ಬೆಂಗಳೂರು: ಡೆಂಘೀ ಜ್ವರದಿಂದ (ಡೆಂಘೀ ಶಾಕ್ ಸಿಂಡ್ರೋಮ್) ಬಹು ಅಂಗ ವೈಫಲ್ಯಕ್ಕೆ ಒಳಗಾಗಿದ್ದ 13 ವರ್ಷದ ಬಾಲಕನಿಗೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಹಾಸನ ಜಿಲ್ಲಾ ಮೂಲದ ಮಾ. ಯೋಗೇಶ್ವರ್ ಮತ್ತು ಆತನ ತಂದೆ ಬಸವರಾಜ್ ಇಬ್ಬರೂ ಡೆಂಗ್ಯೂನಿಂದ ಬಳಲುತ್ತಿದ್ದರು. ಮಗನ ಸ್ಥಿತಿ ಗಂಭೀರವಾಗಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆಸ್ಪತ್ರೆಯ ಮಕ್ಕಳ ರೋಗಶಾಸ್ತ್ರ ಸಲಹಾತಜ್ಞ ಡಾ. ಯೋಗೇಶ್ ಗುಪ್ತಾ ಅವರ ನೇತೃತ್ವದ ತಂಡ ಡೆಂಗ್ಯೂ ಶಾಕ್ ಸಿಂಡ್ರೋಮ್ ಹಾಗೂ ಬಹು ಅಂಗ ಕಾರ್ಯಲೋಪವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ಈ ಬಗ್ಗೆ ಮಕ್ಕಳ ರೋಗಶಾಸ್ತ್ರ ತಜ್ಞ ಡಾ. ಯೋಗೇಶ್ ಗುಪ್ತಾ ಮಾತನಾಡಿ, ಬಾಲಕ ಯೋಗೇಶ್ವರ್ ಬದುಕುಳಿಯುವ ಸಾಧ್ಯತೆ ಶೇ.10ಕ್ಕೂ ಕಡಿಮೆ ಇತ್ತು. ದೇಹದ ಐದು ಪ್ರಮುಖ ಅಂಗಗಳ ಪೈಕಿ ನಾಲ್ಕು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಚಿಕಿತ್ಸೆ ನೀಡಿದ ತರುವಾಯ ಚೇತರಿಸಿಕೊಂಡರೂ ಆತನ ಮಿದುಳಿನಲ್ಲಿ ತೊಂದರೆ ಕಾಣಿಸಿಕೊಂಡಿತ್ತು.
ಮಿದುಳು ಕೆಲಸ ಮಾಡದೆ ಇರುವಂತಹ ಸಾಧ್ಯತೆ ಇತ್ತು. ಮಕ್ಕಳ ರೋಗಶಾಸ್ತ್ರ ತಜ್ಞ ಡಾ. ಕುಲದೀಪ್ ಪಿ ಅವರನ್ನೊಳಗೊಂಡ ವೈದ್ಯರ ತಂಡ ಹಾಗೂ ಸಿಬ್ಬಂದಿ ಪ್ರತಿ ಕ್ಷಣದಲ್ಲೂ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಿದುಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆರಂಭಿಸಿತು ಎಂದರು.