ರಾಯಚೂರು: ಡೆಂಘೀ ಜ್ವರ ನಿಯಂತ್ರಣ ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಎಂ.ಡಿ. ಶಕೀರ್ ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಆವರಣದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡೆಂಘೀ ಜ್ವರದ ನಿಯಂತ್ರಣ ಸಾರ್ವಜನಿಕರ ಕೈಯಲ್ಲಿದೆ. ಮಾಹಿತಿ ಪಡೆದು ಡೆಂಘೀ ಜ್ವರದ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ಡೆಂಘೀ ಜ್ವರದ ಬಗ್ಗೆ ಬಹಳ ಜಾಗ್ರತೆ ವಹಿಸಬೇಕು. ಇದು ಈಡಿಸ್ ಇಜಿಪ್ಟೆç ಎಂಬ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಸೊಳ್ಳೆ ಹಗಲಿನಲ್ಲಿ ಕಚ್ಚುತ್ತದೆ. ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ ಮಾತನಾಡಿ, ಈ ರೋಗದ ಲಕ್ಷಣಗಳು, ರೋಗದ ಚಿಕಿತ್ಸೆ, ರೋಗದ ನಿಯಂತ್ರಣ ಕ್ರಮಗಳಾದ ಎಲ್ಲ ನೀರಿನ ತೊಟ್ಟಿಗಳು, ಡ್ರಂ, ಬ್ಯಾರೆಲ್‌ಗಳು, ಏರ್ ಕೂಲರ್‌ಗಳು ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟಯರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ, ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು ಪಾಲ್ಗೊಂಡಿದ್ದರು. ತಾಲೂಕು ಮೇಲ್ವಿಚಾರಕ ರಂಗರಾವ್ ಕುಲಕರ್ಣಿ ಐಕೂರ ನಿರೂಪಿಸಿದರು.