ರಾಯಚೂರು: ಜಿಲ್ಲೆಯಲ್ಲಿ ಡೆಂಘೀ ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ. ಆದರೆ, ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದ್ದ ಸ್ಥಳೀಯ ಸಂಸ್ಥೆಗಳು ಮಾತ್ರ ಸ್ವಚ್ಛತೆ ಗೆ ಆದ್ಯತೆ ನೀಡದೆ ರೋಗ ಉಲ್ಬಣಕ್ಕೆ ಕಾರಣವಾಗುತ್ತಿವೆ. ಕೇವಲ ನಗರ, ಪಟ್ಟಣ ಪಂಚಾಯಿತಿಗಳು ಮಾತ್ರವಲ್ಲದೇ ಗ್ರಾಪಂಗಳು ಕೂಡ ಹೊಣೆಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿವೆ.
ಗ್ರಾಮದಲ್ಲಿ ಚರಂಡಿ ನೀರು ವ್ಯವಸ್ಥೆ ಬೇಕಾಬಿಟ್ಟಿಯಾಗಿ ನಿರ್ವಹಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕೊಚ್ಚೆ ನೀರು ಒಂದೆಡೆ ಶೇಖರಣೆಯಾಗುತ್ತಿದ್ದು, ಇದರಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಡೆಂಘೀಯಂಥ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತಾಲೂಕಿನ ಗೋನಾಲ ಗ್ರಾಮದ ಶಾಲೆ ಹಿಂಭಾಗವೇ ಚರಂಡಿ ನೀರು ಶೇಖರಣೆಗೊಂಡಿದೆ. ಬಹಳ ದಿನಗಳಿಂದ ನೀರು ಸಂಗ್ರಹಗೊಂಡಿದ್ದರೂ ಜನಪ್ರತಿನಿ ಧಿ ಗಳಾಗಲಿ, ಅ ಧಿಕಾರಿಗಳಾಗಲಿ ಕ್ರಮಕ್ಕೆ ಮುಂದಾಗಿಲ್ಲ. ಈಗ ತಾನೆ ಶಾಲೆಗಳು ಪುನಾರಂಭಗೊಂಡಿದ್ದು, ಇಂಥ ವಾತಾವರಣ ಇರುವುದರಿಂದ ಮತ್ತೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಇನ್ನೂ ಗ್ರಾಪಂ ಕೇಂದ್ರವಾದ ಮರ್ಚೆಟಾØಳ ಗ್ರಾಮದಲ್ಲೂ ಇಂಥದ್ದೇ ದುಃಸ್ಥಿತಿ ಏರ್ಪಟ್ಟಿದೆ. ಚರಂಡಿಗಳೆಲ್ಲ ತುಂಬಿದ್ದು, ಕೊಚ್ಚೆ ನೀರು ಮುಂದೆ ಹರಿದು ಹೋಗಲು ಕೂಡ ಆಗದಂಥ ಸ್ಥಿತಿ ಇದೆ. ಅಲ್ಲದೇ, ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ಪ್ರಯಾಣಿಕರು ಪ್ರಯಾಸದಲ್ಲೇ ಓಡಾಡಬೇಕಿದೆ.
