ಡೆಂಗ್ಯೂ ಜ್ವರ ಉಂಟಾದ ತತ್‌ಕ್ಷಣ ಮಕ್ಕಳು ಅಥವಾ ದೊಡ್ಡವರಲ್ಲಿ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ದಿನ ಕಳೆದಂತೆ ನಾಲ್ಕರಿಂದ ಏಳು ದಿನಗಳ ಬಳಿಕ ಒಂದೊಂದು ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿಕರು ಕೂಡ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಿದೆ. ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿಸಿದವರು ತಣ್ಣೀರನ್ನು ಕುಡಿಯಲೇಬಾರದು. ಸ್ನಾನಕ್ಕೂ ಬಿಸಿನೀರನ್ನು ಉಪಯೋಗಿಸಬೇಕು. ತಲೆ ಮೇಲೆ ನೀರು ಹಾಕಿಕೊಂಡಾಗ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ ಎನ್ನುತ್ತಾರೆ ವೈದ್ಯರು.

ಕೋವಿಡ್‌ಗಿಂತಲೂ ಡೆಂಗ್ಯೂ ಅಪಾಯಕಾರಿ

ಕೋವಿಡ್‌ಗೆ ಲಸಿಕೆ ಇದ್ದು, ಡೆಂಗ್ಯೂಗೆ ಯಾವುದೇ ರೀತಿಯ ಲಸಿಕೆ ಇಲ್ಲ. ಕೋವಿಡ್‌ಗೆ ಹೋಲಿಸಿದರೆ ಡೆಂಗ್ಯೂವಿನಿಂದ ಮರಣ ಸಂಭವ ಸಾಧ್ಯತೆ ಸುಮಾರು ನಾಲ್ಕು ಪಟ್ಟು ಹೆಚ್ಚು. ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಡೆಂಗ್ಯೂ ತಡೆಯುವ ನಿಟ್ಟಿನಲ್ಲಿ ಲಾರ್ವ ಸರ್ವೇ ನಡೆಯುತ್ತಿದೆ. ಡೆಂಗ್ಯೂ ಹರಡುವ ಲಾರ್ವ ಉತ್ಪತ್ತಿಯಾಗುವುದೇ ನಿಂತಿರುವ ಶುದ್ಧ ನೀರಿನಲ್ಲಿ. ಮನೆ ಸುತ್ತಮುತ್ತ ನೀರು ನಿಲ್ಲಿಸದಂತೆ ನೋಡಿಕೊಳ್ಳಬೇಕು. ಜನ ಸ್ವಯಂ ಎಚ್ಚರಿಕೆ ವಹಿಸಿಕೊಂಡು ಇದನ್ನು ಪಾಲನೆ ಮಾಡಬೇಕು. ಹಾಗಿದ್ದರೆ ಮಾತ್ರ ರೋಗ ನಿಯಂತ್ರಣ ಸಾಧ್ಯ. –ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next