ದೇವನಹಳ್ಳಿ: ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲೆಯ ಆರೋಗ್ಯ ಇಲಾಖೆಗೆ ಸಾಂಕ್ರಾಮಿಕ ರೋಗಗಳು ಮತ್ತೂಂದು ಸವಾಲಾಗಿದೆ. ಡೆಂಘೀ, ಚಿಕೂನ್‌ಗುನ್ಯಾದಂತಹ ಕಾಯಿಲೆಗಳು ಮತ್ತಷ್ಟು ಭೀತಿ ಮೂಡಿಸಿವೆ. ಪ್ರತಿ ವರ್ಷ ಮಳೆಗಾಲ ಪ್ರಾರಂಭ ವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾಂಕ್ರಾಮಿಕರೋಗ ಹರಡುವಿಕೆ ತಡೆಗೆ ಕಾರ್ಯ ಪ್ರವೃತ್ತವಾಗುತ್ತಿದ್ದ ಜಿಲ್ಲಾ ಆರೋಗ್ಯ ಇಲಾಖೆ, ಕೊರೊನಾ ಹಾವಳಿ ನಡುವೆ ಇವುಗಳ ಬಗ್ಗೆ ಉದಾಸೀನ ತೋರುತ್ತಿದೆ.
ಪ್ರತಿ ವರ್ಷ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಇಲಾಖೆ ಈ ಬಾರಿ ಒತ್ತು ನೀಡಿದಂತೆ ಕಂಡು ಬರುತ್ತಿಲ್ಲ. ಈ ವರ್ಷ ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾ 07, ಡೆಂ 08, ಮಲೇರಿಯಾ 03 ಪ್ರಕರಣ ಗಳು ದಾಖಲಾಗಿವೆ.
ತಾಲೂಕುವಾರು: ಪ್ರಸಕ್ತ ವರ್ಷ ನೆಲಮಂಗಲ ತಾಲೂಕಲ್ಲಿ ಚಿಕೂನ್‌ಗುನ್ಯಾ 04, ಡೆಂಘೀ 02, ಹೊಸಕೋಟೆ ತಾಲೂಕಲ್ಲಿ ಚಿಕೂನ್‌ಗುನ್ಯಾ 03, ಡೆಂ 06, ದೇವನಹಳ್ಳಿ ಹಾಗೂ ದೊಡ್ಡ ಬಳ್ಳಾಪುರ ಚಿಕೂನ್‌ಗುನ್ಯಾ, ಡೆಂ ಪ್ರಕರಣಗಳು ಇಲ್ಲ. ದೊಡ್ಡ ಬಳ್ಳಾಪುರದಲ್ಲೇ ಮಲೇರಿಯಾ 03 ಪ್ರಕರಣಗಳು ಬೆಳಕಿಗೆ ಬಂದಿವೆ.ಕಳೆದ ವರ್ಷ 2019ರಲ್ಲಿ ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾ 18, ಡೆಂ 32, ಮಲೇರಿಯಾ 04 ಪ್ರಕರಣ ಗಳು ಕಂಡು ಬಂದಿತ್ತು. ಸ್ವಚ್ಛತೆ ಕಾಪಾಡುವುದು ಮುಖ್ಯ: ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಮುಖ್ಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು. ಮನೆಯ ಸುತ್ತ ಖಾಲಿ ಬಿದ್ದಿರುವ ಪ್ಲಾಸ್ಟಿಕ್ ಲೋಟ, ತೆಂಗಿನ ಚಿಪ್ಪು, ಟ್ಯೂಬ್ ಮತ್ತಿತರೆ ವಸ್ತಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ತೊಟ್ಟಿಗಳಲ್ಲಿ ಲಾರ್ವ ಉತ್ಪತ್ತಿಯಾಗದಂತೆ ತಡೆಯುವುದು ಮುಖ್ಯ ವಾಗಿದೆ. ಮೋಡ ಮುಸುಕಿದ ಶೀತ ಗಾಳಿಯ ವಾತಾವರಣ ಡೆಂಘೀ ಉಲ್ಬಣಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಮುಖ್ಯವಾಗಿ ಡೆಂಘೀ, ಚಿಕೂನ್‌ಗುನ್ಯಾ ಲಕ್ಷಣಗಳಲ್ಲಿ ಜ್ವರ ಪ್ರಮುಖ ಲಕ್ಷಣವಾಗಿದೆ. ಸಣ್ಣ ಜ್ವರ ಕಾಣಿಸಿಕೊಂಡರೂ ಜನರು ಭಯ ಭೀತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವುದೇ ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕೋವಿಡ್, ಡೆಂಘೀ, ಚಿಕೂನ್‌ಗುನ್ಯಾ ಸಾಂಕ್ರಾಮಿಕ ರೋಗವಾದರೂ ನಿರ್ಲಕ್ಷ್ಯ ಮಾಡಬಾರದು. ಕೋವಿಡ್ ದೊಂದಿಗೆ ಸಾಂಕ್ರಾಮಿಕ ಹರಡುವಿಕೆ ನಿಯಂತ್ರಣಕ್ಕೂ ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಗಳನ್ನು ರೂಪಿಸಿ ಶ್ರಮಿಸುತ್ತಿದೆ.
–ಡಾ.ಕೆ.ಮಂಜುಳಾ, ಜಿಲ್ಲಾ ಆರೋಗ್ಯಾಧಿಕಾರಿ
–ಎಸ್.ಮಹೇಶ್