ಇದೇ ಊರಲ್ಲಿ ಪಂಚಾಯಿತಿ ಇದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದರೆ, ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅ ಧಿಕಾರಿಗಳ ವಿರುದ್ಧ ದೂರುತ್ತಾರೆ. ಮತ್ತೂಂದು ಪಂಚಾಯಿತಿ ಕೇಂದ್ರವಾದ ಜೇಗರಕಲ್ ಗ್ರಾಮದಲ್ಲಿ ಇದೇ ಪರಿಸ್ಥಿತಿ ಏರ್ಪಟ್ಟಿದೆ. ಚರಂಡಿ ನೀರೆಲ್ಲ ಒಂದೆಡೆ ಶೇಖರಣೆಗೊಂಡಿದ್ದು, ಮುಂದೆ ಹರಿದು ಹೋಗಲು ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆ ಹಾದು ಹೋಗಿದ್ದು, ಅದನ್ನು ಲೋಕೋಪಯೋಗಿ ಇಲಾಖೆಯೇ ನಿರ್ಮಿಸಬೇಕು ಎನ್ನುವ ಕಾರಣಕ್ಕೆ ಸಿಸಿ ರಸ್ತೆ ಹಾಕಿಲ್ಲ. ಇದರಿಂದ ಅತ್ತ ರಸ್ತೆಯೂ ಇಲ್ಲ, ಇತ್ತ ಚರಂಡಿಯೂ ಇಲ್ಲ ಎನ್ನುವ ಸ್ಥಿತಿಯಿಂದ ಚರಂಡಿ ನೀರೆಲ್ಲ ಕಂಡ-ಕಂಡಲ್ಲಿ ಸಂಗ್ರಹಗೊಳ್ಳುತ್ತಿದೆ. ಮನೆ ಮುಂದೆಯೇ ನೀರು ಸಂಗ್ರಹಗೊಂಡಿದ್ದರೂ ಕೇಳುವವರಿಲ್ಲ ಎನ್ನುವಂತಾಗಿದೆ. ಅವೈಜ್ಞಾನಿಕ ಚರಂಡಿಗಳು: ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ, ಚರಂಡಿ ಕಾಮಗಾರಿಗಳನ್ನು ಮಾತ್ರ ಅವೈಜ್ಞಾನಿಕವಾಗಿ ಮಾಡುವುದೇ ಸಮಸ್ಯೆಗೆ ಕಾರಣವಾಗುತ್ತಿದೆ. ಚರಂಡಿಯಲ್ಲಿ ಹಾದು ಹೋಗುವ ನೀರಿಗೆ ಸೂಕ್ತ ಮಾರ್ಗ ನಿರ್ಮಿಸದೆ ಊರ ಮುಂದೆಯೇ ಬಿಡಲಾಗುತ್ತಿದೆ. ಎಲ್ಲಿಯವರೆಗೂ ಸಿಸಿ ರಸ್ತೆ ಇದೆಯೋ ಅಲ್ಲಿಯವರೆಗೂ ಮಾತ್ರ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ಕೊಚ್ಚೆ ನೀರು ಮುಂದೆ ಹೋಗದೆ ಅಲ್ಲಿಯೇ ಸಂಗ್ರಹಗೊಳ್ಳುತ್ತಿದೆ.
ನಮ್ಮೂರ ಶಾಲೆಯ ಹಿಂಭಾಗವೇ ಚರಂಡಿ ನೀರು ಅನೇಕ ದಿನಗಳಿಂದ ಸಂಗ್ರಹಗೊಂಡಿದೆ. ಈಗ ತಾನೆ ಶಾಲೆಗಳು ಶುರುವಾಗಿದ್ದು, ಅದನ್ನು ಸ್ವತ್ಛಗೊಳಿಸುವಂತೆ ಪಂಚಾಯಿತಿ ಅಧಿ ಕಾರಿಗಳಿಗೆ ತಿಳಿಸಿದರೆ ಮಾಡುತ್ತಿಲ್ಲ. ಈಚೆಗೆ ಪಿಡಿಒ ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದಾರೆ. ಹೀಗಾದರೆ ನಾವು ಯಾರಿಗೆ ದೂರಬೇಕು. ಇನ್ನಾದರೂ ನಮ್ಮೂರ ಸಮಸ್ಯೆ ನಿವಾರಣೆಗೆ ಮುಂದಾಗಲಿ.
ಸುಧಾಕರ, ಗೋನಾಲ
ಕಳೆದ ಕೆಲ ದಿನಗಳಿಂದ ನಾನು ದೀರ್ಘಾವ ಧಿ ರಜೆಯಲ್ಲಿದ್ದೆ. ಈಚೆಗಷ್ಟೇ ಕೆಲಸಕ್ಕೆ ಮರಳಿದ್ದೇನೆ. ಅನಗತ್ಯ ಕರೆಗಳ ಕಿರಿಕಿರಿ ಹೆಚ್ಚಾಗಿದೆ. ದಿನ ಬೆಳಗ್ಗೆ 6ಗಂಟೆಯಿಂದಲೇ ಕರೆಗಳನ್ನು ಮಾಡುತ್ತಾರೆ. ಇದರಿಂದ ಕೆಲವೊಂದು ಕರೆಗಳನ್ನು ಸ್ವೀಕರಿಸಲು ಆಗಿಲ್ಲ. ಗೋನಾಲ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿಲ್ಲ. ಕೂಡಲೇ ನಮ್ಮ ಕಾರ್ಯದರ್ಶಿಯನ್ನು ಕಳುಹಿಸಿ ಸಮಸ್ಯೆ ನಿವಾರಣೆಗೆ ಸೂಚಿಸಲಾಗುವುದು.
ಮಮತಾ, ಪಿಡಿಒ, ವೆಂಕಟಾಪುರ ಗ್ರಾಪಂ