Advertisement

ವಿರೋಧದ ನಡುವೆ ಪ್ರದರ್ಶನ: ಕೇರಳ, ಹೈದರಾಬಾದ್‌ನಲ್ಲಿ ವಿವಾದಿತ ಸಾಕ್ಷ್ಯಚಿತ್ರ ವೀಕ್ಷಣೆ ; ಬಿಜೆಪಿ ಆಕ್ಷೇಪ

12:16 AM Jan 25, 2023 | Team Udayavani |

ತಿರುವನಂತಪುರ/ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಬಿಸಿ ಸಿದ್ಧಪಡಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರ “ಇಂಡಿಯಾ: ದ ಮೋದಿ ಕ್ವೆಶ್ಚನ್‌’ ಅನ್ನು ಕೇರಳ ಮತ್ತು ಹೈದರಾಬಾದ್‌ನಲ್ಲಿ ಪ್ರದರ್ಶಿಸಲಾಗಿದೆ. ಕೇರಳ ರಾಜಧಾನಿ ತಿರುವನಂತ ಪುರದ ಪೂಜಪುರ ಎಂಬಲ್ಲಿ  ಮಂಗಳವಾರ ಸಂಜೆ ಡಿವೈಎಫ್ಐನಿಂದ ಅದನ್ನು ಪ್ರದರ್ಶಿಸಲಾಗಿದೆ. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Advertisement

ಇದೇ ವೇಳೆ, ವಿವಾದಿತ ಸಾಕ್ಷ್ಯಚಿತ್ರವನ್ನು ಕೇರಳದ ಹಲವಡೆ ಪ್ರದರ್ಶಿಸಲಾಗಿದೆ. ಇದರಿಂದ ಕ್ರುದ್ಧಗೊಂಡ ಬಿಜೆಪಿ ಯುವ ಮೋರ್ಚಾ ದೇವರ ಸ್ವಂತ ನಾಡಿನ ಹಲವು ಸ್ಥಳಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದೆ. ಅಚ್ಚರಿಯ ಅಂಶವೆಂದರೆ ಬಿಜೆಪಿ ನಡೆಸಿದ ಪ್ರತಿಭಟನೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಎ.ಕೆ.ಆ್ಯಂಟನಿ ಪುತ್ರ ಅನಿಲ್‌ ಬೆಂಬಲ ನೀಡಿದ್ದಾರೆ. “ದೇಶದ ಆಂತರಿಕ ವಿಚಾರಗಳಲ್ಲಿ ಬ್ರಿಟನ್‌ ಏಕೆ ಮಧ್ಯಪ್ರವೇಶ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.

ಎಲ್ಲೆಲ್ಲಿ ಪ್ರತಿಭಟನೆ?: ಪಾಲಕ್ಕಾಡ್‌, ಎರ್ನಾಕುಳಂ, ತಿರುವನಂತಪುರದ ಹಲವು ಕಡೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಲಾಗಿದೆ ಎಂಬ ವರದಿಗಳು ಇವೆ. ಅದಕ್ಕೆ ಪೂರಕವಾಗಿ ಬಿಜೆಪಿ ಯುವ ಮೋರ್ಚಾದ ಮುಖಂಡರು, ಕಾರ್ಯಕರ್ತಕರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ತಿರುವನಂತಪುರದ ಪೂಜಪುರ ಎಂಬಲ್ಲಿ ಡಿವೈಎಫ್ಐ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಬಿಗುವಿನ ವಾತಾವರಣ ಉಂಟಾಗಿದೆ. ಎರ್ನಾಕುಳಂನ ಸರಕಾರಿ ಕಾನೂನು ಕಾಲೇಜಿನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

ಸಿಎಂಗೆ ಬಿಜೆಪಿ ದೂರು: ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್‌ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದರು. ಜತೆಗೆ ಪರವಾನಿಗೆ ನೀಡಬಾರದು ಎಂದು ಮನವಿ ಮಾಡಿದ್ದರು. ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌ ಕೂಡ ಅವಕಾಶ ನೀಡದಂತೆ ಮನವಿ ಮಾಡಿದ್ದರು. ಕೇಂದ್ರ ಸರಕಾರ ಈಗಾಗಲೇ ವಿವಾದಿತ ಸಾಕ್ಷ್ಯಚಿತ್ರಗಳ ಲಿಂಕ್‌ ತೆಗೆದು ಹಾಕುವಂತೆ ಯೂಟ್ಯೂಬ್‌ ಮತ್ತು ಟ್ವಿಟರ್‌ಗೆ ಆದೇಶ ನೀಡಿದೆ.

