ಮೈಸೂರು: ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಾಗಿರುವ ಡೆಂಘೀ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸುವ ಜತೆಗೆ ಸೊಳ್ಳೆಗಳು ಹರಡದಂತೆ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ. ರಂದೀಪ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಘೀ ಜ್ವರವನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿದ್ದರೂ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗಲಿದ್ದು, ಹೀಗಾಗಿ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೆ ಡೆಂಘೀ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡುವ ಸ್ಥಳಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳು ಅಥವಾ ಸಂಬಂಧಪಟ್ಟ ಇಲಾಖೆ ಸಹಯೋಗದಲ್ಲಿ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಜೂ.10 ರಿಂದ ಕಾರ್ಯಗತವಾಗುವಂತೆ ನಿಗಾವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಇನ್ನೂ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರೋಗಿಗಳು ಭೇಟಿ ನೀಡಿದಾಗ ಡೆಂಘೀ ಲಕ್ಷಣಗಳು ಕಂಡುಬಂದ ಕೂಡಲೇ ರೋಗಿಗಳು ಆತಂಕಕ್ಕೊಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ರೋಗಿ ಆತಂಕಕ್ಕೊಳಗಾಗದಂತೆ ಉತ್ತಮ ರೀತಿಯ ಚಿಕಿತ್ಸೆ ನೀಡುವ ಬಗ್ಗೆ ಖಾಸಗಿ ಆಸ್ಪತ್ರೆ ಅವರಿಗೆ ತಿಳಿಸಲು, ಖಾಸಗಿ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಬೇಕು. ಮಾಧ್ಯಮಗಳಲ್ಲಿ ಡೆಂಘೀ ಜ್ವರದಿಂದ ವ್ಯಕ್ತಿ ಬಲಿಯಾದ ಸುದ್ದಿ ಬಂದೊಡನೆ, ಸಾರ್ವಜನಿಕರು ಆತಂಕಗೊಳ್ಳುವುದು ಸಹಜ. ಹೀಗಾಗಿ ತಪ್ಪು ಮಾಹಿತಿ ಜನರಿಗೆ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರಂ ಮಾತನಾಡಿ, ಡೆಂಘೀ ಜ್ವರ ಎಲಿಸಾ ಪರೀಕ್ಷೆಯಿಂದಷ್ಟೇ ದೃಢಪಡಲಿದ್ದು, ಈ ಪರೀಕ್ಷೆಯನ್ನು ಖಾಸಗಿ ಚಿಕಿತ್ಸಾಲಯಗಳಲ್ಲಿ ಮಾಡಿದರೂ ಸಹ ಅದರ ಮಾದರಿಯನ್ನು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಳುಹಿಸಿ ದೃಢಪಡಿಸಿಕೊಳ್ಳಬೇಕು. ಅಲ್ಲದೆ ಡೆಂಘೀ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿರುವ ಮೈಸೂರು ಗ್ರಾಮಾಂತರದಲ್ಲಿ ಮಹದೇವಪುರ, ತಿ.ನರಸಿಪುರದ ಬನ್ನೂರು, ನಂಜನಗೂಡಿನ ನೀಲಕಂಠನಗರ ಹಾಗೂ ಹುಣಸೂರಿನ ಶಬೀರ್ನಗರದಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆರ್‌ಸಿಎಚ್ ಅಧಿಕಾರಿ ಡಾ. ಗೋಪಿನಾಥ್ ಮಾತನಾಡಿ, ಮಿಷನ್ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮವು 2014ರ ಡಿಸೆಂಬರ್ 25ರಿಂದ ಪ್ರಾರಂಭ ಗೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮೂರು ವಿವಿಧ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಅಗತ್ಯವಿರುವ ರಕ್ಷಣಾ ಚುಚ್ಚುಮದ್ದುನಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು, 0-2 ವರ್ಷದ ಮಕ್ಕಳು ಹಾಗೂ 5-6 ವರ್ಷದ ಮಕ್ಕಳನ್ನು ಗುರುತಿಸಿ ಈ ಹಂತದ ಪಲಾನು¸ವಿಗಳಿಗೆ ಸಂಪೂರ್ಣ ರಕ್ಷಣ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಡಿಎಚ್‌ಒ ಡಾ.ಬಸವರಾಜು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಶುಪತಿ, ಡಿಡಿಪಿಐ ಎಚ್.ಆರ್.ಬಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಜಿಲ್ಲೆಯಲ್ಲಿ ಡೆಂಘೀ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಮೇ ಅಂತ್ಯದವರೆಗೆ 459 ಶಂಕಿತ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 71 ಪ್ರಕರಣಗಳು ಡೆಂಘೀ ಎಂದು ದೃಢಪಟ್ಟಿದೆ. 71 ಪ್ರಕರಣಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಎಲ್ಲ ಪ್ರಕರಣಗಳಲ್ಲೂ ರೋಗಿಗಳು ಗುಣಪಟ್ಟಿರುತ್ತಾರೆ.
-ಡಿ.ರಂದೀಪ್, ಜಿಲ್ಲಾಧಿಕಾರಿ.