Advertisement

ಹಾವೇರಿ ಜಿಲ್ಲೆಯಲ್ಲಿ ಮತ್ತೆ ಶುರುವಾಯ್ತು ಡೆಂಘೀ ಆತಂಕ

07:56 PM Aug 12, 2021 | Team Udayavani |

ವಿಶೇಷ ವರದಿ

Advertisement

 ಹಾವೇರಿ: “ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ’ ಎಂಬಂತೆ ಅತಿವೃಷ್ಟಿ, ನೆರೆಯಿಂದ ತತ್ತರಿಸಿದ್ದ ಜಿಲ್ಲೆಯ ಜನರು ಈಗ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ.

ಮಳೆಯಿಂದಾಗಿ ಎಲ್ಲೆಂದರಲ್ಲಿ ನೀರು ನಿಂತು, ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ನೂರಾರು ಜನರಲ್ಲಿ ಶಂಕಿತ ಡೆಂಘೀ ಹಾಗೂ ಚಿಕೂನ್‌ ಗುನ್ಯಾ ರೋಗ ಪತ್ತೆಯಾಗುತ್ತಿವೆ. ಜಿಲ್ಲಾದ್ಯಂತ ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಸ್ವತ್ಛತೆಗೆ ಕ್ರಮ ಕೈಗೊಳ್ಳದ ಕಾರಣ ಸೊಳ್ಳೆ ಉತ್ಪತ್ತಿಯಾಗುತ್ತಿವೆ.

ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಅನುಕೂಲವಾಗಿದೆ. ಎರಡು ವರ್ಷಗಳಿಂದ ನಿಯಂತ್ರಣದಲ್ಲಿದ್ದ ಡೆಂಘೀ ಜ್ವರ ಮತ್ತೆ ಜಿಲ್ಲೆಯ ಜನರನ್ನು ಆತಂಕಕ್ಕೆ ನೂಕಿದೆ.

ಚಿಕೂನ್‌ ಗುನ್ಯಾದಿಂದ ಅನೇಕರು ಕುಂಟುತ್ತಲೇ ಆಸ್ಪತ್ರೆಗೆ ಬರುವಂತಾಗಿದೆ. ಜಿಲ್ಲೆಯ ವಿವಿಧೆಡೆ ಡೆಂಘೀ ಜ್ವರ ವ್ಯಾಪಿಸಿದೆ. ಇದಲ್ಲದೇ ಜನರು ಅತಿಸಾರ, ವಿಷಮಶೀತ ಜ್ವರ, ಕರುಳು ಬೇನೆ, ಮಲೇರಿಯಾ ರೋಗಗಳಿಂದ ನರಳುವಂತಾಗಿದೆ.

Advertisement

53 ಡೆಂಘೀ ಪ್ರಕರಣ ದೃಢ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವುದು ಸಾಮಾನ್ಯವಾಗಿದ್ದು, ಜಿಲ್ಲೆಯಲ್ಲಿ ನೂರಾರು ಜನರು ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ. ಜುಲೈ ಅಂತ್ಯದವರೆಗೆ 53 ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ ಕಳೆದ ತಿಂಗಳೇ 19 ಖಚಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೇ, 182 ಶಂಕಿತ ಡೆಂಘೀ ಕಾಯಿಲೆ ಇರುವುದು ಪತ್ತೆಯಾಗಿದೆ. ಡೆಂಘೀ ಜ್ವರ ಹತೋಟಿಗೆ ಆರೋಗ್ಯ ಇಲಾಖೆ ವಹಿಸುತ್ತಿರುವ ಮುನ್ನೆಚ್ಚರಿಕೆ ಕ್ರಮ ಸಾಲುತ್ತಿಲ್ಲ ಎಂಬ ಆರೋಪವಿದೆ. ತಕ್ಷ‌ಣ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸ್ವತ್ಛತೆಗೆ ಕ್ರಮ ಕೈಗೊಂಡು ಈ ಕುರಿತು ಜಾಗೃತಿ ಮೂಡಿಸಬೇಕಿದೆ.

ಚಿಕೂನ್ಗುನ್ಯಾಕ್ಕೆ ಹೈರಾಣು: ನೆರೆ ಹಾವಳಿ ತಗ್ಗಿದ ಬಳಿಕ ಗ್ರಾಮೀಣ ಭಾಗದಲ್ಲಿ ಚಿಕೂನ್‌ ಗುನ್ಯಾ ಹಾವಳಿ ಜೋರಾಗಿದೆ. ಚಿಕೂನ್‌ ಗುನ್ಯಾಕ್ಕೆ ಅನೇಕ ಗ್ರಾಮಗಳಲ್ಲಿ ಜನರು ಹೈರಾಣಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳೆರಡೂ ಕಡೆ ಚಿಕೂನ್‌ ಗುನ್ಯಾ ಕಾಯಿಲೆ ತೀವ್ರಗೊಳ್ಳುತ್ತಿದೆ. ಹಾನಗಲ್ಲ, ಹಿರೇಕೆರೂರು, ಹಾವೇರಿ ತಾಲೂಕುಗಳ ಹತ್ತಾರು ಗ್ರಾಮಗಳಲ್ಲಿ ಕಾಯಿಲೆ ಉಲ್ಬಣಗೊಂಡಿದೆ. ಕೃಷಿ ಕಾರ್ಯ ಮಾಡಲಾಗದೇ ಅನೇಕ ರೈತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯಿಂದ ಬಳಲುತ್ತಿರುವ ನೂರಾರು ಜನರು ಆಸ್ಪತ್ರೆಗಳಿಗೆ ನಿತ್ಯವೂ ಬರುತ್ತಿದ್ದಾರೆ. ಇದುವರೆಗೆ 13 ಚಿಕೂನ್‌ ಗುನ್ಯಾ ಪ್ರಕರಣ ದೃಢಪಟ್ಟಿದ್ದರೆ, ನೂರಾರು ಜನರು ಶಂಕಿತ ಜ್ವರದಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 74 ಶಂಕಿತ ಪ್ರಕರಣ ಪತ್ತೆಯಾಗಿದೆ.

ಶೀತ, ಜ್ವರ ಹೆಚ್ಚು: ಕಲುಷಿತ ನೀರು ಸೇವನೆ ಮುಂತಾದ ಕಾರಣದಿಂದ ಜಿಲ್ಲೆಯಲ್ಲಿ ಕರುಳು ಬೇನೆ ರೋಗವೂ ವ್ಯಾಪಿಸಿದೆ. ನೂರಾರು ಜನರು ಕರಳು ಬೇನೆ ರೋಗದಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಸೇವನೆ, ಗಾಳಿಯಿಂದ ಸಾಂಕ್ರಾಮಿಕ ರೋಗಗಳು ಜಿಲ್ಲೆಯನ್ನು ಆಕ್ರಮಿಸುತ್ತಿವೆ. ವಿಷಮಶೀತ ಜ್ವರವೂ ಹೆಚ್ಚುತ್ತಿದೆ. ಆದರೆ, ಈ ಸಲ ಮಲೇರಿಯಾ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ಅ ಧಿಕಾರಿಗಳು ಹೇಳುತ್ತಿದ್ದಾರೆ. ಅತಿಸಾರದಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ದಢಾರ್‌, ಕರುಳು ಬೇನೆಯಿಂದ ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು, ವೃದ್ಧರಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತಿದ್ದು, ಸ್ವತ್ಛತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next