ವಿದ್ಯುತ್‌ ಕಡಿತ: ಹೊಸದಿಲ್ಲಿಯ ಜವಾಹರ್‌ ಲಾಲ್‌ ನೆಹರೂ ವಿವಿ(ಜೆಎನ್‌ಯು)ಯಲ್ಲಿ ಕೂಡ ಮಂಗಳ ವಾರ ರಾತ್ರಿ ಸಾಕ್ಷ್ಯ ಚಿತ್ರ ಪ್ರದರ್ಶಿಸುವ ಯತ್ನ ನಡೆಸಲಾ ಗಿದೆ. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಇಂಟರ್‌ನೆಟ್‌, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ.

Advertisement

ಹೈದರಾಬಾದ್‌ನಲ್ಲಿ ಪ್ರದರ್ಶನ: ಹೈದರಾಬಾದ್‌ನಲ್ಲಿ ಇರುವ ಕೇಂದ್ರೀಯ ವಿವಿಯ ಕ್ಯಾಂಪಸ್‌ನಲ್ಲಿ ರವಿವಾರ ಕೆಲವು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಾರೆ. ವಿವಿಯ ಆಡಳಿತ ಮಂಡಳಿ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತಾ ವಿಭಾಗದಿಂದ ಒಟ್ಟಾರೆ ಬೆಳವಣಿಗೆ ಬಗ್ಗೆ ಸಮಗ್ರ ವರದಿ ಕೇಳಿದೆ. ಈ ಬಗ್ಗೆ ಅನುಮತಿಯನ್ನೂ ಪಡೆಯಲಾಗಿಲ್ಲ ಎಂಬ ವಿಚಾರ ದೃಢಪಟ್ಟಿದೆ. “ಫ್ರೆಟರ್ನಿಟಿ ಮೂವ್‌ಮೆಂಟ್‌- ಎಚ್‌ಸಿಯು ಯುನಿಟ್‌’ ಎಂಬ ಸಂಘಟನೆಯ ಅಡಿಯಲ್ಲಿ ಅದನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ಸಂಘಟನೆ ಟ್ವೀಟ್‌ ಕೂಡ ಮಾಡಿದೆ. ಬೆಳವಣಿಗೆ ಬಗ್ಗೆ ಎಬಿವಿಪಿ ವಿವಿಯ ಕುಲಸಚಿವರಿಗೆ ದೂರು ನೀಡಿದೆ. ಬೆಳವಣಿಗೆ ಬಗ್ಗೆ ಯಾರೂ ದೂರು ನೀಡದ ಕಾರಣ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಬಿಸಿ ಕಾರ್ಯಕ್ರಮ ನಿರ್ಲಕ್ಷಿಸಿದ ಅಮೆರಿಕ!
ಮೋದಿಯನ್ನು ಟೀಕಿಸಿ ಮಾಡಿರುವ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತನಗೆ ಗೊತ್ತಿಲ್ಲ. ಆದರೆ ಭಾರತ-ಅಮೆರಿಕಗಳನ್ನು ಒಗ್ಗೂಡಿಸಿರುವ ಪ್ರಜಾಪ್ರಭುತ್ವದ ಮೌಲ್ಯಗಳ ಮಾತ್ರ ಬಗ್ಗೆ ಮಾತ್ರ ಗೊತ್ತಿದೆ… ಹೀಗೆಂದು ಪ್ರತಿಕ್ರಿಯೆ ನೀಡಿರುವುದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್‌. ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಬಾಂಧವ್ಯ ಹೊಂದಿದೆ. ಎರಡೂ ದೇಶಗಳ ಪ್ರಜಾಪ್ರಭುತ್ವದಲ್ಲಿ ಕಂಡುಬರುವ ಮೌಲ್ಯಗಳೇ ಇದಕ್ಕೆ ಆಧಾರ.  ಬಿಬಿಸಿಯ ಕಾರ್ಯಕ್ರಮದ ಬಗ್ಗೆ ಏನೂ ಮಾಹಿತಿ ಇಲ್ಲ. ಎಂದಿದ್ದಾರೆ. ಈ ಮೂಲಕ ಸಾಕ್ಷ್ಯಚಿತ್ರವನ್ನು  ಪರೋಕ್ಷವಾಗಿ ನಿರ್ಲಕ್ಷಿಸಿದ್ದಾರೆ. ಈ ಬಗ್ಗೆ ಪಾಕಿಸ್ಥಾನದ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next